ಬೆಂಗಳೂರು,ಮಾ.23- ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸದೇ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಕಾಂಗ್ರೆಸ್ ಶಾಸಕ ಎಸ್.ಆರ್.ಶ್ರೀನಿವಾಸ್ ನೀಡಿರುವ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಲೋಕಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಬೆಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದರು. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಟಿಯಾಗಿ ಚುನಾವಣಾ ಉಸ್ತುವಾರಿ ನಿಭಾಯಿಸುತ್ತಿದ್ದಾರೆ.
ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಇಬ್ಬರ ನಡುವೆಯೂ ಬಲವಾದ ಹೊಂದಾಣಿಕೆ ಕಾಣಸಿಗುತ್ತಿದೆ. ಅದರ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ನೀಡಲಾಗಿದೆ ಮತ್ತು ಬಹುತೇಕ ಕಡೆ ಅವರ ಕುಟುಂಬದ ಸದಸ್ಯರಿಗೇ ಪಕ್ಷ ಟಿಕೆಟ್ ನೀಡಿದೆ.
ತುಮಕೂರಿನ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಆಡಳಿತಾರೂಢ ಪಕ್ಷವಾಗಿರುವುದರಿಂದ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ಗೆಲ್ಲದೇ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಬಹಿರಂಗವಾಗಿ ಹೇಳಿದ್ದಾರೆ.
ಈ ಹಿಂದೆ ತುಮಕೂರಿನವರೇ ಆದ ಸಚಿವ ಕೆ.ಎನ್.ರಾಜಣ್ಣ ಕೂಡ ಇದೇ ರೀತಿಯ ಮಾತುಗಳನ್ನಾಡಿದ್ದರು. ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲದೇ ಇದ್ದರೆ ನಾಯಕತ್ವದ ಬದಲಾವಣೆಗೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಹೀಗಾಗಿ ಹೆಚ್ಚು ಸ್ಥಾನ ಗೆಲ್ಲುವುದು ಎಲ್ಲರ ಹೊಣೆಗಾರಿಕೆ ಎಂದು ಹೇಳಿದರು.
2019 ರಲ್ಲಿ ನಡೆದ ಲೋಕಸಭಾ ಚುನಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವ್ಯಕ್ತಿ ನಾಯಕತ್ವ ವಹಿಸಿದ್ದರು. ಆದರೆ ಫಲಿತಾಂಶ ನಿರಾಶಾದಾಯಕವಾಗಿತ್ತು. 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 27 ರಲ್ಲಿ ಸೋತಿತ್ತು. ಸಹಜವಾಗಿಯೇ ಇದು ಕಾಂಗ್ರೆಸ್ಗೆ ಭಾರೀ ಹಿನ್ನಡೆಯುಂಟಾಗಿತ್ತು.
ಈ ಹಿನ್ನೆಲೆಯಲ್ಲಿ ಈ ಬಾರಿ ಏಕವ್ಯಕ್ತಿ ನಾಯಕತ್ವದ ಬದಲಾಗಿ ಸಾಮೂಹಿಕ ನಾಯಕತ್ವಕ್ಕೆ ಕಾಂಗ್ರೆಸ್ ಮೊರೆ ಹೋಗಿದೆ. ರಾಜ್ಯದಲ್ಲಿ ಹಿಂದುಳಿದ, ದಲಿತ, ಒಕ್ಕಲಿಗ, ಲಿಂಗಾಯತ, ಅಲ್ಪಸಂಖ್ಯಾತ ಮತಗಳ ಕ್ರೋಡೀಕರಣದ ಸಾಮಾಜಿಕ ಎಂಜಿನಿಯರಿಂಗ್ ಸೂತ್ರ 2023 ರ ವಿಧಾನಸಭಾ ಚುನಾವಣೆಯಲ್ಲಿ ಯಶಸ್ವಿಯಾಗಿದೆ.
ಸಿದ್ದರಾಮಯ್ಯ ಅವರನ್ನು ವೈಭವೀಕರಿಸಿದರೆ ಹಿಂದುಳಿದ ವರ್ಗಗಳ ಕೆಲವು ಜಾತಿಯ ಮತಗಳಷ್ಟೇ ಕಾಂಗ್ರೆಸ್ ಪಾಲಿಗೆ ಉಳಿಯಲಿದ್ದು, ಇತರ ಸಮುದಾಯಗಳಿಂದ ಪ್ರತಿಕೂಲ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ಸೇರಿದಂತೆ ಯಾವುದೇ ಒಬ್ಬ ನಾಯಕನನ್ನು ಮುಂಚೂಣಿಗೆ ನಿಲ್ಲಿಸಿದರೂ ಇತರ ಸಮುದಾಯಗಳು ಕಾಂಗ್ರೆಸ್ನಿಂದ ವಿಮುಖರಾಗುವ ಪರಿಸ್ಥಿತಿ ಇದೆ. ಹೀಗಾಗಿ ಎಲ್ಲಾ ನಾಯಕರನ್ನು ಒಗ್ಗೂಡಿಸಿ ಸಾಮೂಹಿಕ ನಾಯಕತ್ವದಡಿ ಕಾಂಗ್ರೆಸ್ ಚುನಾವಣೆ ನಡೆಸಲು ಮುಂದಾಗಿದೆ.
ಎಸ್.ಆರ್.ಶ್ರೀನಿವಾಸ್ರವರ ಹೇಳಿಕೆ ತುಮಕೂರು ಜಿಲ್ಲೆಯಲ್ಲಿ ಕುರುಬ ಸಮುದಾಯದ ಮತಗಳನ್ನು ಕ್ರೋಡೀಕರಿಸಲು ನೆರವಾಗಲಿದೆ ಎಂಬ ಅಂದಾಜಿದೆ.ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ ಎಸ್.ಪಿ.ಮುದ್ದಹನುಮೇಗೌಡ ಲೋಕಸಭಾ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಲಿಂಗಾಯತ ಸಮುದಾಯದ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ.
ಕಾಂಗ್ರೆಸ್ ಒಕ್ಕಲಿಗ, ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿದ್ದು, ಅವುಗಳನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ನಾಯಕರು ಚುನಾವಣಾ ಪ್ರಚಾರದಲ್ಲಿ ನಾನಾ ರೀತಿಯ ಹೇಳಿಕೆಗಳನ್ನು ನೀಡಲಾರಂಭಿಸಿದ್ದಾರೆ. ಆದರೆ ಮುಖ್ಯಮಂತ್ರಿ ಹುದ್ದೆಯನ್ನೇ ಚುನಾವಣೆಗೆ ಪಣಕ್ಕಿಡುವುದು ಆಡಳಿತ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬ ಆಕ್ಷೇಪ ಕೇಳಿಬಂದಿದೆ.
ಮಾಹಿತಿ ಪಡೆದು ಪ್ರತಿಕ್ರಿಯೆ : ಸಿದ್ದು
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ಶಾಸಕರು ನೀಡಿರುವ ಹೇಳಿಕೆಯ ಹಿನ್ನೆಲೆಯ ಬಗ್ಗೆ ಮಾಹಿತಿ ಪಡೆದು ನಂತರ ಪ್ರತಿಕ್ರಿಯಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಬ್ಬಿಯ ಶಾಸಕ ಎಸ್.ಆರ್.ಶ್ರೀನಿವಾಸ್ರವರು ಯಾವ ಸಂದರ್ಭಕ್ಕೆ ಪೂರಕವಾಗಿ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಅದನ್ನು ತಿಳಿಯದೆ ಮಾತನಾಡುವುದು ಸರಿಯಲ್ಲ. ಮೊದಲು ಯಾವ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಕೊಳ್ಳುತ್ತೇನೆ ಎಂದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಾಕಿ ಇರುವ ನಾಲ್ಕು ಕ್ಷೇತ್ರಗಳ ಪೈಕಿ ಬಳ್ಳಾರಿಗೆ ಬಹುತೇಕ ಅಭ್ಯರ್ಥಿಯ ಆಯ್ಕೆ ಆಗಿದೆ. ಉಳಿದ ಮೂರು ಕ್ಷೇತ್ರಗಳ ಬಗ್ಗೆ ನಾವು ಹೈಕಮಾಂಡ್ಗೆ ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ ಎಂದು ಹೇಳಿದರು.