ಬೆಂಗಳೂರು, ಜು.26- ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 55ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಪತ್ರ ಬರೆದಿದ್ದಾರೆ.ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಅವರನ್ನು ವರ್ಗಾವಣೆ ಮಾಡುವಂತೆ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಸಿಎಂಗೆ ಪತ್ರ ಬರೆದಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿರುವ ಸುಮಾರು 40ಕ್ಕೂ ಹೆಚ್ಚು ಎಕರೆ ಸರ್ಕಾರಿ ಜಾಗಕ್ಕೆ ಪ್ರಭಾವಿಗಳು ಕಾಂಪೌಂಡ್ ಹಾಕಿ ಖಾಸಗಿ ಗಾಲ್ಸ್ ಫ ಕೋರ್ಸ್, ಲೇಔಟ್ ಕೂಡ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಮಾಹಿತಿ ತಿಳಿದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ವರದಿ ಕೇಳಿದ್ದರು.
ಆಗ ಜಿಲ್ಲಾಧಿಕಾರಿ, ತಹಶೀಲ್ದಾರ್ ಪ್ರಭಾವಿಗಳಿಗೆ ಕ್ಲೀನ್ಚಿಟ್ ನೀಡಿ, ಕಂದಾಯ ಇಲಾಖೆಗೆ ಪತ್ರ ಬರೆದಿದ್ದರು. ಬಳಿಕ ಪ್ರಕರಣದ ಆಳಕ್ಕೆ ಇಳಿದು ಸರ್ವೇ ಮಾಡಲು ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಸೂಚನೆ ನೀಡಿದ್ದರು.
ಸರ್ವೇ ಬಳಿಕ ಸತ್ಯ ಹೊರಬಂದಿದ್ದು, ಸರ್ಕಾರಿ ಜಮೀನಿಗೆ ಕಾಂಪೌಂಡ್ ಹಾಕಿರುವುದು ಬಹಿರಂಗವಾಗಿದೆ. ಆಗ ರಾಜೇಂದ್ರ ಕಟಾರಿಯಾ ಅವರು ಈ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲು ಮುಂದಾಗಿದ್ದಾರೆ.
ರಾಜೇಂದ್ರ ಕಟಾರಿಯಾ ಬೆನ್ನಿಗೆ ಸಚಿವ ಕೃಷ್ಣಬೈರೇಗೌಡ ನಿಂತಿದ್ದಾರೆ. ಇದೇ ಕಾರಣಕ್ಕೆ ಕಟಾರಿಯಾ ವಿರುದ್ಧ ಕೆಲವು ಶಾಸಕರು ತಿರುಗಿಬಿದ್ದಿದ್ದಾರೆ.ರಾಜೇಂದ್ರ ಕಟಾರಿಯಾ ಅವರನ್ನು ವರ್ಗಾವಣೆ ಮಾಡುವಂತೆ 55 ಶಾಸಕರು ಸಹಿಯೊಂದಿಗೆ ಮುಖ್ಯಮಂತ್ರಿಗಳಿಗೆ ದೂರು ನೀಡಲಾಗಿದೆ.