ನವದೆಹಲಿ, ಜು. 27-ಮುಡಾದಲ್ಲಿ ತಮಗೂ ನಿವೇಶನವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನೀಡಿರುವ ಹೇಳಿಕೆ ಬಗ್ಗೆ ತಿರುಗೇಟು ನೀಡಿರುವ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ಅವರಂತೆ ನಾನು ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೈಸೂರಿನಲ್ಲಿ ನನಗೆ ನಿವೇಶನ ಕೊಟ್ಟಿದ್ದಾರೆ ಎಂದು ಅರಿಬ್ಬರೂ ಹೇಳಿದ್ದಾರೆ. ಆದರೆ, ಈವರೆಗೆ ಆ ನಿವೇಶನವನ್ನೇ ನನಗೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.2006ರಲ್ಲಿಯೇ ನಾನು ಮುಖ್ಯಮಂತ್ರಿಯಾಗಿದ್ದೆ. ಅಧಿಕಾರ ದುರುಪಯೋಗ ಮಾಡಿಕೊಳ್ಳಬೇಕು ಎಂದು ನನಗೆ ಅನ್ನಿಸಿದ್ದಿದ್ದರೆ, ಆಗಲೇ ಆ ನಿವೇಶನವನ್ನು ನನ್ನ ಹೆಸರಿಗೆ ಬರೆಸಿಕೊಳ್ಳಬಹುದಾಗಿತ್ತು ಎಂದಿದ್ದಾರೆ.
ಈ ನಿವೇಶನದ ಬಗ್ಗೆ ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ತನಿಖೆ ನಡೆಯುತ್ತಿದೆ. ಲೋಕಾಯುಕ್ತ, ಸಿಐಡಿ ತನಿಖೆಗಳು ನಡೆದು ಹೋಗಿವೆ. 500 ನಿವೇಶನಗಳನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪಡೆದುಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡಲಾಗಿತ್ತು. ಕೊನೆಗೆ ತನಿಖೆಯಲ್ಲಿ ಒಂದು ನಿವೇಶನವನ್ನಷ್ಟೇ ಪಡೆದುಕೊಂಡಿದ್ದಾರೆ ಎಂದು ಗೊತ್ತಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
2012ನೇ ಇಸವಿಯಲ್ಲಿ ನಾನು ಮುಡಾಕ್ಕೆ ಪತ್ರ ಬರೆದು ಹಂಚಿಕೆ ಮಾಡಿರುವ ನಿವೇಶನ ಕೊಡಿ ಎಂದು ಮನವಿ ಮಾಡಿದ್ದೆ. 2017ರಲ್ಲಿ ಮತ್ತೊಂದು ಪತ್ರವನ್ನೂ ಬರೆದಿದ್ದೆ. ನಾನು ಅಧಿಕಾರ ದುರುಪಯೋಗಪಡಿಸಿಕೊಳ್ಳಲಿಲ್ಲ. ಅಂಥ ಆಲೋಚನೆಯನ್ನೂ ಮಾಡಲಿಲ್ಲ ಎಂದು ಅವರು ಹೇಳಿದ್ದಾರೆ.
40 ವರ್ಷವಾದರೂ ನಿವೇಶನ ಕೊಟ್ಟಿಲ್ಲ: ನಿವೇಶನವನ್ನು ಅವರು ನನಗೆ ಧರ್ಮಕ್ಕೆ ಕೊಡುತ್ತಿಲ್ಲ. ನಾನು 34,000 ರೂ. ಹಣ ಕಟ್ಟಿದ್ದೇನೆ. ಆ ಹಣ ಕಟ್ಟಿ 40 ವರ್ಷಗಳೇ ಆಗಿದೆ. ನಿವೇಶನ ಕೊಟ್ಟಿಲ್ಲ. ಇದು ನಿಜವಾದ ಪರಿಸ್ಥಿತಿ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಆರ್ಭಟ ನೋಡಿದೆ. ಈ ವ್ಯಕ್ತಿ ಯಾವ ಹಿನ್ನೆಲೆಯಿಂದ ಬಂದಿರುವುದು ಎನ್ನುವುದು ನನಗೆ ಗೊತ್ತಿದೆ. ಬೆಂಗಳೂರು ನಗರದಲ್ಲಿ ಈ ಮಹಾಶಯ ಏನೆಲ್ಲಾ, ಯಾವೆಲ್ಲಾ ಭ್ರಷ್ಟಾಚಾರ ಎಸಗಿದ್ದಾರೆ ಎಂಬುದನ್ನು ತೆಗೆದರೆ ಈ ವ್ಯಕ್ತಿಯ ಅಸಲಿ ಬಂಡವಾಳ ಗೊತ್ತಾಗುತ್ತದೆ. ಬೆಂಗಳೂರು ಸುತ್ತಮುತ್ತಾ ಮಾಡಿದ್ದಾರಲ್ಲ. ಅದನ್ನಷ್ಟೇ ತೆಗೆದಿಟ್ಟರೆ ಸಾಕು ಎಂದು ಕುಮಾರಸ್ವಾಮಿ ಅವರು ಭೈರತಿ ಸುರೇಶ್ ಗೆ ತಿರುಗೇಟು ಕೊಟ್ಟರು.