Wednesday, November 5, 2025
Homeಬೆಂಗಳೂರುಬೆಂಗಳೂರಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯನ್ನು ಕೊಂದು ಮಾಂಗಲ್ಯ ಸರ ದೋಚಿದ ದುಷ್ಕರ್ಮಿಗಳು

ಬೆಂಗಳೂರಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯನ್ನು ಕೊಂದು ಮಾಂಗಲ್ಯ ಸರ ದೋಚಿದ ದುಷ್ಕರ್ಮಿಗಳು

Miscreants enter house in broad daylight, kill woman, steal necklace

ಬೆಂಗಳೂರು,ನ.5- ಹಾಡಹಗಲೇ ಮನೆಗೆ ನುಗ್ಗಿದ ಹಂತಕರು ಕುತ್ತಿಗೆ ಹಿಸುಕಿ ವೃದ್ಧೆಯನ್ನು ಕೊಲೆ ಮಾಡಿ 45 ಗ್ರಾಂ ಮಾಂಗಲ್ಯ ಸರ ದೋಚಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಉತ್ತರಹಳ್ಳಿಯ ನ್ಯೂಮಿಲಿನಿಯಂ ಶಾಲೆ ರಸ್ತೆಯ ನಿವಾಸಿ ಲಕ್ಷ್ಮೀ (65) ಕೊಲೆಯಾದ ವೃದ್ಧೆ.


ಉತ್ತರಹಳ್ಳಿಯಲ್ಲಿ ಅಶ್ವತ್‌ನಾರಾಯಣ ಹಾಗೂ ಲಕ್ಷ್ಮೀ ದಂಪತಿ ವಾಸವಾಗಿದ್ದು ಅಗರಬತ್ತಿ ಕಾರ್ಖಾನೆಯಲ್ಲಿ ಪತಿ ಕೆಲಸ ಮಾಡುತ್ತಿದ್ದಾರೆ. ಎಂದಿನಂತೆ ಅಶ್ವತ್‌ನಾರಾಯಣ ಅವರು ನಿನ್ನೆ ಬೆಳಗ್ಗೆ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ಲಕ್ಷ್ಮೀ ಒಬ್ಬರೇ ಇದ್ದರು.

- Advertisement -

ಆ ಸಂದರ್ಭದಲ್ಲಿ ಇವರ ಮನೆಗೆ ನುಗ್ಗಿದ ಹಂತಕರು ಲಕ್ಷ್ಮೀ ಅವರ ಮುಖದ ಮೇಲೆ ಹಲ್ಲೆ ಮಾಡಿ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಅವರ ಕೊರಳಲ್ಲಿದ್ದ ಮಾಂಗಲ್ಯ ಸರ ದೋಚಿ ಪರಾರಿಯಾಗಿದ್ದಾರೆ.ಮಧ್ಯಾಹ್ನ 12.15 ರ ಸುಮಾರಿನಲ್ಲಿ ಅಶ್ವತ್‌ನಾರಾಯಣ ಅವರು ಪತ್ನಿಗೆ ಕರೆ ಮಾಡಿದ್ದಾರೆ. ಆದರೆ ಅವರು ಕರೆ ಸ್ವೀಕರಿಸಿಲ್ಲ. ಮಲಗಿರಬಹುದೆಂದು ಸುಮನಾಗಿದ್ದಾರೆ.

ಮತ್ತೆ ಸಂಜೆ 5.30 ರ ಸುಮಾರಿನಲ್ಲಿ ಕರೆ ಮಾಡಿದಾಗ ಆಗಲೂ ಅವರು ಕರೆ ಸ್ವೀಕರಿಸಿಲ್ಲ. ಇದರಿಂದ ಗಾಬರಿಯಾದ ಅಶ್ವತ್‌ನಾರಾಯಣ ಅವರು ತಮ ಮನೆಯಲ್ಲಿ ಬಾಡಿಗೆಗೆ ವಾಸವಿರುವ ಪಣಿರಾಜು ಅವರಿಗೆ ಕರೆ ಮಾಡಿ ನನ್ನ ಪತ್ನಿ ಮಧ್ಯಾಹ್ನದಿಂದ ಫೋನ್‌ ತೆಗೆಯುತ್ತಿಲ್ಲ. ಹೋಗಿ ನೋಡುವಂತೆ ತಿಳಿಸಿದ್ದಾರೆ.

ಪಣಿರಾಜು ಅವರು ನಾನು ಹೊರಗಡೆ ಇದ್ದು, ತನ್ನ ಪತ್ನಿಗೆ ತಿಳಿಸುವುದಾಗಿ ಹೇಳಿ ಅವರ ಪತ್ನಿಗೆ ಸಂಜೆ 6 ಗಂಟೆ ಸುಮಾರಿನಲ್ಲಿ ಮೊಬೈಲ್‌ ಕರೆ ಮಾಡಿ ಲಕ್ಷ್ಮೀ ಅವರ ಮನೆಗೆ ಹೋಗಿ ನೋಡುವಂತೆ ತಿಳಿಸಿದ್ದಾರೆ.

ಪಣಿರಾಜು ಅವರ ಪತ್ನಿ ಮನೆಗೆ ಹೋಗಿ ನೋಡಿದಾಗ ಲಕ್ಷ್ಮೀ ಅವರು ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ. ಸಮೀಪ ಹೋಗಿ ನೋಡಿದಾಗ ಉಸಿರಾಡುತ್ತಿಲ್ಲವೆಂದು ತಿಳಿದು ತಕ್ಷಣ ಅಶ್ವತ್‌ನಾರಾಯಣ ಅವರಿಗೆ ಫೋನ್‌ ಮಾಡಿ ಹೇಳಿದ್ದಾರೆ.

ಅಶ್ವತ್‌ನಾರಾಯಣ ಅವರು ತಕ್ಷಣ ಮನೆಗೆ ಬಂದು ನೋಡಿದಾಗ ಲಕ್ಷ್ಮೀ ಅವರ ಕುತ್ತಿಗೆಯ ಬಲ ಭಾಗದಲ್ಲಿ ಹಾಗೂ ತುಟಿಯ ಮೇಲೆ ಗಾಯವಾಗಿರುವುದು ಕಂಡು ಬಂದಿದೆ. ಅಲ್ಲದೇ ಮುಖದ ಮೇಲೆ ಪರಚಿದ ಗಾಯಗಳಾಗಿದ್ದು , ಕುತ್ತಿಗೆಯಲ್ಲಿ ಮಾಂಗಲ್ಯ ಸರ ಕಂಡು ಬಂದಿಲ್ಲ. ಅಶ್ವತ್‌ನಾರಾಯಣ ಅವರು ತಕ್ಷಣ ತನ್ನ ನಾದಿನಿ ಸಂಪತಿ ಲಕ್ಷ್ಮೀ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಅಕ್ಕನಿಗೆ ಕರೆ ಮಾಡಿದಾಗ ಮನೆಗೆ ಯಾರೋ ಗಂಡ-ಹೆಂಡತಿ ಬಂದು ಇಬ್ಬರು ಟಿವಿ ಚೆಕ್‌ ಮಾಡುತ್ತಿದ್ದು, ನಾನು ಹೊರಗಡೆ ಬಂದು ಮಾತನಾಡುತ್ತಿರುವುದಾಗಿ ತಿಳಿಸಿದರೆಂದು ಹೇಳಿದ್ದಾರೆ.

ಯಾರೋ ಪರಿಚಿತರು ಮನೆಗೆ ಬಂದು ಪತ್ನಿಯನ್ನು ಕೊಲೆ ಮಾಡಿ ಮಾಂಗಲ್ಯ ಸರ ತೆಗೆದುಕೊಂಡು ಹೋಗಿದ್ದಾರೆ. ಆ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಅಶ್ವತ್‌ನಾರಾಯಣ ಅವರು ಸುಬ್ರಮಣ್ಯಪುರ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮನೆಯ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

- Advertisement -
RELATED ARTICLES

Latest News