ಮೈಸೂರು,ಮಾ.27– ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಮುಂದೆ ಮುಖ್ಯಮಂತ್ರಿಯಾಗುವ ಉದ್ದೇಶದಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾಗಿರಬಹುದು ಎಂದು ಜೆಡಿಎಸ್ ಕೋರ್‌ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿ ನೋಡಿದರೆ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಬೇರೆ ಕಾರಣಕ್ಕೆ ಕುಮಾರಸ್ವಾಮಿಯವರನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಜೆಡಿಎಸ್‌ನ 18 ಶಾಸಕರ ಬೆಂಬಲವನ್ನು ಅವರು ಕುಮಾರಸ್ವಾಮಿಯವರ ಬಳಿ ಕೇಳಿರಬಹುದು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನನು ಕೂಡ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇಬ್ಬರು ನಾಯಕರನ್ನು ಸತೀಶ್ ಜಾರಕಿಹೊಳಿ ಭೇಟಿಯಾಗಿರುವುದನ್ನು ಗಮನಿಸಿದರೆ ಮುಖ್ಯಮಂತ್ರಿಯ ಉದ್ದೇಶವಿರಬೇಕು ಎಂದೆನಿಸುತ್ತದೆ. ಒಂದು ವೇಳೆ ಜೆಡಿಎಸ್ ಅವರಿಗೆ ಬೆಂಬಲವನ್ನು ನೀಡಿದರೆ ತಾವು ಈ ವಿಚಾರದಲ್ಲಿ ತಟಸ್ಥವಲ್ಲ ಎಂದು ತಿಳಿಸಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಉಚ್ಚಾಟನೆ ಮಾಡಿರುವುದು ಅದು ಅವರ ಪಕ್ಷದ ಆಂತರಿಕ ವಿಚಾರವಾಗಿದ್ದು, ಹೆಚ್ಚು ಮಾತನಾಡುವುದಿಲ್ಲ ಎಂದರು.
ಕರ್ನಾಟಕ ರಾಜಕಾರಣಕ್ಕೆ ತನ್ನದೇ ಆದ ಇತಿಹಾಸವಿದೆ. ಇತ್ತೀಚಿನ ಘಟನಾವಳಿಗಳನ್ನು ಗಮನಿಸಿದರೆ ಪ್ರಜಾಪ್ರಭುತ್ವ ವೇಗವಾಗಿ ಸಾಗುತ್ತಿದೆ ಎಂಬ ಅಭಿಪ್ರಾಯ ಬರುತ್ತಿದೆ.
ಅಧಿವೇಶನದಲ್ಲಿ ಅಭಿವೃದ್ಧಿ ವಿಚಾರ ಹೆಚ್ಚು ಚರ್ಚೆಯಾಗಬೇಕಿತ್ತು. ಆದರೆ ಕೇವಲ ಗಲಾಟೆ, ಗದ್ದಲದಲ್ಲೇ ಅಧಿವೇಶನ ಮುಕ್ತಾಯವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಮೇಲಿನ ಚರ್ಚೆ ವಿಚಾರ ಜನರ ಗಮನಕ್ಕೆ ಬರಲಿಲ್ಲ ಎಂದು ಹೇಳಿದರು.