ಬೆಂಗಳೂರು, ಜು.1- ರಾಜ್ಯದಲ್ಲಿ ನಾಲ್ಕೈದು ದಿನಗಳಿಂದ ಮಳೆ ಪ್ರಮಾಣ ಇಳಿಕೆಯಾಗಿದ್ದು, ಪ್ರಮುಖ ನದಿಗಳ ನೀರಿನ ಮಟ್ಟವೂ ಇಳಿಕೆಯಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ. ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಮುಂದುವರೆದಿದೆ.
ವಾತಾವರಣದಲ್ಲಿ ಉಂಟಾಗಿರುವ ಕೆಲವು ಬದಲಾವಣೆಗಳಿಂದಾಗಿ ರಾಜ್ಯದ ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕರಾವಳಿ ಹಾಗೂ ಕರಾವಳಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ನಿನ್ನೆ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದೆ. ಕೆಲವೆಡೆ ಚದುರಿದಂತೆ ಮಳೆಯಾಗಿದ್ದು, ಮತ್ತೆ ಕೆಲವೆಡೆ ಅಲ್ಲಲ್ಲಿ ಅತ್ಯಲ್ಪ ಮಳೆಯಾಗಿದ್ದು, ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆದಿದೆ.
ಇದರಿಂದ ಪ್ರಮುಖ ನದಿಗಳ ನೀರಿನ ಮಟ್ಟ ಹಾಗೂ ಜಲಾಶಯಗಳ ಒಳ ಹರಿವು ಮತ್ತು ಹೊರ ಹರಿವಿನಲ್ಲಿ ಇಳಿಕೆಯಾಗಿದೆ. ಒಟ್ಟಾರೆ, ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಶೇ.60ಕ್ಕೂ ಹೆಚ್ಚು ನೀರು ಸಂಗ್ರಹವಾಗಿದ್ದು, ಕಳೆದ ಬಾರಿಗಿಂತ ದುಪ್ಪಟ್ಟು ನೀರು ಸಂಗ್ರಹವಾಗಿದೆ.
ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಪರವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 72.5 ಮಿ.ಮೀ.ನಷ್ಟು ರಾಜ್ಯದಲ್ಲೇ ಅತಿ ಹೆಚ್ಚು ಮಳೆಯಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಇಂದಿನಿಂದ ಮೂರು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ.
ಮುಂಗಾರು ಹಂಗಾಮಿನ ಮೊದಲ ತಿಂಗಳಾದ ಜೂನ್‌ನಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. 66 ಮಿ.ಮೀ. ವಾಡಿಕೆ ಮಳೆಗೆ 50 ಮಿ.ಮೀ. ನಷ್ಟು ಮಳೆಯಾಗಿದ್ದು, ಶೇ.24ರಷ್ಟು ಮಳೆ ಕೊರತೆ ಉಂಟಾಗಿದೆ. ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಶೇ. 6ರಷ್ಟು ಕಡಿಮೆ ಮಳೆಯಾಗಿದೆ. ಆದರೆ, ಮಲೆನಾಡಿನಲ್ಲಿ ಶೇ.14, ಕರಾವಳಿಯಲ್ಲಿ ಶೇ.6 ಹಾಗೂ ರಾಜ್ಯದಲ್ಲಿ ಶೇ. 2ರಷ್ಟು ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಜೂನ್ ಒಂದರಿಂದ 30ರ ವರೆಗಿನ ಅವಧಿಯಲ್ಲಿ ರಾಜ್ಯದ ವಾಡಿಕೆ ಮಳೆ ಪ್ರಮಾಣ 199 ಮಿ.ಮೀ. ಆಗಿದ್ದು, 203 ಮಿ.ಮೀ.ನಷ್ಟು ಮಳೆ ಬಿದ್ದಿದೆ.