ಬೆಂಗಳೂರು, ಆ.31- ಇಡೀ ವಿಶ್ವದಲ್ಲೇ ಪ್ರಬಲ ಆರ್ಥಿಕ ಶಕ್ತಿಯಾಗಿರುವ ನಾವು 2.8 ಬಿಲಿಯನ್ ಜನರ ಯೋಗಕ್ಷೇಮ ಕಾಪಾಡಲು ಬದ್ಧವಾಗಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ.
ಜಗತ್ತಿನಾದ್ಯಂತ ಕುತೂಹಲದಿಂದ ನೋಡುತ್ತಿದ್ದ ಪ್ರಧಾನಿ ಮೋದಿ ಮತ್ತು ಜಿನ್‌ಪಿಂಗ್ ನಡುವಿನ ಸಭೆಯಲ್ಲಿ ಎರಡೂ ದೇಶಗಳು ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಸಂಕಲ್ಪ ತೊಟ್ಟಿವೆ.
ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆ ಆಧಾರದ ಮೇಲೆ ಭಾರತ ಮತ್ತು ಚೀನಾ ತಮ ಸಂಬಂಧಗಳನ್ನು ಮತ್ತಷ್ಟು ಗಟ್ಟಿಯಾಗಿಸಿ ಮುಂದೆ ಕೊಂಡೊಯ್ಯಲು ನಾವು ಬದ್ಧರಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಚೀನಾದ ತಿಯಾಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯಲ್ಲಿ ಹೇಳಿದ್ದಾರೆ.
ಜಗತ್ತು ಪರಿವರ್ತನೆಯತ್ತ ಸಾಗುತ್ತಿದ್ದು, ಚೀನಾ ಮತ್ತು ಭಾರತ ಎರಡೂ ಅತ್ಯಂತ ಪ್ರಬಲ ರಾಷ್ಟ್ರಗಳಾಗಿವೆ. ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಾಗಿವೆ. ಸ್ನೇಹಿತರಾಗಿ, ನೆರೆಹೊರೆಯವರಾಗಿರಲು ಡ್ರ್ಯಾಗನ್ ಮತ್ತು ಆನೆ ಒಟ್ಟಿಗೇ ಬರುವುದು ಅತ್ಯಗತ್ಯ ಎಂದು ಜಿನ್‌ಪಿಂಗ್ ಹೇಳಿದ್ದಾರೆ.
ಕಳೆದ ಬ್ರಿಕ್‌್ಸ ಶೃಂಗಸಭೆ ಸಂದರ್ಭದಲ್ಲಿ ನಾನು ಚೀನಾ ಅಧ್ಯಕ್ಷರಲ್ಲಿ ಗಡಿಯಲ್ಲಿ ಶಾಂತಿಗಾಗಿ ಪ್ರಸ್ತಾಪಿಸಿದ್ದೆ. ಅದು ಫಲಪ್ರದವಾಗಿದೆ. ಇಂದು ಶಾಂತಿ-ಸ್ಥಿರತೆಗಾಗಿ ಎರಡೂ ದೇಶಗಳು ಒತ್ತು ನೀಡಿವೆ ಎಂದು ಹೇಳಿದರು.ಪ್ರಸ್ತುತ ಇಬ್ಬರೂ ನಾಯಕರು ಅಮೆರಿಕದ ತೆರಿಗೆ ಹೆಚ್ಚಳ ಕುರಿತಂತೆ ಕಳವಳ ವ್ಯಕ್ತಪಡಿಸಿದ್ದು, ಇದನ್ನು ಹಿಮೆಟ್ಟಿಸಲು ನಾವು ಒಂದಾಗಿ ಸಾಗಬೇಕು. ಈ ನಿಟ್ಟಿನಲ್ಲಿ ಎಲ್ಲವೂ ಶುಭಪ್ರದವಾಗಿ ನಡೆಯಲಿವೆ ಎಂದು ಮೋದಿ ಹೇಳಿದರು.
ಭಾರತದೊಂದಿಗೆ ನಾವು ಉನ್ನತಮಟ್ಟದಲ್ಲಿ ಸ್ನೇಹ ಸಂಪಾದಿಸಲು ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ವ್ಯಾಪಾರ, ಭಯೋತ್ಪಾದನೆ ನಿಗ್ರಹ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ ಎಂದು ಜಿನ್‌ಪಿಂಗ್ ನುಡಿದರು. ಈ ನಡುವೆ ಭಾರತ ಮತ್ತು ಚೀನಾ ನಡುವಿನ ಗಡಿ ಪ್ರದೇಶವನ್ನು ನಿರ್ಧರಿಸುವ ಮಹತ್ವದ ಮಾತುಕತೆಯೂ ಕೂಡ ನಡೆದಿದ್ದು, ಭಾರೀ ಕುತೂಹಲ ಕೆರಳಿಸಿದೆ.