ಲಕ್ನೋ,ಫೆ.26- ದಾರಿತಪ್ಪಿಸುವ ವಿಷಯವನ್ನು ಪ್ರಸಾರ ಮಾಡಿದ 140 ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ವಿರುದ್ಧ 13 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಮಹಾಕುಂಭ ಉಪಪೊಲೀಸ್ ಮಹಾನಿರೀಕ್ಷಕ (ಡಿಐಜಿ) ವೈಭವ್ ಕೃಷ್ಣ ದೃಢಪಡಿಸಿದ್ದಾರೆ.
ಇಂತಹ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅವರ ಮೇಲೆ ಕ್ರಮ ಜರುಗಿಸಲಾಗುವುದು ಜೊತೆಗೆ ಕೊನೆಯ ದಿನದಂದು ಮಹಾಕುಂಭ ಪ್ರದೇಶದಲ್ಲಿ ಎಲ್ಲಿಯೂ ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಳ್ಳಲಾಗುವುದು. ಎಲ್ಲಾ ವ್ಯವಸ್ಥೆಗಳು ಸುಗಮವಾಗಿ ಸಾಗಲು ಕ್ರಮ ತೆಗೆದುಕೊಳ್ಳಲಾಗಿದೆ. ಎಷ್ಟೇ ಜನಸಂದಣಿ ಇದ್ದರೂ, ನಾವು ಸಂಪೂರ್ಣವಾಗಿ ಸಿದ್ದರಿದ್ದೇವೆ ಎಂದು ತಿಳಿಸಿದ್ದಾರೆ.
ಕೆಲವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಅತಿದೊಡ್ಡ ಧಾರ್ಮಿಕ ಕೂಟದ ಕುರಿತು ಇಂತಹ ತಪ್ಪು ಮಾಹಿತಿ ಹರಡಿರುವ ಕೆಲಸ ಕೂಡ ನಡೆದಿದೆ. ಇಂಥಹವರಿಗೆ ತಕ್ಕ ಶಾಸ್ತಿಯಾಗಿದ್ದು ಎಲ್ಲರ ಮೇಲೆ ಕೇಸ್ ದಾಖಲಾಗಿದೆ.
ಏತನ್ಮಧ್ಯೆ, ಮಹಾಕುಂಭಮೇಳವನ್ನು ನಿರ್ವಹಿಸುವ ಅಧಿಕಾರಿಗಳು ಸುಗಮ ನಿರ್ವಹಣೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಯೋಧ್ಯಾ ಧಾಮ್ ರೈಲು ನಿಲ್ದಾಣದಲ್ಲಿ ವ್ಯಾಪಕ ಜನಸಂದಣಿ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಯಶವಂತ್ ಸಿಂಗ್, ಮಹಾಶಿವರಾತ್ರಿಯ ಮಹಾಕುಂಭ ಸ್ನಾನದ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಿದ್ದೇವೆ. ರೈಲು ಬಂದಾಗ ಮಾತ್ರ ಭಕ್ತರು ಪ್ಲಾಟ್ ಫಾರ್ಮ್ಗೆ ಹೋಗಬಹುದು ಎಂದು ಹೇಳಿದರು. ಪ್ಲಾಟ್‌ಫಾರ್ಮ್‌ನ ಪ್ರಯಾಣಿಕರು ಅದರ ಸಾಮರ್ಥ್ಯವನ್ನು ಮೀರದಂತೆ ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಎಲ್ಲಾ ವ್ಯವಸ್ಥೆಗಳು ಜಾರಿಯಲ್ಲಿವೆ ಎಂದು ಅವರು ಹೇಳಿದ್ದಾರೆ.