Friday, November 22, 2024
Homeರಾಜ್ಯಬಂಧನದ ಭೀತಿ ಹಿನ್ನೆಲೆಯಲ್ಲಿ ಶಾಸಕ ಮುನಿರತ್ನ ನಾಪತ್ತೆ.. !

ಬಂಧನದ ಭೀತಿ ಹಿನ್ನೆಲೆಯಲ್ಲಿ ಶಾಸಕ ಮುನಿರತ್ನ ನಾಪತ್ತೆ.. !

Munirathna

ಬೆಂಗಳೂರು,ಸೆ.14- ಗುತ್ತಿಗೆದಾರರಿಂದ ಹಣ ವಸೂಲಿ ಯತ್ನ, ಕಿರುಕುಳ, ಪರಿಶಿಷ್ಟ ಜಾತಿ ಹಾಗೂ ಒಕ್ಕಲಿಗ ಸಮುದಾಯದ ನಾಯಕರ ವಿರುದ್ಧ ಅವಹೇಳನ ಕಾರಿಯಾಗಿ ಮಾತನಾಡಿರುವುದೂ ಸೇರಿದಂತೆ ವಿವಿಧ ಆರೋಪಗಳಿಗೆ ಗುರಿಯಾಗಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ.

ಬೆಂಗಳೂರಿನ ವೈಯ್ಯಾಲಿಕಾವಲ್ನಲ್ಲಿರುವ ಅವರ ನಿವಾಸದ ಮೇಲೆ ಕೆಲವು ಸಂಘಟನೆಗಳಿಂದ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶಾಸಕರ ಮನೆ ಪ್ರವೇಶಿಸುವ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಕೆಎಸ್ಆರ್ಪಿ ತುಕಡಿಯನ್ನು ನಿಯೋಜಿಸಲಾಗಿದೆ.

ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಪೊಲೀಸರು ಬಂಧಿಸಬಹುದು ಎಂಬ ಭೀತಿಯಿಂದ ಶುಕ್ರವಾರ ರಾತ್ರಿಯಿಂದಲೇ ನಾಪತ್ತೆಯಾಗಿದ್ದಾರೆ. ಆಪ್ತ ಸಹಾಯಕನ ಜೊತೆ ಹೊರಹೋಗಿ ಬರುತ್ತೇನೆಂದು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದ ಮುನಿರತ್ನ ಎಲ್ಲಿದ್ದಾರೆಂಬುದು ಗೊತ್ತಿಲ್ಲ.

ಸದ್ಯ ಅವರು ಬಳಸುವ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು, ಪೊಲೀಸರ ಒಂದು ತಂಡ ಮೊಬೈಲ್ ಲೊಕೇಶನ್ ಪತ್ತೆಹಚ್ಚುವ ಕಾರ್ಯದಲ್ಲಿ ನಿರತವಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾವುದೇ ಕ್ಷಣದಲ್ಲಿ ಪೊಲೀಸರು ತಮನ್ನು ಬಂಧಿಸಬಹುದು ಎಂಬ ಭೀತಿಯಿಂದಾಗಿಯೇ ಯಾರಿಗೂ ಮಾಹಿತಿ ನೀಡದೇ ತಲೆಮರೆಸಿಕೊಂಡಿದ್ದಾರೆ. ಕುಟುಂಬದ ಸದಸ್ಯರು ಕೂಡ ತಮಗೆ ಯಾವುದೇ ಮಾಹಿತಿ ಇಲ್ಲ ಎಂಬ ಹಾರಿಕೆ ಉತ್ತರವನ್ನು ನೀಡುತ್ತಿದ್ದಾರೆ. ಮುನಿರತ್ನ ವಿರುದ್ಧ ಪೊಲೀಸರು ವಿವಿಧ ಸೆಕ್ಷನ್ಗಳಡಿ ಎಫ್ಐಆರ್ ದಾಖಲಿಸಿರುವುದರಿಂದ ಅವರಿಗೆ ಬಂಧನದ ಭೀತಿ ಶುರುವಾಗಿದೆ.

ಮೂಲಗಳ ಪ್ರಕಾರ, ಅವರು ವಕೀಲರ ಜೊತೆ ಸಂಪರ್ಕದಲ್ಲಿದ್ದು, ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಶನಿವಾರ, ಭಾನುವಾರ ಮತ್ತು ಸೋಮವಾರ ನ್ಯಾಯಾಲಯಗಳಿಗೆ ರಜೆ ಇರುವುದರಿಂದ ಮಂಗಳವಾರದ ನಂತರವೇ ಮುನಿರತ್ನ ಪರ ವಕೀಲರು ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

ರಾಜಕೀಯ ಸ್ವರೂಪ :
ಇನ್ನು ಮುನಿರತ್ನ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಶಥಾಯಗಥಾಯ ಅವರನ್ನು ಬಂಧಿಸಲು ಆಡಳಿತಾರೂಢ ಕಾಂಗ್ರೆಸ್ನಲ್ಲಿರುವ ಕೆಲವು ಪ್ರಭಾವಿಗಳು ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.

ಬಿಜೆಪಿಯಲ್ಲಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಈಗಲೂ ಆತೀಯ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ ಜೊತೆ ರಾಜಕೀಯ ಜಿದ್ದು ಇಟ್ಟುಕೊಂಡಿದ್ದಾರೆ. ಈಗ ಈ ಪ್ರಕರಣವೇ ಮುನಿರತ್ನಗೆ ಮುಳುವಾಗಿ ಪರಿಣಮಿಸಿದೆ.

RELATED ARTICLES

Latest News