Tuesday, March 18, 2025
Homeರಾಜ್ಯರಾಜ್ಯಸರ್ಕಾರದ ಗೌರವವನ್ನು ಸಚಿವರೇ ಹಾಳು ಮಾಡುತ್ತಿದ್ದಾರೆ : ಸ್ಪೀಕರ್‌ ಗರಂ

ರಾಜ್ಯಸರ್ಕಾರದ ಗೌರವವನ್ನು ಸಚಿವರೇ ಹಾಳು ಮಾಡುತ್ತಿದ್ದಾರೆ : ಸ್ಪೀಕರ್‌ ಗರಂ

Ministers are ruining the honor of the state government: Speaker Garam

ಬೆಂಗಳೂರು,ಮಾ.18- ರಾಜ್ಯಸರ್ಕಾರದ ಗೌರವವನ್ನು ಸಚಿವರೇ ಹಾಳು ಮಾಡುತ್ತಿ ದ್ದಾರೆ ಎಂದು ಸಭಾಧ್ಯಕ್ಷ ಯು.ಟಿ.ಖಾದರ್‌ ವಿಧಾನಸಭೆಗೆ ತಿಳಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕುರಿತು ವಿರೋಧಪಕ್ಷದ ನಾಯಕ ಆರ್‌. ಅಶೋಕ, ವಿಷಯ ಪ್ರಸ್ತಾಪಿಸುತ್ತಾ ಸದನದಲ್ಲಿ ಸಚಿವರಿಲ್ಲ. ಇದ್ದ ಒಬ್ಬ ಸಚಿವರು ಎದ್ದು ಹೊರ ನಡೆದಿದ್ದಾರೆ.

ಒಬ್ಬಳೇ ಪದಾವತಿ ಎನ್ನುವಂತಾಗಿದೆ ಎಂದು ಆಕ್ಷೇಪಿಸಿದರು.ಆಗ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಸರ್ಕಾರದ ಕಾರ್ಯಕಲಾಪಗಳು ನಡೆಯಲು ಅವಕಾಶ ಮಾಡಿಕೊಡಿ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.ಆ ಸಂದರ್ಭದಲ್ಲಿ ಮಾತನಾಡಿದ ಸಭಾಧ್ಯಕ್ಷರು, ನೀವೊಬ್ಬ ಸಚಿವರು ಸದನದಲ್ಲಿದ್ದೀರಿ. ಮಂತ್ರಿಗಳು ಸದನದಲ್ಲಿರಬೇಕು. ಗೈರು ಹಾಜರಿಯಾಗುವುದನ್ನು ಸಹಿಸುವುದಿಲ್ಲ. ಸರಿಯಾದ ಸಮಯಕ್ಕೆ ಸದನಕ್ಕೆ ಬಾರದೇ ಸರ್ಕಾರದ ಗೌರವವನ್ನು ತೆಗೆಯುತ್ತಿದ್ದಾರೆ ಎಂದು ಚಾಟಿ ಬೀಸಿದರು.

ಸದನಕ್ಕೆ ಸಕಾಲಕ್ಕೆ ಬಾರದಿದ್ದ ಮೇಲೆ ಏಕೆ ಮಂತ್ರಿಯಾಗಬೇಕು?, ಸರ್ಕಾರದ ಪರವಾಗಿ ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡಲಾಗದಿದ್ದರೆ ಏಕೆ ಸಚಿವರಾಗಬೇಕು? ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ವಿರೋಧಪಕ್ಷದವರು ಹೇಳುವುದು ತಪ್ಪೆಂದು ಹೇಳುತ್ತಿಲ್ಲ. ಸದನದಲ್ಲಿ ಸಚಿವರು ಇರಬೇಕೆಂದು ಅವರು ಕೇಳುವುದು ಸರಿಯಿದೆ. ಮುಖ್ಯಮಂತ್ರಿ ಇದ್ದಾಗ ಎಲ್ಲಾ ಸಚಿವರೂ ಬರುತ್ತಾರೆ. ಅವರಿಲ್ಲದಿದ್ದಾಗಲೂ ಎಲ್ಲಾ ಸಚಿವರಿರಬೇಕು. ಮುಖ್ಯಮಂತ್ರಿ ಬೆಂಬಲಕ್ಕೆ ಸಚಿವರು ನಿಲ್ಲುವುದು ಬೇಕಾಗಿಲ್ಲ. ಅವರು ಸಮರ್ಥಿಸಿಕೊಳ್ಳುತ್ತಾರೆ ಎಂದು ಕಾನೂನು ಸಚಿವರನ್ನುದ್ದೇಶಿಸಿ ಹೇಳಿದರು. ಆಗ ಅಶೋಕ ಮಾತನಾಡಿ, ಹಾಳೂರಿಗೆ ಉಳಿದವನೊಬ್ಬ ಗೌಡ ಎಂದು ಹೇಳುತ್ತೇನೆ. ಪದಾವತಿ ಎಂಬುದನ್ನು ಬಿಡುತ್ತೇನೆ. ನಿನ್ನೆ ಆಡಳಿತ ಪಕ್ಷದ ಶಿವಲಿಂಗೇಗೌಡರು ಕಾಣದಂತೆ ಮಾಯವಾಗಿ ಅರಸೀಕೆರೆ ಕಡೆಗೆ ಹೋಗಿದ್ದರು ಎಂದು ಛೇಡಿಸಿದರು.

ಇದಕ್ಕೂ ಮುನ್ನ ಸದನ ಸಮಾವೇಶಗೊಂಡಾಗ ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪಕ್ಕೆ ವಿರೋಧಪಕ್ಷದ ನಾಯಕ ಅಶೋಕ ಹಾಗೂ ಬಿಜೆಪಿ ಶಾಸಕರು ಪಟ್ಟು ಹಿಡಿದಿದ್ದರು. ಆಗ ಸಚಿವ ಕೃಷ್ಣಭೈರೇಗೌಡ ಅವರು, ಸರ್ಕಾರದ ಕಾರ್ಯಕಲಾಪಗಳಿಗೆ ಅವಕಾಶ ಕೊಡಬೇಕು. ಕಾರ್ಯಸೂಚಿಯಂತೆ ಕಲಾಪ ನಡೆಯಬೇಕು ಎಂದು ವಿರೋಧಪಕ್ಷಗಳು ಹಾಗೂ ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

ಬಿಜೆಪಿ ಶಾಸಕ ಸುನೀಲ್‌ಕುಮಾರ್‌ ಮಾತನಾಡಿ, ಕಾರ್ಯಸೂಚಿ ಪ್ರಕಾರ ಸದನ ನಡೆಸಲು ತಕರಾರಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ವಿಚಾರ ಗಂಭೀರವಾಗಿದ್ದು, ಅದಕ್ಕೆ ಅವಕಾಶ ಮಾಡಿಕೊಡಬೇಕು. ರಾಜ್ಯದಲ್ಲಿ ಭಯಭೀತಿ ವಾತಾವರಣವಿದೆ. ಹಲವು ಘಟನೆಗಳು ರಾಜ್ಯದಲ್ಲಿ ಘಟಿಸಿವೆ. ಅದರ ಪ್ರಸ್ತಾಪವಾಗಬೇಕು ಎಂದು ಆಗ್ರಹಿಸಿದರು.

ಸದನದಲ್ಲಿ ಸಚಿವರಿಲ್ಲ ಎಂಬ ಆಕ್ಷೇಪವನ್ನು ಬಿಜೆಪಿ ಶಾಸಕರು ಪ್ರಸ್ತಾಪಿಸಿದರು. ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ಸದನದಲ್ಲಿ ಇಂದು ಹಾಜರಿರಬೇಕಾದ ಸಚಿವರುಗಳ ಹೆಸರುಗಳನ್ನು ಉಲ್ಲೇಖಿಸಿದರು. ಸಚಿವರಾದ ಕೆ.ಎಚ್‌.ಮುನಿಯಪ್ಪ, ಕೆ.ಜೆ.ಜಾರ್ಜ್‌, ದಿನೇಶ್‌ ಗುಂಡೂರಾವ್‌, ಕೃಷ್ಣಭೈರೇಗೌಡ, ಡಾ.ಎಚ್‌.ಸಿ.ಮಹದೇವಪ್ಪ, ಪ್ರಿಯಾಂಕ್‌ ಖರ್ಗೆ, ಜಮೀರ್‌ ಅಹಮದ್‌ ಖಾನ್‌, ಈಶ್ವರ್‌ ಖಂಡ್ರೆ ಸೇರಿದಂತೆ ಹಾಜರಿರಬೇಕಾದ ಸಚಿವರ ಹೆಸರುಗಳನ್ನು ವಾಚಿಸಿ ಮೂವರು ಸಚಿವರು ಮಾತ್ರ ಸದನದಲ್ಲಿ ಹಾಜರಿದ್ದಾರೆ ಎಂದು ಹೇಳಿದರು.

RELATED ARTICLES

Latest News