ಬೆಂಗಳೂರು,ಮಾ.29- ದೆಹಲಿಯಿಂದ ವಾಪಸ್ಸಾದ ಬಳಿಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇಂದು ಸಮಾಜಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ.
ಸಿದ್ದರಾಮಯ್ಯನವರ ಬಣದ ಆಪ್ತರೆಂದು ಗುರಿತಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಮತ್ತು ಮಹದೇವಪ್ಪ ಅವರ ಭೇಟಿ ಅದರಲ್ಲೂ ದೆಹಲಿಯಿಂದ ವಾಪಸ್ಸಾದ ಬಳಿಕ ಪರಸ್ಪರ ಭೇಟಿಯಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, ನಾನು ಮತ್ತು ಮಹದೇವಪ್ಪ 30 ವರ್ಷಗಳಿಂದಲೂ ಪರಸ್ಪರ ಭೇಟಿಯಾಗುತ್ತಲೇ ಇರುತ್ತೇವೆ. ಬಹಳಷ್ಟು ಸಚಿವರ ಜೊತೆಯೂ ಈ ರೀತಿ ಚರ್ಚೆಯಾಗುತ್ತಿರುತ್ತವೆ. ವಿಶೇಷತೆ ಇಲ್ಲ ಎಂದರು.
ಈ ಮೊದಲು ಕೆಪಿಸಿಸಿಗೆ ಪೂರ್ಣಾವಧಿಯ ಅಧ್ಯಕ್ಷರು ಬೇಕು ಎಂದು ಬೇಡಿಕೆ ಮುಂದಿಟ್ಟಿದ್ದ ಸತೀಶ್ ಜಾರಕಿಹೊಳಿ, ಈಗ ಉಲ್ಟಾ ಹೊಡೆದಿದ್ದು, ಅಧ್ಯಕ್ಷರಿದ್ದಾರೆ, ಅವರು ನಡೆಸುತ್ತಿದ್ದಾರೆ ಎಂದು ಹಾರಿಕೆಯ ಉತ್ತರ ನೀಡಿದರು.
ಹನಿಟ್ರ್ಯಾಪ್ ಬಗ್ಗೆ ಸಚಿವ ರಾಜಣ್ಣ ನೀಡಿರುವ ದೂರಿನಲ್ಲಿ ಬೆಂಗಳೂರಿನ ಪ್ರಭಾವಿ ನಾಯಕರಿದ್ದಾರೆ ಎಂದು ಪ್ರಸ್ತಾಪಿಸಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ ಯಾರ ಕೈವಾಡ ಎಂಬುದನ್ನು ಕಂಡುಹಿಡಿಯುವುದು ಪೊಲೀಸರ ಕರ್ತವ್ಯ. ನಾವು ಹೇಳಲು ಬರುವುದಿಲ್ಲ.
ರಾಜಣ್ಣ ಹೆಸರಿಸಿರುವಂತೆ ನಾಯಕರನ್ನು ಹುಡುಕಲು ಸಮಯ ಬೇಕಾಗುತ್ತದೆ. ದೇಶಾದ್ಯಂತ ಬಹಳಷ್ಟು ಮಂದಿಯಿದ್ದಾರೆ. ಬಹಳಷ್ಟು ಘಟನೆಗಳು ಕೂಡ ನಡೆದಿವೆ. ಇಂತವರೇ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.