Tuesday, July 2, 2024
Homeರಾಷ್ಟ್ರೀಯ"ಚಾರ್ ಸೊ ಪಾರ್" ರಣತಂತ್ರ ಯಶಸ್ವಿ, 3ನೇ ಅವಧಿಗೂ ಮೋದಿ ಅಧಿಕಾರಕ್ಕೇರೋದು ಫಿಕ್ಸ್..!?

“ಚಾರ್ ಸೊ ಪಾರ್” ರಣತಂತ್ರ ಯಶಸ್ವಿ, 3ನೇ ಅವಧಿಗೂ ಮೋದಿ ಅಧಿಕಾರಕ್ಕೇರೋದು ಫಿಕ್ಸ್..!?

ಬೆಂಗಳೂರು, ಮೇ 25- ಶತಾಯಗತಾಯ ಕೇಂದ್ರದಲ್ಲಿ ಮೂರನೇ ಬಾರಿಗೆ ಸ್ಪಷ್ಟ ಜನಾದೇಶ ಪಡೆದು ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ರೂಪಿಸಿದ ರಾಜಕೀಯ ರಣತಂತ್ರದಲ್ಲಿ ಯಶಸ್ವಿಯಾಗಿ ಇಂಡಿ ಮೈತ್ರಿಕೂಟವನ್ನು ಹತ್ತಿಕ್ಕುವಲ್ಲಿ ಸಫಲವಾಗಿದೆಯೇ?

6ನೇ ಹಂತದ ಮತದಾನ ಮುಗಿದು ಇನ್ನೇನು ಕೊನೆಯ ಹಂತ ಅಂದರೆ 7ನೇ ಸುತ್ತಿನ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ದೇಶದ ಗಲ್ಲಿ ಗಲ್ಲಿಗಳಲ್ಲೂ ನಡೆಯುತ್ತಿರುವ ಚರ್ಚೆ ಒಂದೇ! ಅದುವೇ ಬಿಜೆಪಿ ಈ ಬಾರಿ ಎಷ್ಟು ಸ್ಥಾನವನ್ನು ಗೆಲ್ಲಲಿದೆ. ಪ್ರಧಾನಿ ಮೋದಿ ಮತ್ತೇ ಅಧಿಕಾರಕ್ಕೆ ಬರಲಿದ್ದಾರೆಯೇ ಅಂದರೆ ಅವರು ಅಂದುಕೊಂಡಂತೆ 400 ಸ್ಥಾನಗಳನ್ನು ಗೆದ್ದು ದಾಖಲೆ ಬರೆಯಲಿದ್ದಾರೆ. ಹೀಗೆ ತರಹೇವಾರಿಯಾಗಿ ಚರ್ಚೆಗಳು ಪ್ರಾರಂಭವಾಗಿದೆ.

ರಾಜಕೀಯ ವಿಶ್ಲೇಷಕರು ಈಗಾಗಲೇ ಚುನಾವಣೆಯ ಫಲಿತಾಂಶ ಕುರಿತಂತೆ ತಮದೇ ಆದ ಅಭಿಪ್ರಾಯಗಳನ್ನು ಹೊರ ಹಾಕಿದ್ದಾರೆ. ಏನೇ ಆದರೂ ಈ ಬಾರಿ ಕೇಂದ್ರದಲ್ಲಿ ನರೇಂದ್ರಮೋದಿ ಅವರೇ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆಂಬ ಭವಿಷ್ಯವನ್ನು ನುಡಿದಿದ್ದಾರೆ.

ಸಂಸತ್‌ ಚುನಾವಣೆಯಿಂದ ಹಿಡಿದು ವಿಧಾನಸಭೆ ಚುನಾವಣೆವರೆಗೂ ನಿಖರವಾಗಿ ಜನರ ನಾಡಿಮಿಡಿತ ಅರಿತು ಫಲಿತಾಂಶ ಹೇಳುವ ಚುನಾವಣಾ ಚಾಣುಕ್ಯರೆನಿಸಿದ ಪ್ರಶಾಂತ್‌, ಕಿಶೋರ್‌, ನರೇಶ್‌ ಅರೋರಾ, ಯೋಗೇಂದ್ರ ಯಾದವ್‌ ಸೇರಿದಂತೆ ಅನೇಕರು ಬಿಜೆಪಿಯೇ ಅಧಿಕಾರಕ್ಕೆ )ಬರಲಿದೆ, ಇದರಲ್ಲಿ ಯಾವ ಅನುಮಾನವೂ ಬೇಡ. ಕಾಂಗ್ರೆಸ್‌‍ ಯಾವುದೇ ಕಾರಣಕ್ಕೂ ಮೂರಂಕಿ ದಾಟುವುದಿಲ್ಲ. ಹೆಚ್ಚೆಂದರೆ ಅಧಿಕೃತ ವಿರೋಧ ಪಕ್ಷಕ್ಕೆ ಬೇಕಾದ ಸ್ಥಾನ (55)ಕ್ಕಿಂತ ಹೆಚ್ಚು ಪಡೆಯಬಹುದೆಂದು ಅಂದಾಜಿಸಿದ್ದಾರೆ.

ಇದೇ ರೀತಿ ದೇಶದ ಯಾವುದೇ ಚುನಾವಣೆಗಳನ್ನು ನಿಖರವಾಗಿ ಭವಿಷ್ಯ ನುಡಿಯುವ ಸತ್ತಾ ಬಜಾರ್‌ ಕೂಡ ಬಿಜೆಪಿಗೆ ಬಹುಪರಾಖ್‌ ಹೇಳಿದೆ. ಏನೇ ವ್ಯತ್ಯಾಸಗಳಾದರೂ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ನಿಖರವಾಗಿ ಹೇಳಿದ್ದಾರೆ.

ಆಪ್‌ ಕೀ ಬಾರ್‌ ಚಾರ್‌ ಸೌ ಯಶಸ್ವಿಯಾಯಿತೇ?:
ಪ್ರತಿಯೊಂದು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವ ಬಿಜೆಪಿ ಚುನಾವಣೆ ಘೋಷಣೆಯಾಗುವ ಮುನ್ನವೇ ತಾನೇ ರೂಪಿಸಿದ ರಣತಂತ್ರದಲ್ಲಿ ವಿರೋಧ ಪಕ್ಷಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯಗಳಿಂದ ಕೇಳಿಬರುತ್ತಿದೆ.

ಚುನಾವಣೆ ಘೋಷಣೆಯಾಗುವ ಮೊದಲೇ ವಿರೋಧ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದು ಹೋಗುವ ಬಿಜೆಪಿ ಈ ಬಾರಿ ಆಪ್‌ ಕೀ ಬಾರ್‌ ಚಾರ್‌ ಸೌ ಘೋಷವಾಕ್ಯವನ್ನು ಹಳ್ಳಿಯಿಂದ ದಿಲ್ಲಿವರೆಗೂ ತನ್ನ ಕಾರ್ಯಕರ್ತರಿಗೆ ಅಥವಾ ಮತದಾರರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು.

ನಾವು ಈ ಬಾರಿ ಕೇವಲ ಅಧಿಕಾರಕ್ಕೆ ಮಾತ್ರ ಬರುವುದಿಲ್ಲ. ಅದು 400 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ ಪ್ರಧಾನಿ ನರೇಂದ್ರಮೋದಿ ಅವರು ಆಪ್‌ ಕೀ ಬಾರ್‌ ಚಾರ್‌ ಸೌ ಘೋಷ ವಾಕ್ಯ ಕಾರ್ಯಕರ್ತರನ್ನು ಸೂಜಿಗಲ್ಲಿನಂತೆ ಸೆಳೆಯಿತು.

ಮೊದಲ ಚುನಾವಣಾ ಪ್ರಚಾರದಿಂದ ಹಿಡಿದು ಕೊನೆಯ ಚುನಾವಣೆವರೆಗೂ ಮೋದಿಯವರು ಕಾರ್ಯಕರ್ತರಿಗೆ ಪ್ರೇರೇಪಿಸಿದ ಒಂದೇ ಆಪ್‌ ಕೀ ಬಾರ್‌ ಚಾರ್‌ ಸೌ. ಬಿಜೆಪಿ ರೂಪಿಸಿದ ಈ ರಣತಂತ್ರವನ್ನು ಬೇಧಿಸಲು ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿ ಎಚ್ಚೆತ್ತುಕೊಳ್ಳುವಲ್ಲಿ ಸಾಕಷ್ಟು ಸಮಯ ಮುಗಿದು ಹೋಗಿತ್ತು.

ಇಂಡಿ ಮೈತ್ರಿಕೂಟ ತಾನು ಗೆಲ್ಲುವುದಕ್ಕಿಂತ ಹೆಚ್ಚಾಗಿ ಬಿಜೆಪಿ 400 ಸ್ಥಾನಗಳನ್ನು ಗೆಲ್ಲದಂತೆ ತಡೆಯುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದೆ ಹೊರತು, ಗೆಲ್ಲಲು ಬೇಕಾದ ರಣತಂತ್ರಗಳನ್ನು ರೂಪಿಸಲು ಹಿಂದೆ ಬಿದ್ದಿತು. ಇಂಡಿ ಮೈತ್ರಿಕೂಟದಲ್ಲಿ ತಾಳಮೇಳ ಎಲ್ಲವೂ ಸರಿಯಿರಲಿಲ್ಲ. ಮೋದಿಗೆ ಸ್ಪರ್ಧೆಯೊಡ್ಡುವಂತಹ ಪ್ರಬಲ ನಾಯಕನೂ ಇಲ್ಲದಿರುವುದು ಒಂದು ಕಡೆಯಾದರೆ ತಾವು ಗೆಲ್ಲುವುದಕ್ಕಿಂತ ಹೆಚ್ಚಾಗಿ ಬಿಜೆಪಿಯನ್ನು 400 ರ ಗಡಿ ದಾಟದಂತೆ ತಡೆಯುವುದರ ಬಗ್ಗೆಯೇ ಹೆಚ್ಚು ಚಿಂತಾಕ್ರಾಂತರಾಗಿದ್ದರು.

ಮೋದಿ ಹೋದಕಡೆಯಲ್ಲೆಲ್ಲಾ ಆಪ್‌ ಕೀ ಬಾರ್‌ ಚಾರ್‌ ಸೌ ಎಂದು ಹೇಳುವ ಮೂಲಕವೇ ತಮ ಭಾಷಣವನ್ನು ಆರಂಭಿಸಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಾ ಮತದಾನದಲ್ಲಿ ಪಾಲ್ಗೊಳ್ಳುವಂತೆ ರೂಪಿಸಿದ ತಂತ್ರ ಫಲ ನೀಡಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.

ಇತ್ತೀಚೆಗೆ ಖಾಸಗಿ ಸುದ್ದಿವಾಹನವೊಂದರಲ್ಲಿ ಸಂದರ್ಶನ ನೀಡಿದ್ದ ಮೋದಿ ಮೊದಲ ಬಾರಿಗೆ ತಮ ಚುನಾವಣಾ ತಂತ್ರವನ್ನು ಬಹಿರಂಗಪಡಿಸಿದ್ದರು. ನಾವು 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದಾಗ ವಿರೋಧಪಕ್ಷಗಳು ನಂಬಲಿಲ್ಲ. ಬದಲಿಗೆ ಅವರು ಬಿಜೆಪಿಯನ್ನು 300 ಸ್ಥಾನಗಳಿಗೆ ಕಟ್ಟಿಹಾಕಬೇಕೆಂಬುದರ ಬಗ್ಗೆಯೇ ಮಗ್ನರಾಗಿದ್ದರು. 5 ನೇ ಹಂತದ ಮತದಾನ ಮುಗಿಯುವ ಹೊತ್ತಿಗೆ ಸರಳ ಬಹುಮತಕ್ಕೆ ಬೇಕಾದ ಸ್ಥಾನಗಳನ್ನು ದಾಟಿತ್ತು ಎಂದು ಮೋದಿಯವರು ತಮ ಕಾರ್ಯತಂತ್ರವನ್ನು ಸಾರ್ವಜನಿಕರೆದುರು ಹೇಳಿದ್ದರು.

ಹೀಗೆ 2024 ರ ಲೋಕಸಭಾ ಚುನಾವಣೆಯಲ್ಲಿ ವಿರೋಧಪಕ್ಷಗಳಿಗೆ ಅಸ್ತ್ರವೇ ಇಲ್ಲದಂತೆ ಗೆಲ್ಲಬೇಕೆಂದು ರೂಪಿಸಿದ್ದ ತಂತ್ರದಲ್ಲಿ ಭಾಗಶಃ ಬಿಜೆಪಿ ಯಶಸ್ವಿಯಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕೆಲವು ರಾಜಕೀಯ ವಿಶ್ಲೇಷಕರು ನೀಡುತ್ತಿರುವ ಅಂಕಿ ಸಂಖ್ಯೆಗಳು ಬಿಜೆಪಿಯ ನಂಬಿಕೆಯನ್ನು ಮತ್ತಷ್ಟು ಇಮಡಿಗೊಳಿಸಿದೆ. ಅಂತಿಮವಾಗಿ ಜೂನ್‌ 4 ರ ಫಲಿತಾಂಶವು ಎಲ್ಲದಕ್ಕೂ ಉತ್ತರ ನೀಡಲಿದೆ.

RELATED ARTICLES

Latest News