ಬೆಂಗಳೂರು,ಜು.16- ಕಾರವಾರದ ಅಂಕೋಲಾ ಬಳಿ ಶಿರೂರು ಗ್ರಾಮದ ಬಳಿ ಭೂಕುಸಿತವಾಗಿ 10 ರಿಂದ 15 ಜನ ಗಂಗಾವತಿ ನೀರು ಪಾಲಾಗಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಆತಂಕ ವ್ಯಕ್ತಪಡಿಸಿದ್ದಾರೆ.ವಿಧಾನಸಭೆಯ ಶೂನ್ಯ ವೇಳೆಯಲ್ಲಿ ವಿಷಯ
ಪ್ರಸ್ತಾಪಿಸಿದ ಶಾಸಕರು, ಭಾರಿ ಮಳೆಯಿಂದಾಗಿ ಭೂಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ ಸಮೀಪವಿದ್ದ 2,3 ಮನೆಗಳು ಹಾಗೂ ಸಂಚರಿಸುತ್ತಿದ್ದ ಟ್ಯಾಂಕರ್ ಕೂಡ ನದಿಗೆ ಕೊಚ್ಚಿಕೊಂಡು ಹೋಗಿದೆ. ನಿವಾಸಿಗಳು ಮತ್ತು ಟ್ಯಾಂಕರ್ ಸಿಬ್ಬಂದಿ ಸೇರಿ 10-15 ಮಂದಿ ಗಂಗಾವತಿ ನದಿಯ ನೀರು ಪಾಲಾಗಿದ್ದಾರೆ ಎಂದು ವಿವರಿಸಿದರು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವಾಗ ಬೆಟ್ಟ-ಗುಡ್ಡದ ಮೇಲಿನ ಭೂಮಿಯನ್ನು 400 ಮೀಟರ್ ಇಳಿಜಾರು ಮಾದರಿಯಲ್ಲಿ ನಿರ್ಮಿಸಬೇಕು ಎಂದು ನಾವು ಹಲವು ಬಾರಿ ಸಲಹೆ ನೀಡಿದ್ದೇವೆ. ಆದರೆ ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳು ನಮ್ಮ ಮಾತಿಗೆ ಮನ್ನಣೆ ನೀಡುವುದಿಲ್ಲ. ಈ ಮೊದಲು ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಿಲ್ಲಾಧಿಕಾರಿಯವರಿಗೆ ಸಾಕಷ್ಟು ಬಾರಿ ದೂರು ನೀಡಿದ್ದೇವೆ. ಅವರು ವರ್ಗಾವಣೆಯಾಗಿ ಹೋದರು. ಈಗ ಉಸ್ತುವಾರಿ ಜಿಲ್ಲಾಧಿಕಾರಿಯಾಗಿರುವ ರಿತೀಶ್ಕುಮಾರ್ ಸಿಂಗ್ ಅವರಿಗೆ ಮನವಿ ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ಷೇಪಿಸಿದರು.
ರಸ್ತೆ ನಿರ್ಮಿಸುವಾಗ ಗುಡ್ಡದ ಪ್ರದೇಶವನ್ನು ಕಡಿದಾಗಿ ಕತ್ತರಿಸಿದ್ದರಿಂದಾಗಿ ಇಂದು ಭೂ ಕುಸಿತವಾಗಿದೆ. ಅಂಕೋಲಾದಲ್ಲಿನ ಹೃದಯಭಾಗದಲ್ಲಿ 415 ಹೆಕ್ಟೇರ್ ಜಾಗವನ್ನು ಸೀಬರ್ಡ್ ಯೋಜನೆಗೆ ಬಿಟ್ಟುಕೊಡಲಾಗಿದೆ. ಈ ಪ್ರದೇಶದಲ್ಲಿ 15, 20 ಅಂತಸ್ತಿನ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಪ್ರಶ್ನೆ ಮಾಡಿದರೆ ದೇಶದ ಹಿತಾಸಕ್ತಿ ಚರ್ಚೆ ಮಾಡಬೇಡಿ ಎಂದು ಹೇಳುತ್ತಾರೆ. ಜನಸಾಮಾನ್ಯರಿಗೆ ಇರುವಂತೆ ಸೀಬರ್ಡ್ ಯೋಜನೆಯ ಕಟ್ಟುಪಾಡುಗಳು ನೇವಿಯವರಿಗೆ ಇಲ್ಲ ಎಂದು ಆಕ್ಷೇಪಿಸಿದರು.
ಸರ್ಕಾರದ ಪರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಕೃಷ್ಣಾಭೈರೇಗೌಡ, ರಾಷ್ಟ್ರೀಯ ಹೆದ್ದಾರಿ ಹಾಗೂ ಸೀಬರ್ಡ್ ಈ ಎರಡೂ ಯೋಜನೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿವೆ. ಕಳೆದ ಬಾರಿ ತಾವು ಕಾರಾವರಾರಕ್ಕೆ ಭೇಟಿ ನೀಡಿದಾಗ ಸೀಬರ್ಡ್ ಯೋಜನೆಯ ಅಧಿಕಾರಿಗಳನ್ನು ಕರೆಸಿ ಕೆಲವು ಸಲಹೆಗಳನ್ನು ನೀಡಿದ್ದೇವೆ. ರಾಜ್ಯಸರ್ಕಾರ ನಿರ್ದೇಶನ ನೀಡಲು ಬರುವುದಿಲ್ಲ. ಮುಂದಿನ ದಿನಗಳಲ್ಲಿ ಹೆದ್ದಾರಿ ನಿರ್ಮಾಣದಲ್ಲಾಗಿರುವ ಲೋಪಗಳನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು. ಸದ್ಯಕ್ಕೆ ಭೂಕುಸಿತದಿಂದ ಶಿರೂರಿನಲ್ಲಿ ಸಂಸಿರುವ ಘಟನೆಯ ಬಗ್ಗೆ ಮಾಹಿತಿ ಪಡೆದು ಸದನಕ್ಕೆ ತಿಳಿಸುತ್ತೇನೆ ಎಂದು ಹೇಳಿದರು.
ವಿಪಕ್ಷ ನಾಯಕ ಆರ್.ಅಶೋಕ್, 10-15 ಮಂದಿ ನೀರು ಪಾಲಾಗಿದ್ದಾರೆ ಎಂದು ಶಾಸಕರು ಹೇಳಿದ್ದಾರೆ. ಮೊದಲು ಅವರ ಪರಿಸ್ಥಿತಿ ಏನಾಗಿದೆ, ಜೀವರಕ್ಷಣೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಿ. ನಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕುರಿತು ಪ್ರಸ್ತಾಪಿಸಬಹುದು ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಭೈರೇಗೌಡ, ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದ್ದಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ವಿಪತ್ತು ನಿರ್ವಹಣಾ ದಳದ ತಂಡವನ್ನು ಕಾರವಾರದಲ್ಲಿ ನೆಲೆ ನಿಲ್ಲಿಸಲಾಗಿದೆ. ಅದರ ಮೂಲಕ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಸತೀಶ್ ಶೈಲು ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳ ಧೋರಣೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ, ಸಭಾಧ್ಯಕ್ಷ ಯು.ಟಿ.ಖಾದರ್ ಜಿಲ್ಲಾಧಿಕಾರಿಗಳು ಹೆದ್ದಾರಿ ಪ್ರಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲು ಅವಕಾಶವಿದೆ. ಈ ಹಿಂದೆ ಪ್ರಕರಣವೊಂದರಲ್ಲಿ ಹಲವು ಬಾರಿ ಮೌಖಿಕ ಸೂಚನೆ ನೀಡಿದಾಗ ಎನ್ಎಚ್ಐನ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಕೊನೆಗೆ ಜಿಲ್ಲಾಧಿಕಾರಿಯವರು ಸರಿಯಾದ ರಸ್ತೆ ನಿರ್ವಹಣೆಯಾಗದೇ ಇದ್ದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು. ಆಗ ರಸ್ತೆ ಸರಿ ಹೋಯಿತು. ಅಂಕೋಲದ ಪ್ರಕರಣದಲ್ಲೂ ಜಿಲ್ಲಾಧಿಕಾರಿಗಳ ಪಾತ್ರ ಇರುತ್ತದೆ ಎಂದರು.