ಚಿಕ್ಕಮಗಳೂರು, ಅ.29- ಮಹಿಳೆಯರು ಹಾಗೂ ಮುಖಂಡರ ಆಡಿಯೋ ವಿಡಿಯೋಗಳನ್ನು ಮುಂದಿಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ ಶಾಸಕರ ಆಪ್ತನಿಗೆ ಅದೇ ಪಕ್ಷದ ಮುಖಂಡರೇ ಮನೆಗೆ ನುಗ್ಗಿ ಧರ್ಮದೇಟು ನೀಡಿರುವ ವಿಡಿಯೋ ವೈರಲ್ ಆಗಿದೆ.ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಬ್ಲಾಕ್‌ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂದಿಸಿದ್ದಾರೆ.
ಚಿಕ್ಕಮಗಳೂರಿನ ಆದಿಶಕ್ತಿ ನಗರದ ನಿವಾಸಿ ಆದಿತ್ಯ ಧರ್ಮದೇಟು ತಿಂದು ಪೊಲೀಸರ ಅತಿಥಿಯಾಗಿದ್ದಾನೆ. ಈತ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಮೋಟಮ ಅವರ ಭಂಟ ಎಂದು ಹೇಳಲಾಗಿದೆ.ಕಾಂಗ್ರೆಸ್ ಪಕ್ಷದ ಮುಖಂಡರು ಮಹಿಳೆಯರ ಆಡಿಯೋ ಹಾಗೂ ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ, ಹಣಕ್ಕಾಗಿ ಪೀಡಿಸುತ್ತಿದ್ದ ಮತ್ತು ಹೆದರಿಸಿ ನಾನು ಹೇಳಿದಂತೆ ಕೇಳಬೇಕೆಂದು ಧಮಕಿ ಹಾಕುತ್ತಿದ್ದ.
ಆದಿತ್ಯನ ಸ್ನೇಹಿತನಾದ ರಾಹಿಲ್ ಷರೀಫ್ ತನ್ನ ಬೆಂಬಲಿಗರೊಂದಿಗೆ ಮನೆಗೆ ನುಗ್ಗಿದ್ದಾನೆ. ಆದಿತ್ಯನ ಜೊತೆ ವಾಗ್ವಾದ ನಡೆಸಿ, ಹಲ್ಲೆ ನಡೆಸಲು ಮುಂದಾದಾಗ ಆತನ ಪತ್ನಿ ಅಡ್ಡ ಬಂದಿದ್ದಾರೆ. ಕೈ ಮುಗಿದು ಪರಿಪರಿಯಾಗಿ ಬೇಡಿಕೊಂಡು ಗಂಡನನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ವಾಗ್ವಾದದೊಂದಿಗೆ ರಾಹಿಲ್ ಷರೀಫ್‌ನ ಬೆಂಬಲಿಗರು ಆದಿತ್ಯನ ಮೇಲೆ ಹಲ್ಲೆ ನಡೆಸಿದ್ದು, ರಕ್ತಸ್ರಾವವಾಗಿದೆ. ಕೊನೆಗೆ ಆದಿತ್ಯನ ಪತ್ನಿ ಅಡ್ಡ ನಿಂತು ಪತಿಯನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ಕಾಪಾಡುವ ಪ್ರಯತ್ನಮಾಡಿದ್ದಾರೆ.
ಈ ಸಂದರ್ಭದಲ್ಲಿ ಆದಿತ್ಯ ರಾಹಿಲ್ ಷರೀಫ್‌ನ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಸಿಟ್ಟುಗೊಂಡ ಬೆಂಬಲಿಗರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯಿಂದ ಮುಜುಗರಕ್ಕೊಳಗಾದ ಶಾಸಕಿ ನಯನ ಮೋಟಮ ಆರೋಪಿಯಿಂದ ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿದೆ.
ಆರೋಪಿ ಆದಿತ್ಯ ತಲೆ ಮರೆಸಿಕೊಂಡಿದ್ದು ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ, ಕಾರ್ಯಾಚರಣೆ ನಡೆಸುವ ಮೂಲಕ ತುಮಕೂರು ಲಾಡ್‌್ಜನಲ್ಲಿ ತಂಗಿದ್ದ ಆತನನ್ನು ಬಂಧಿಸಿದ್ದಾರೆ.
