ಬೆಂಗಳೂರು : ಆರ್ಥಿಕ ಮಟ್ಟ ಸುಧಾರಿಸಿದಂತೆ, ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಪ್ರತಿಯೊಬ್ಬರ ಕೈಯಲ್ಲಿ ಈಗ ಮೊಬೈಲ್ ಸೆಟ್ಗಳಿವೆ. ಕುಗ್ರಾಮಗಳಲ್ಲೂ ಸಹ ಈಗ ಮೊಬೈಲ್ಗಳು ಸದ್ದು ಮಾಡುತ್ತಿದ್ದು, ಅಷ್ಟರಮಟ್ಟಿಗೆ ಆಗಿದೆ ಸಂಪರ್ಕ ಕ್ರಾಂತಿ.
ಒಮೆ ಮೊಬೈಲ್ ಸೆಟ್ಟನ್ನು ತೆಗೆದುಕೊಂಡು ಸಿಮ್ ಹಾಕಿಕೊಳ್ಳು ವುದು ಸುಲಭ. ಆದರೆ ಅದನ್ನು ಜೋಪಾನವಾಗಿ ಕಾಪಾಡಿಕೊಂಡು ತಮ ಬಳಿ ಇಟ್ಟುಕೊಳ್ಳುವುದು ಬಹಳ ಕಷ್ಟ. ಕೆಲವರು ಕುಳಿತಲ್ಲೇ ಮೊಬೈಲನ್ನು ಮರೆತು ಹೋಗುತ್ತಾರೆ, ಪರಿಚಯದವರಿಗೆ ಸಿಕ್ಕಿದರೆ ಪರವಾಗಿಲ್ಲ ತಂದುಕೊಡುತ್ತಾರೆ. ಇಲ್ಲದಿದ್ದರೆ ಆ ಮೊಬೈಲ್ ಮತ್ತೆ ಸಿಗುವುದಿಲ್ಲ.
ನೂಕುನುಗ್ಗಲಿನಲ್ಲಿ, ರೈಲು, ಬಸ್ ಹತ್ತುವಾಗ ಬಹಳಷ್ಟು ಜನಸಂದಣಿ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಸಮಯ ನೋಡಿ ನಿಮ ಮೊಬೈಲ್ ಸೆಟ್ಟನ್ನು ಎಗರಿಸುತ್ತಾರೆ ಐನಾತಿ ಕಳ್ಳರು. ಅದರಲ್ಲೂ ಬೆಂಗಳೂರು ನಗರದಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತಾ ಮನೆ ಮುಂದೆ ನಿಂತಿದ್ದರೆ ಅಥವಾ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೆ ದ್ವಿಚಕ್ರ ವಾಹನದಲ್ಲಿ ಬರುವ ದರೋಡೆಕೋರರು ಕ್ಷಣಾರ್ಧದಲ್ಲಿ ಅವರ ಮೊಬೈಲ್ ಅನ್ನು ಕಿತ್ತುಕೊಂಡು ಪರಾರಿಯಾಗುತ್ತಾರೆ.
ಒಂದು ವೇಳೆ ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ನಡೆದು ಹೋಗುತ್ತಿದ್ದರೆ ಅಡ್ಡಗಟ್ಟಿ ಬೆದರಿಸುವ ದರೋಡೆಕೋರರು ಹಣ, ಆಭರಣ ಇಲ್ಲದಿದ್ದರೆ ಕೊನೆಗೆ ಮೊಬೈಲನ್ನೂ ಬಿಡದೆ ಕಸಿದುಕೊಂಡು ಹೋಗುತ್ತಾರೆ.
ಪೊಲೀಸರ ಅಂಕಿ-ಅಂಶಗಳ ಪ್ರಕಾರ ಬೆಂಗಳೂರು ನಗರದಲ್ಲಿ ಕಳೆದ ವರ್ಷ ಒಟ್ಟಾರೆ 671 ದರೋಡೆಗಳು ಆಗಿದ್ದರೆ ಅದರಲ್ಲಿ 385 ಮೊಬೈಲ್ ದರೋಡೆ ಪ್ರಕರಣಗಳು ಸೇರಿವೆ. ಈ ವರ್ಷ ಜುಲೈವರೆಗೆ ನಗರದಲ್ಲಿ 430 ದರೋಡೆ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 259 ಮೊಬೈಲ್ ದರೋಡೆ ಪ್ರಕರಣಗಳಿವೆ.
ಅಂದರೆ ಅಂಕಿ-ಅಂಶಗಳ ಪ್ರಕಾರ ಸರಾಸರಿ ಬೆಂಗಳೂರು ನಗರದಲ್ಲಿ ದಿನಕ್ಕೊಂದು ಮೊಬೈಲ್ ದರೋಡೆಯಾಗುತ್ತದೆ. ಆದರೆ ಬಹಳಷ್ಟು ಮಂದಿ ಮೊಬೈಲ್ ಕಳ್ಳತನವಾದರೆ ಅಥವಾ ದರೋಡೆಯಾದರೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವುದಿಲ್ಲ. ಪೊಲೀಸ್ ಠಾಣೆಗೆ ಹೋದರೆ ಪೊಲೀಸರು ಹತ್ತಾರು ಪ್ರಶ್ನೆ ಕೇಳುತ್ತಾರೆ. ನಮಗೇಕೆ ಆ ತಲೆನೋವು ಎಂದು ಸುಮನಾಗಿಬಿಡುತ್ತಾರೆ.
ಇದು ಬಹಳ ತಪ್ಪು. ನಿಮ ಮೊಬೈಲ್ ದರೋಡೆಯಾದರೆ ಅಥವಾ ಎಲ್ಲಿಯಾದರೂ ಕಳೆದುಕೊಂಡರೆ ಸಿಮ್ ಯಾವುದೇ ಆಗಿರಲಿ ತಕ್ಷಣ ಬ್ಲಾಕ್ ಮಾಡಿಸಿ.ನಿಮ ಮೊಬೈಲ್ ದರೋಡೆಯಾಗಿ ದ್ದರೆ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ. ದಾಖಲಾಗುವ ಎಫ್ಐಆರ್ ಅನ್ನು ತೆಗೆದು ಇಟ್ಟುಕೊಳ್ಳಿ. ಒಂದು ವೇಳೆ ಮೊಬೈಲ್ ಕಳೆದು ಕೊಂಡರೆ ಇ-ಲಾಸ್ನಲ್ಲಿ ಲ್ಯಾಗಿನ್ ಆಗಿ ದೂರು ದಾಖಲಿಸಿ ಒಂದು ಪ್ರತಿಯನ್ನು ಪಡೆದುಕೊಳ್ಳಿ.ಹೋದರೆ ಹೋಯಿತು ಇನ್ನೊಂದು ಮೊಬೈಲ್ ಸೆಟ್ಟನ್ನು ತೆಗೆದುಕೊಳ್ಳುವ ಅಂದರೆ ನಿಮಗ ಕಾದಿದೆ ಗಂಡಾಂತರ.
ದೂರು ನೀಡಿದರೆ ಏನು ಪ್ರಯೋಜನ ಅಂತೀರಾ. ಪ್ರತಿಯೊಂದು ಮೊಬೈಲ್ ಸೆಟ್ಟಿನಲ್ಲಿ ಐಎಂಇಐ ಇದೆ. ನೀವು ಮೊಬೈಲ್ ಖರೀದಿಸುವಾಗ ನಿಮ ರಸೀತಿಯಲ್ಲಿ ಅದರ ಸಂಖ್ಯೆ ಇರುತ್ತದೆ. ಇದನ್ನು ನೀವು ಡೈರಿಯಲ್ಲಿ ಬರೆದುಕೊಂಡರೆ ಉತ್ತಮ.
ಮೊಬೈಲ್ ಕಳುವಾದರೆ ಅಥವಾ ದರೋಡೆಯಾದಾಗ ನೀವು ನೀಡುವ ದೂರಿನಲ್ಲಿ ಈ ಐಎಂಇಐ ನಂಬರನ್ನು ನಮೂದಿಸಿದರೆ ಬಹಳ ಒಳ್ಳೆಯದು. ಇದು ಪೊಲೀಸರು ನಿಮ ಮೊಬೈಲ್ ಅನ್ನು ಹುಡುಕುವುದಕ್ಕೆ ಅನುಕೂಲವಾಗುತ್ತದೆ. ಒಂದು ವೇಳೆ ನಿಮ ಮೊಬೈಲ್ ಮತ್ತೆ ನಿಮಗೆ ಸಿಗಬಹುದು. ನಿಮ ಮೊಬೈಲ್ ಕಳೆದು ಹೋದರೆ ಅಥವಾ ದರೋಡೆಯಾದರೆ ಉದಾಸೀನ ಮಾಡದೇ ತಕ್ಷಣ ಪೊಲೀಸರಿಗೆ ದೂರು ನೀಡಿ. ಗಂಡಾಂತರದಿಂದ ತಪ್ಪಿಸಿಕೊಳ್ಳಿ.
ಮೊಬೈಲ್ ಕಿಡಿಗೇಡಿಗಳಿಗೆ ಸಿಕ್ಕರೆ ಸಂಕಷ್ಟ ಕಟ್ಟಿಟ್ಟ ಬುತ್ತಿ
ಒಂದು ವೇಳೆ ನೀವು ಕಳೆದುಕೊಂಡ ಅಥವಾ ದರೋಡೆಯಾದ ಸಿಮ್ ಸಹಿತ ಮೊಬೈಲ್ ಉಗ್ರಗಾಮಿಗಳ ಕೈ ಸೇರಿದರೆ ಏನು ಮಾಡುತ್ತೀರಿ? ಆತ ನಿಮ ಮೊಬೈಲ್ ಬಳಸಿ ವಿಧ್ವಂಸಕ ಕೃತ್ಯವೆಸಗಿದರೆ ಆಗ ನಿಮಗೆ ತೊಂದರೆ ಅಲ್ಲವೇ? ಅಥವಾ ಕಿಡಿಗೇಡಿಯೊಬ್ಬನ ಕೈಗೆ ಸಿಕ್ಕಿದರೆ ಆತ ಮಹಿಳೆಯೊಬ್ಬರಿಗೆ ಅಶ್ಲೀಲ ಸಂದೇಶ ಅಥವಾ ವಾಟ್ಸಾಪ್ ಕಳುಹಿಸಿದರೆ ಏನು ಮಾಡುತ್ತೀರಿ? ಹೀಗೆ ಅಕ್ರಮಗಳಿಗೆ ನಿಮ ಮೊಬೈಲ್ ಬಳಸಿದರೆ ನಿಮಗೇ ಸಂಕಷ್ಟ. ಆದ್ದರಿಂದ ಪೊಲೀಸರಿಗೆ ದೂರು ನೀಡಿ.