ಕೋಲಾರ, ಆ.21- ಆಟೋ ಚಾಲಕನನ್ನು ಬರ್ಬರವಾಗಿ ಕೊಂದು ಆತನ ದೇಹವನ್ನು ಪ್ರಯಾಣಿಕರ ಸೀಟ್‌ನಲ್ಲಿಟ್ಟು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅಫ್ರೀದ್ (40) ಮೃತ ಆಟೋ ಚಾಲಕ. ಈತ ಮೂಲತಃ ಬಂಗಾರಪೇಟೆಯ ಎಲೆಸಂದ್ರ ಗ್ರಾಮದವರಾಗಿದ್ದು, ಪ್ರಸ್ತುತ ಬೆಂಗಳೂರಿನ ಅಂಜನಾನಗರದಲ್ಲಿ ಪತ್ನಿ-ಮಕ್ಕಳೊಂದಿಗೆ ವಾಸವಾಗಿದ್ದರು.
ಮನೆಗೆ ಹೋಗದೆ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಅಫ್ರೀದ್‌ನನ್ನು ಕಳೆದ ರಾತ್ರಿ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ಹಿಂಬದಿ ಹಾಕಿಕೊಂಡು ಕೋಲಾರದ ಎಂಪೈರ್ ಹೊಟೇಲ್ ಬಳಿ ಇರುವ ಅಪಾರ್ಟ್‌ಮೆಂಟ್ ಬಳಿ ಆಟೋ ತಂದು ನಿಲ್ಲಿಸಿ ಹೋಗಿದ್ದಾರೆ.
ಇಂದು ಮುಂಜಾನೆ 4.30ರ ಸಂದರ್ಭದಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬೇರೆಲ್ಲೋ ಕೊಲೆ ಮಾಡಿ ಆಟೋದಲ್ಲಿ ತಂದು ನಿಲ್ಲಿಸಿ ದುಷ್ಕರ್ಮಿಗಳು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಈತ ಊರಿಗೆ ಹೋಗುತ್ತಿರಲಿಲ್ಲ. ಬೆಂಗಳೂರಿನಿಂದ ಇಲ್ಲಿಗೆ ಹೇಗೆ ಬಂದ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆತನ ದೇಹದ ಹಲವು ಭಾಗಗಳಿಗೆ ಇರಿಯಲಾಗಿದೆ. ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.