ಬೆಂಗಳೂರು,ಡಿ.12- ವಕ್ಫ್ ಆಸ್ತಿ ಕಬಳಿಕೆ ಆರೋಪದ ಕೇಳಿ ಬಂದ ಹಿನ್ನೆಲೆಯಲ್ಲಿ ವಸತಿ ಸಚಿವ ಜಮೀರ್ ಆಹಮದ್ ಖಾನ್ ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅನ್ವರ್ ಪಾಷಾ ಅವರು ವಕ್ಫ್ ಆಸ್ತಿಯನ್ನು ಅತಿಕ್ರಮ ಮಾಡಿದ್ದಾರೆ ಎಂದು ಮುಸ್ಲಿಂ ಮುಖಂಡ ಇಮ್ತಿಯಾಜ್ ಎಂಬುವವರು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರದುರ್ಗದ ಅಗಸನಕಲ್ಲು ರಿ. ಸರ್ವೆ ನಂ 24 ರಲ್ಲಿನ 6 ಎಕರೆ ಖಬರ್‌ಸ್ತಾನ್ ಜಾಗವನ್ನು ಅನ್ವರ್ ಪಾಷಾ ಅತಿಕ್ರಮ ಮಾಡಿದ್ದಾರೆ ಎಂದು ಆರೋಪಿಸಿ, ಇಮ್ತಿಯಾಜ್ ಫೇಸ್‌ಬುಕ್ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರು ಸಚಿವ ಜಮೀರ್‌ಗೆ ಮಾಹಿತಿ ನೀಡಿದ್ದಾರೆ.
ಅನ್ವರ್ ಪಾಷಾ ಬೆನ್ನಿಗೆ ನಿಂತ ಜಮೀರ್ ಅವರು ಇಮ್ತಿಯಾಜ್ ಎಂಬವರಿಗೆ ಸಚಿವ ಜಮೀರ್ ಕರೆ ಮಾಡಿ ಆವಾಜ್ ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇಮ್ತಿಯಾಜ್ ಎಂಬುವರಿಗೆ ಸಚಿವ ಜಮೀರ್ ಕರೆ ಮಾಡಿ, ಕೆ.ಅನ್ವರ್ ಪಾಷಾಗೆ ಕರೆ ಮಾಡಿ ಕ್ಷಮೆ ಕೇಳು, ಅನ್ವರ್ ಜೊತೆಗೆ ಇರು. ಕ್ಷಮೆ ಕೇಳಿ ವೀಡಿಯೋ ಮಾಡಿ ಬಿಡು, ವೀಡಿಯೋ ಮಾಡಿ ನನಗೂ ಕಳಿಸು ಎಂದು ಜಮೀರ್ ಹೇಳಿದ್ದಾರೆ ಎನ್ನುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.