ಬೆಂಗಳೂರು, ಮಾ.13– ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜೈಲಿನೊಳಗಿನ ಅಪರಾಧ ಹಾಗೂ ಅಕ್ರಮಗಳ ತಡೆಗಟ್ಟಲು ಕಟ್ಟು ನಿಟ್ಟಿನ ಕ್ರಮ ವಹಿಸಿದ್ದೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ವಿಧಾನಪರಿಷತ್‌ನಲ್ಲಿ ಹೇಳಿದರು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರ ಪ್ರಶ್ನೆಗೆ ಗೃಹ ಸಚಿವ ಪರಮೇಶ್ವರ್ ಅವರು, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜೈಲಿನಲ್ಲಿ ನಡೆಯುತ್ತಿರುವ ಆಕ್ರಮಗಳಿಗೆ ಕಡಿವಾಣ ಹಾಕಲಾಗಿದೆ. ಜೊತೆಗೆ ಹೈ ರೆಸ್ಯೂಲೂಷನ್ ಜಾಮರ್ ಗಳ ಅಳವಡಿಕೆ ಮಾಡಿ ಅಪರಾಧಿಗಳ ನಡುವಿನ ಸಂವಹನಕ್ಕೆ ಕಡಿತ ಹಾಕಲಾಗಿದೆ ಎಂದು ತಿಳಿಸಿದರು.
ಇನ್ನಷ್ಟು ಪರಿಣಾಮಕಾರಿಯಾಗಿ ಜೈಲೊಳಗಿನ ಅಕ್ರಮಗಳನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ. ಬೆಂಗಳೂರನ್ನೂ ಒಳಗೊಂಡಂತೆ ರಾಜ್ಯಾದ್ಯಂತ 250ಕ್ಕೂ ಅಧಿಕ ಎಐ ಕ್ಯಾಮರಾಗಳ ಅಳವಡಿಕೆ ಮಾಡಲಾಗಿದೆ. ಡ್ರಗ್‌್ಸ ತಡೆಗೂ ಅಗತ್ಯ ಕ್ರಮ ಜರುಗಿಸಲಾಗುತ್ತಿದೆ. ಸುಮಾರು 240 ಕ್ಕೂ ಅಧಿಕ ಪ್ರಕರಣಗಳ ತನಿಖೆ ನಡೆಸಲಾಗಿದೆ. ಅದೇ ರೀತಿ ಕೆಲ ಪ್ರಕರಣಗಳಿಗೆ ಶಿಕ್ಷೆಯನ್ನೂ ನೀಡಲಾಗಿದೆ ಎಂದು ಪರಮೇಶ್ವರ್ ಸದನಕ್ಕೆ ಮಾಹಿತಿ ನೀಡಿದರು.
ಇದು ಹೊಸದಲ್ಲ. ಇವತ್ತಿನ ಕಾಲಕ್ಕೆ ಇದು ಹೊಸದಾಗಿ ಉಳಿದಿಲ್ಲ. ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಲೇ ಇದೆ. ಇದು ಇಡೀ ದೇಶದಲ್ಲಿ ಹಿಂದಿನಿಂದಲೂ ನಡೆಯುತ್ತಲೇ ಇದೆ. ಇದನ್ನು ನಾನು ಸಮರ್ಥನೆ ಮಾಡುವುದಿಲ್ಲ. ಸರ್ಕಾರದ ಗಮನಕ್ಕೂ ಇದು ಬಂದಿದ್ದು, ಸರ್ಕಾರ ಒಂದಿಷ್ಟು ಅಧಿಸೂಚನೆ ಹೊರಡಿಸಿದೆ. ಅಷ್ಟೇ ಅಲ್ಲ ನಾವು ಅನೇಕ ಕ್ರಮ ಕೂಡ ತೆಗೆದುಕೊಂಡಿದ್ದೇವೆ ಎಂದರು.
ಜೈಲಿನಲ್ಲಿರುವ ಗಾರ್ಡ್‌ಗಳ ಮೇಲೂ ಕೂಡ ಆರೋಪ ಕೇಳಿ ಬಂದಿತ್ತು. ಹಾಗಾಗಿ ಕೆಎಎಸ್ ಐಎಎಸ್ ದರ್ಜೆಯ ಅಧಿಕಾರಿಗಳನ್ನೂ ಹಾಕಿದ್ದೇವೆ. ಕಠಿಣ ಕ್ರಮ ಕೂಡ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ಪರಪ್ಪನ ಅಗ್ರಹಾರದಲ್ಲೂ ಇದೇ ರೀತಿ ನಡೆಯುತ್ತಿತ್ತು. ಇಲ್ಲಿಯೂ ಸಾಕಷ್ಟು ಕ್ರಮ ವಹಿಸಿದ್ದೇವೆ. ಈಗ ಅಲ್ಲಿ ಜಾಮರ್‌ಗಳನ್ನು ಹಾಕಿದ್ದೇವೆ. ಈ ಜಾಮರ್ ಹಾಕಿದರೆ ಸುತ್ತ ಮುತ್ತ ಮನೆಗಳಿಗೆ ನೆಟ್ವರ್ಕ್ ಸಿಗುತ್ತಿರಲಿಲ್ಲ. ಹಾಗಾಗಿ ಪರಿಣಿತರ ಮೊರೆ ಕೂಡ ಹೋಗಿದ್ದೇವೆ ಎಂದು ವಿವರಣೆ ನೀಡಿದರು.
ಬೆಂಗಳೂರು ಒಂದರಲ್ಲೇ 280 ಎಐ ಕ್ಯಾಮರಾ ಅಳವಡಿಸಲಾಗಿದೆ. ಡ್ರಗ್‌್ಸ ಪೂರೈಕೆ ಆಗುತ್ತಿದೆ ಎಂಬ ಆರೋಪವಿದೆ. ಇದನ್ನು ತಡೆಗಟ್ಟಲು ಶ್ವಾನ ದಳ ಉಪಯೋಗ ಮಾಡಲಾಗುತ್ತಿದೆ. ಜೊತೆಗೆ ನಾವು ತಪಾಸಣೆಯನ್ನು ಚುರುಕುಗೊಳಿಸಿದ್ದೇವೆ. 248 ಪ್ರಕರಣ ನಾವು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
22 ಅಧಿಕಾರಿಗಳ ಮೇಲೆ 9 ಬೇರೆಬೇರೆ ಪ್ರಕರಣದಲ್ಲಿ ಕ್ರಮ ಆಗಿದೆ. ಹಿಂಡಲಗಾ ಜೈಲಿನಿಂದ ಗಡ್ಕರಿ ಅವರಿಗೆ ಕರೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದನ್ನು ಕೂಡಾ ನಾವು ವಿಚಾರಣೆ ಮಾಡಿದ್ದೇವೆ ಎಂದು ಹೇಳಿದರು.