Friday, September 20, 2024
Homeರಾಜ್ಯಹೈಟೆಕ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು 'ದುಬಾರಿ ಬಿಲ್‌' ಕಟ್ಟಿದ ಶಾಸಕರು, ಇಲ್ಲಿದೆ ಅನಾರೋಗ್ಯಕ್ಕೊಳಗಾದವರ ಪಟ್ಟಿ

ಹೈಟೆಕ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ‘ದುಬಾರಿ ಬಿಲ್‌’ ಕಟ್ಟಿದ ಶಾಸಕರು, ಇಲ್ಲಿದೆ ಅನಾರೋಗ್ಯಕ್ಕೊಳಗಾದವರ ಪಟ್ಟಿ

ಬೆಂಗಳೂರು,ಆ.25- ಸರ್ಕಾರಿ ಹಣ ಎಂದರೆ ನನಗೂ ಇರಲಿ, ನನ್ನ ಮನೆಯವರಿಗೂ ಇರಲಿ ಎಂಬಂತೆ ಕೋಟಿ ಕೋಟಿ ತೂಕ ಬಾಳುವ ವಿಧಾನಪರಿಷತ್‌ ಸದಸ್ಯರು ಮತ್ತು ಶಾಸಕರು ಒಂದೇ ವರ್ಷದಲ್ಲಿ ಲಕ್ಷಾಂತರ ರೂಪಾಯಿ ವೈದ್ಯಕೀಯ ಬಿಲ್‌ಗಳನ್ನು ಸರ್ಕಾರದಿಂದ ಕ್ಲೈಮ್‌ ಮಾಡಿಕೊಂಡಿದ್ದಾರೆ.

ಬಿಜೆಪಿಯ ವಿಧಾನಪರಿಷತ್‌ ಸದಸ್ಯೆ ಭಾರತಿಶೆಟ್ಟಿ ಒಂದೇ ವರ್ಷದ ಅವಧಿಯಲ್ಲಿ ಅತೀ ಹೆಚ್ಚು ಅಂದರೆ 48.70 ಲಕ್ಷ ಹಣವನ್ನು ಸರ್ಕಾರದಿಂದ ಆರೋಗ್ಯಕ್ಕಾಗಿ ಬಿಲ್‌ ಪಾವತಿಸಿಕೊಂಡಿದ್ದಾರೆ.

ಎರಡನೇ ಸ್ಥಾನದಲ್ಲಿ ಮಾಜಿ ಸಚಿವ ಹಾಗೂ ಹಾಲಿ ವಿಧಾನಪರಿಷತ್‌ ಸದಸ್ಯರಾಗಿರುವ ಸಿ.ಪಿ.ಯೋಗೇಶ್ವರ್‌ 39.64 ಲಕ್ಷ, ಸಚಿವೆ ಲಕ್ಷ್ಮೀಹೆಬ್ಬಾಳ್ಕರ್‌ ಸಹೋದರ ಚನ್ನರಾಜ್‌ ಹಟ್ಟಿಹೊಳಿ 17.03 ಲಕ್ಷ ಹಣವನ್ನು ಒಂದೇ ವರ್ಷದಲ್ಲಿ ಪಡೆದುಕೊಂಡಿದ್ದಾರೆ.
ಸಾಮಾಜಿಕ ಹೋರಾಟಗಾರ ವೆಂಕಟೇಶ್‌ ಎಂಬುವರು ಮಾಹಿತಿ ಹಕ್ಕು ಆಯೋಗದಿಂದ ಪಡೆದುಕೊಂಡಿರುವ ದಾಖಲೆಗಳಲ್ಲಿ ಇದು ಬಹಿರಂಗವಾಗಿದೆ.

ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾದರೆ ಅವರಿಗೆ ಸರ್ಕಾರದ ವತಿಯಿಂದಲೇ ಹಣವನ್ನು ಕ್ಲೈಮ್‌ ಮಾಡಲಾಗುತ್ತದೆ. ನಿಯಮಗಳ ಪ್ರಕಾರ ಸರ್ಕಾರಿ ಆಸ್ಪತ್ರೆ ಹಾಗೂ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು.

ಆದರೆ ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವ ಜನಪ್ರತಿನಿಧಿಗಳು ತಾವು ಮಾತ್ರ ಹೈಟೆಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂಬ ನೀತಿ ಬೋಧನೆ ಮಾಡುತ್ತಾರೆ.ವಿಶೇಷವೆಂದರೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರಗಳಲ್ಲಿ ಕೋಟಿಕೋಟಿ ಬಾಳುವ ಜನಪ್ರತಿನಿಧಿಗಳೇ ಈ ವರ್ಷ ಸರ್ಕಾರದ ಹಣದಿಂದಲೇ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಮೊದಲನೇ ಸ್ಥಾನ ಭಾರತಿಶೆಟ್ಟಿಗೆ ಸಲ್ಲಿದರೆ, ಸಿ.ಪಿ.ಯೋಗೇಶ್ವರ್‌, ಚೆನ್ನರಾಜ ಹಟ್ಟಿಹೊಳಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್‌, ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ್‌ ಸವದಿ, ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಹೆಚ್ಚು ವೈದ್ಯಕೀಯ ಬಿಲ್‌ ಕ್ಲೈಮ್‌ ಮಾಡಿದವರು :
ಭಾರತಿಶೆಟ್ಟಿ – 48.70 ಲಕ್ಷ
ಸಿ.ಪಿ.ಯೋಗೇಶ್ವರ್‌ – 39.64 ಲಕ್ಷ
ಚನ್ನರಾಜ ಹಟ್ಟಿಹೊಳಿ – 17.03 ಲಕ್ಷ
ಗೋವಿಂದ ರಾಜ್‌ – 7.26 ಲಕ್ಷ
ಲಕ್ಷ್ಮಣ್‌ ಸವದಿ – 2.41 ಲಕ್ಷ
ಟಿ.ಎ.ಶರವಣ – 2.14 ಲಕ್ಷ
ಹರೀಶ್‌ ಕುಮಾರ್‌ – 2 ಲಕ್ಷ ರೂಪಾಯಿ
ಮರಿತಿಬ್ಬೇಗೌಡ – 1,54,995 ರೂಪಾಯಿ
ಎನ್‌‍. ವಾಯ್‌ ನಾರಾಯಣಸ್ವಾಮಿ – 3 ಲಕ್ಷ ರೂಪಾಯಿ
ಅಬ್ದುಲ್‌ ಜಬ್ಬಾರ್‌- 1,1,345 ರೂಪಾಯಿ
ಸುಧಾಮ್‌ ದಾಸ್‌‍ – 2,04,542 ರೂಪಾಯಿ
ಸುನೀಲ್‌ ವಲ್ಯಾಪುರೆ – 2,75,000 ರೂಪಾಯಿ
ಛಲವಾದಿ ನಾರಾಯಣಸ್ವಾಮಿ – 1,18,828 ರೂಪಾಯಿ
ವೈ.ಎಂ.ಸತೀಶ್‌ – 2,77,559 ರೂಪಾಯಿ
ಮಧು ಮಾದೇಗೌಡ – 2,46,233 ರೂಪಾಯಿ
ಮಧು ಮಾದೇಗೌಡ – 2,46,233 ರೂಪಾಯಿ
ರಘುನಾಥ್‌ ಮಲ್ಕಾಪುರೆ – 1,34,823 ರೂಪಾಯಿ
ಎಂ.ಜಿ.ಮೂಳೆ – 2,24,282 ರೂಪಾಯಿ

RELATED ARTICLES

Latest News