Saturday, May 17, 2025
Homeರಾಜ್ಯಉಗ್ರರ ದಮನ ಕಾರ್ಯಾಚರಣೆಯನ್ನು ಮೋದಿ ರಾಜಕೀಯಕ್ಕೆ ಬಳಸಿಕೊಳ್ಳಬಾರದು : ಗುಂಡೂರಾವ್‌

ಉಗ್ರರ ದಮನ ಕಾರ್ಯಾಚರಣೆಯನ್ನು ಮೋದಿ ರಾಜಕೀಯಕ್ಕೆ ಬಳಸಿಕೊಳ್ಳಬಾರದು : ಗುಂಡೂರಾವ್‌

Modi should not use the counter-terrorism operation for politics: Gundu Rao

ಮಂಗಳೂರು, ಮೇ 16– ಉಗ್ರವಾದದ ದಮನ ಕಾರ್ಯಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ರಾಜಕಾರಣಕ್ಕೆ ಬಳಸಿಕೊಳ್ಳಬಾರದು. ಪಹಲ್ಗಾಮ್‌ ದಾಳಿ ಮತ್ತು ಅದರ ನಂತರ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ದೇಶದ ಜನರಿಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ವಿಷಯದಲ್ಲಿ ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿ ನಿಲುವಿಗೆ ಬೆಂಬಲ ವ್ಯಕ್ತ ಪಡಿಸಲಿದೆ. ಆದರೆ ಪ್ರಧಾನಿಯವರು ಯಾವ ವಿಚಾರವನ್ನೂ ಜನರಿಗೆ ಸ್ಪಷ್ಟವಾಗಿ ತಿಳಿಸುತ್ತಿಲ್ಲ. ಜನರನ್ನು ಕತ್ತಲಿನಲ್ಲಿ ಇಟ್ಟಿದ್ದಾರೆ ಎಂದು ಆರೋಪಿಸಿದರು.

ದೇಶಕ್ಕೆ ತಿಳಿಸಬೇಕಾದ ವಿಚಾರ ಗಳನ್ನು ರಾಜಕೀಯ ಹೊರತಾಗಿ ತಿಳಿಸಬೇಕು. ಪಾಕಿಸ್ತಾನವು ಭಾರತದ ಐದು ವಿಮಾನಗಳನ್ನು ಹೊಡೆದಿರುಳಿ ಸಿರುವುದಾಗಿ ಹೇಳುತ್ತಿದೆ.ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ ಉಗ್ರರು ಏನಾದರೂ ಎಂಬ ವಿಚಾರಗಳು ಜನರಿಗೆ ತಿಳಿಯಬೇಕು. ಪ್ರಧಾನಿ ನರೇಂದ್ರ ಮೋದಿಯವರು ಪತ್ರಿಕಾಗೋಷ್ಠಿ ನಡೆಸಿ ಪ್ರಶ್ನೆಗಳಿಗೆ ಉತ್ತರ ನೀಡಬೇಕು.

ಅಮೇರಿಕಾದ ಅಧ್ಯಕ್ಷರು ಪ್ರತಿದಿನ ಮಾಧ್ಯಮಗಳಿಗೆ ಉತ್ತರ ನೀಡುತ್ತಾರೆ. ಮೋದಿ ಅವರು ಗೋಧಿ ಮೀಡಿಯಾಗಳು ನನ್ನ ಕೈಯಲ್ಲಿದೆ ಎಂಬ ಕಾರಣಕ್ಕೆ ಪತ್ರಿಕಾಗೋಷ್ಠಿಯನ್ನೇ ನಡೆಸು ವುದಿಲ್ಲ.ಯಾರಿಗೂ ಕೇರ್‌ ಮಾಡುವುದಿಲ್ಲ. ಮೋದಿ ಅವರು ಏಕಮುಖವಾಗಿ ಟಿವಿಗಳಲ್ಲಿ ಕುಳಿತು ಭಾಷಣ ಮಾಡುವುದಷ್ಟೇ ನಮಗೆ ಗೊತ್ತು. ಮೋದಿ ಮಹಾನ್‌ ಸುಳ್ಳುಗಾರ, ಸುಳ್ಳಿನ ದಂತಕತೆಗಳನ್ನು ಕಟ್ಟುವ ಸಾಮರ್ಥ್ಯವಿದೆ. ಅದರ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ದೇಶದ ವಿಚಾರ ಬಂದಾಗ ಪರಸ್ಪರ ವಿಶ್ವಾಸ, ಪಾರದರ್ಶಕತೆ ಅಗತ್ಯ. ವಿರೋಧ ಪಕ್ಷಗಳಿಗೆ ಹಾಗೂ ದೇಶದ ಜನತೆಗೆ ನಂಬಿಕೆ ಬರುವಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.

ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯಿಂದ ಕಷ್ಟ ಎದುರಾಗುವುದಾದರೆ ಅದನ್ನು ನಾವು ನಿಭಾಯಿಸಬಹುದು. ಆದರೆ ಸತ್ಯಗಳನ್ನು ಮುಚ್ಚಿಡುವುದು ಸರಿಯಲ್ಲ. 56 ಇಂಚಿನ ಎದೆ ಇರುವ ಪ್ರಧಾನಿಗೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹಾಗೂ ಚೀನಾ ಎಂದರೆ ಭಯವೇ ಎಂದು ಪ್ರಶ್ನಿಸಿದರು.

ನಿನ್ನೆ ಕೂಡ ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ನಾನೇ ಮಾಡಿಸಿದ್ದು ಎಂದು ಟ್ರಂಪ್‌ ಹೇಳುತ್ತಿದ್ದಾರೆ. ನಮ ಪ್ರಧಾನಿ ಮೊದಲು ಈ ವಿಚಾರವನ್ನು ಘೋಷಿಸಬೇಕಿತ್ತು. ಅಮೇರಿಕಾದ ಹಸ್ತಕ್ಷೇಪವನ್ನು ನಿರಾಕರಿಸಬೇಕಿತ್ತು. ಅದು ಯಾವುದೂ ಆಗುತ್ತಿಲ್ಲ ಎಂದು ಹೇಳಿದರು.

ಟರ್ಕಿ ಬಗ್ಗೆ ಟೀಕೆ ಮಾಡುವ ಪ್ರಧಾನಿಗೆ ಪಾಕಿಸ್ತಾನವು ಚೀನಾದ ಶಸಾ್ತ್ರಸ್ತ್ರಗಳನ್ನು ಬಳಕೆ ಮಾಡುತ್ತಿರುವುದರ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ದಿನೇಶ್‌ ಗೂಂಡೂರಾವ್‌ ಆಕ್ಷೇಪಿಸಿದರು.
ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಸಚಿವ ಕರ್ನಲ್‌ ಸೋಫಿಯಾ ಖುರೇಶಿ ಬಗ್ಗೆ ನೀಡಿರುವ ಹೇಳಿಕೆಗೆ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಿಜೆಪಿಯ ಜನರಿಗೆ ಏನಾಗಿದೆ? ಎಲ್ಲದರಲ್ಲೂ ಹಿಂದೂ- ಮುಸ್ಲಿಂ ಎಂದು ಹುಡುಕುತ್ತಾರೆ ಎಂದು ಟೀಕಿಸಿದರು.

ಕುಕ್ಕೆಸುಬ್ರಹಣ್ಯ ದೇವಸ್ಥಾನದ ಆಡಳಿತ ಮಂಡಳಿಗೆ ಹರೀಶ್‌ ಅವರನ್ನು ಅಧ್ಯಕ್ಷರಾಗಿ ನೇಮಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹರೀಶ್‌ ಮೊದಲು ಆಡಳಿತ ಮಂಡಳಿಗೆ ಸದಸ್ಯರಾಗಿದ್ದರು, ಚುನಾವಣೆಯ ಮೂಲಕ ಅಧ್ಯಕ್ಷರಾಗಿದ್ದಾರೆ. ಒಂದು ಕಾಲದಲ್ಲಿ ರೌಡಿಶೀಟರ್‌ ಆಗಿದ್ದರು. ಈಗ ಸುಧಾರಣೆ ಆಗಿದ್ದಾರೆ. ಸುಧಾರಿತ ರೌಡಿಶೀಟರ್‌ಗಳು ಬೇರೆ ಏನು ಆಗಬಾರದೇ? ಎಂದು ಪ್ರಶ್ನಿಸಿದರು.

ಮಂಗಳೂರಿನಲ್ಲಿ ಹೆಚ್ಚು ಜನ ಶಾಸಕರು ಗೆದ್ದಿದ್ದರೆ, ಸ್ಥಳೀಯರೇ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಿದ್ದರು. ಗೆದ್ದಿದ್ದೇ ಇಬ್ಬರು ಮಾತ್ರ. ಅವರಲ್ಲಿ ಒಬ್ಬರು ವಿಧಾನಸಭೆ ಅಧ್ಯಕ್ಷರಾಗಿದ್ದಾರೆ. ಮತ್ತೊಬ್ಬರು ಪ್ರಥಮ ಬಾರಿಗೆ ಶಾಸಕರಾಗಿದ್ದಾರೆ. ಹೀಗಾಗಿ ನಾನು ಹೊರಗಿನಿಂದ ಬಂದು ಜಿಲ್ಲಾ ಉಸ್ತುವಾರಿ ಸಚಿವನಾಗಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.

RELATED ARTICLES

Latest News