ಬೆಳಗಾವಿ,ಡಿ.18- ಮಹಿಳೆಯ ಪರವಾದ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಬೇಕೆಂದು ಕಾಂಗ್ರೆಸ್ ಶಾಸಕಿ ನಯನ ಮೋಟಮ್ಮ ಅವರು ಸಭಾಧ್ಯಕ್ಷರಲ್ಲಿ ಆಗ್ರಹಪೂರ್ವಕ ಮನವಿ ಮಾಡಿದರು. ವಿಧಾನಸಭೆಯಲ್ಲಿ ಮಹಿಳೆಯರ ಬಗ್ಗೆ ಜಾತಿ ನಿಂದನೆಯಾಗಿದೆ. ಅದಕ್ಕೆ ಅವಕಾಶ ಕೊಡಬೇಕಿದೆ. ಯಾವಾಗ ಅವಕಾಶ ಕೊಡುತ್ತೀರಿ? ಮಹಿಳಾ ಪರ ದನಿ ಎತ್ತಲು ಅವಕಾಶ ನೀಡಿ ಎಂದು ಕೋರಿದರು.
ಆಗ ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ನೀವು ನೀಡಿರುವ ನೋಟಿಸ್ ನಿಯಮ 69ರಡಿ ಚರ್ಚೆಗೆ ಕಾರ್ಯಕಲಾಪಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಆ ವಿಚಾರ ಎಸ್‌ಐಟಿ ವಿಚಾರಣೆಯಲ್ಲಿದೆ. ನ್ಯಾಯಾಲಯದ ವಿಚಾರವೂ ಇದೆ. ಈ ವಿಚಾರದ ಚರ್ಚೆ ನಡೆದ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಗದ್ದಲವಾಗಿತ್ತು.
ನಿನ್ನೆ ನಿಯಮ 69ರಡಿ ಒಂದೂ ವಿಚಾರವನ್ನು ಚರ್ಚೆಗೆ ಕೊಡಲು ಅವಕಾಶ ಸಿಗಲಿಲ್ಲ. ವಕ್‌್ಪ ಕುರಿತ ಚರ್ಚೆಗೆ ಉತ್ತರ, ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆಗೆ ಸರ್ಕಾರ ಉತ್ತರ ನೀಡಬೇಕಿದೆ ಎಂದರು. ಆಗ ನಯನ ಮೋಟಮ ಮಾತನಾಡಿ, ಆಡಳಿತ ಮತ್ತು ವಿರೋಧ ಪಕ್ಷದವರೂ ನಮ ಮಾತನ್ನು ಕೇಳಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಆಗ ಸಭಾಧ್ಯಕ್ಷರು ಮಾತನಾಡಿ, ಚರ್ಚೆಗೆ ಅವಕಾಶ ಕೊಡಬೇಡಿ ಎಂದು ಹೇಳಿಲ್ಲ. ನಿಯಮ ಪ್ರಕಾರ ಅವಕಾಶವಿದೆಯೇ ಎಂದು ಕೇಳಿದ್ದಾರೆ. ಯಾವುದೇ ವಿಚಾರ ತನಿಖೆ ಹಂತದಲ್ಲಿದ್ದರೆ ಚರ್ಚಿಸಬಹುದು. ಆದರೆ ತನಿಖೆಗೆ ನ್ಯಾಯಾಲಯದ ವಿಚಾರಣೆಗೆ ಅಡ್ಡಿಯಾಗದಂತೆ ಚರ್ಚೆ ಮಾಡಬೇಕಾಗುತ್ತದೆ. ನಾಳೆ ಬೆಳಗ್ಗೆ ಅವಕಾಶ ಮಾಡಿಕೊಡುವುದಾಗಿ ನಯನ ಮೋಟಮ ಅವರಿಗೆ ಹೇಳಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ ವ್ಯಕ್ತಿಯ ಬಗ್ಗೆ ನೇರವಾಗಿ ಉಲ್ಲೇಖ ಮಾಡದೇ ಮಹಿಳೆಯರ ದುರುಪಯೋಗ, ಮಹಿಳೆಯರ ಸ್ವಾಸ್ಥ್ಯಕ್ಕೆ ಧಕ್ಕೆ, ಮಹಿಳೆಯರ ದಾಳವಾಗಿ ಬಯಸಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ ವಿಚಾರಣೆಗೆ ಧಕ್ಕೆಯಾಗದಂತೆ ಚರ್ಚೆ ನಡೆಸಿದರೆ ನಿಯಮಾವಳಿ ಉಲ್ಲಂಘನೆಯಾಗುವುದಿಲ್ಲ ಎಂದರು.