ಬೆಂಗಳೂರು,ನ.8- ಬೇಲೆಕೇರಿ ಆಕ್ರಮ ಆದಿರು ರಪ್ತು ಪ್ರಕರಣದಲ್ಲಿ ಕಾರವಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಮಧ್ಯಂತರ ಜಾಮೀನು ಅರ್ಜಿ ವಜಾಗೊಂಡಿರುವ ಕಾರಣ ಅವರಿಗೆ ಮತ್ತೆ ಬಂಧನದ ಭೀತಿ ಎದುರಾಗಿದೆ. ಆನಾರೋಗ್ಯದ ಕಾರಣ ನೀಡಿ, ನ್ಯಾಯಾಲಯಕ್ಕೆ ಹಾಜರಾಗದೇ ಸತೀಶ್ ಸೈಲ್ ವಿನಾಯಿತಿಗೆ ವಕೀಲರಿಂದ ಮನವಿ ಸಲ್ಲಿಸಿದ್ದರು. ಆದರೆ, ಹಾಜರಾತಿಯಿಂದ ವಿನಾಯಿತಿ ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಗಜಾನನ ಭಟ್ ಅವರು, ನಿರಕಾರಿಸಿ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದಾರೆ.
ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಸತೀಶ್ ಸೈಲ್‌ಗೆ ನ.7 ರ ವರೆಗೆ ಜಾಮೀನು ವಿಸ್ತರಣೆ ಮಾಡಿ ಜನಪ್ರತಿನಿ ಗಳ ನ್ಯಾಯಾಲಯ ಆದೇಶ ಮಾಡಿತ್ತು. ಇದೀಗ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಾಗಿರುವ ಕಾರಣ, ಮತ್ತೆ ಜೈಲು ಪಾಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾರವಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್, ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಇದಲ್ಲದೇ ಇವರ ಮನೆಯ ಮೇಲೆ ಇಡಿ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಕ್ಕೆ ಪಡೆದಿತ್ತು. ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸತೀಶ್ ಸೈಲ್ ಇ.ಡಿ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದರು. ಅಕ್ಟೋಬರ್ 25 ರವರೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಆದರೆ, ಆರೋಗ್ಯ ಸಮಸ್ಯೆ ಹಾಗೂ ಚಿಕಿತ್ಸೆ ಕಾರಣದಿಂದ ಜಾಮೀನು ವಿಸ್ತರಿಸುವಂತೆ ಸೈಲ್ ಕೋರಿದ್ದ ಅರ್ಜಿಯನ್ನು ಪರಿಗಣಿಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯ ನ.7 ರ ವರೆಗೆ ಜಾಮೀನು ವಿಸ್ತರಿಸಿ ಆದೇಶಿಸಿತ್ತು. ಇದೀಗ ಶಾಸಕನ ಮಧ್ಯಂತರ ಜಾಮೀನು ರದ್ದಾಗಿದೆ. ಏನಿದು ಪ್ರಕರಣ:2010ರಲ್ಲಿ ಬೇಲೆಕೇರಿ ಬಂದರಿನಲ್ಲಿ ನಡೆದಿದ್ದ ಕಬ್ಬಿಣದ ಅದಿರು ಅಕ್ರಮ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ನಡೆದಿತ್ತು. ಈ ಪ್ರಕರಣದಲ್ಲಿ ಸುಮಾರು 200 ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಿತ್ತು. ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ಆರಂಭಿಸಿತ್ತು.
ಆಗ್ಟ್ 13 ಮತ್ತು 14ರಂದು ಇ.ಡಿ. ಅಧಿಕಾರಿಗಳು ಶಾಸಕ ಸತೀಶ್ ಸೈಲ್ ಅವರ ಮನೆ, ಕಚೇರಿ, ದೆಹಲಿ ಹಾಗೂ ಗೋವಾ ಸೇರಿದಂತೆ ಹಲವು ಕಡೆ ದಾಳಿ ನಡೆಸಿದ್ದರು. ಈ ವೇಳೆ ಕೋಟ್ಯಂತರ ರೂಪಾಯಿ ನಗದು ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಕ್ರಮ ಗಣಿಗಾರಿಕೆ ಮೂಲಕ ವಿದೇಶಕ್ಕೆ ಸಾಗಿಸಲು ಕಾರವಾರದ ಬೇಲೆಕೇರಿ ಬಂದರಿಯಲ್ಲಿ 11,312 ಮೆಟ್ರಿಕ್ ಟನ್ ಅದಿರನ್ನು ಸಂಗ್ರಹಿಸಲಾಗಿತ್ತು. ಇದನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಅನುಮತಿ ಇಲ್ಲದೇ ಮಲ್ಲಿಕಾರ್ಜುನ ಶಿಪ್ಪಿಂಗ್ ಕಾರ್ಪೊರೇಷನ್ ಮಾಲೀಕರಾಗಿದ್ದ ಸತೀಶ್ ಸೈಲ್ ಅವರು ಇದನ್ನು ವಿದೇಶಕ್ಕೆ ಸಾಗಣೆ ಮಾಡಿದ್ದಾರೆ ಎನ್ನಲಾಗಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಪ್ರತ್ಯೇಕ 6 ಪ್ರಕರಣಗಳು ದಾಖಲಾಗಿದ್ದವು.
ಲೋಕಾಯುಕ್ತ ಮತ್ತು ಸಿಬಿಐ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಅರಣ್ಯಾಧಿಕಾರಿಗಳು ವಶಪಡಿಸಿಕೊಂಡ 5,00,000 ಮೆಟ್ರಿಕ್ ಟನ್ ಅದಿರಿನ ಪೈಕಿ 1,29,553.54 ಮೆಟ್ರಿಕ್ ಟನ್ ಅದಿರು ಕಳ್ಳತನವಾಗಿದೆ ಎಂದು ಸಿಬಿಐ ಹೇಳಿತ್ತು. ಸೆ. 9ರಂದು ಶಾಸಕ ಸತೀಶ್ ಸೈಲ್ ಅವರನ್ನು ಇ.ಡಿ. ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ತಮ ವಶಕ್ಕೆ ಪಡೆದಿತ್ತು. ಆದರೆ, ಕಸ್ಟಡಿಯಲ್ಲಿರುವಾಗಲೇ ಸೈಲ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಇದೀಗ ಆ ಜಾಮೀನು ಅವಧಿಯನ್ನು ಇಂದಿನ(ನ.7) ರವರೆಗೆ ವಿಸ್ತರಿಸಲಾಗಿತ್ತು.
