Sunday, June 30, 2024
Homeರಾಷ್ಟ್ರೀಯಭಾನುವಾರ ಸಂಜೆ ಮೋದಿ ಪ್ರಮಾಣವಚನ : ಮಿತ್ರ ಪಕ್ಷಗಳಿಗೆ ಅವಕಾಶ ನೀಡಲು ಬಿಜೆಪಿ ಹಲವು ಸಚಿವರಿಗೆ...

ಭಾನುವಾರ ಸಂಜೆ ಮೋದಿ ಪ್ರಮಾಣವಚನ : ಮಿತ್ರ ಪಕ್ಷಗಳಿಗೆ ಅವಕಾಶ ನೀಡಲು ಬಿಜೆಪಿ ಹಲವು ಸಚಿವರಿಗೆ ಕೊಕ್

ನವದೆಹಲಿ,ಜೂ.7- ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಕಾರಣ ಮಿತ್ರ ಪಕ್ಷಗಳಿಗೆ ಅವಕಾಶ ನೀಡಬೇಕಾದ ಹಿನ್ನಲೆ ಬಿಜೆಪಿ ಹಲವು ಸಚಿವರನ್ನು ಕೈಬಿಡಲು ಮುಂದಾಗಿದೆ.ಭಾನುವಾರ ಸಂಜೆ 6 ಗಂಟೆಗೆ ಪ್ರಧಾನಿ ನರೇಂದ್ರಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಎನ್‌ಡಿಎ ಮಿತ್ರಪಕ್ಷಗಳ ಹಲವು ಸಚಿವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಿದ್ದಾರೆ.

ಜೆಡಿಯು, ಟಿಡಿಪಿ, ಶಿವಸೇನೆ, ಎಲ್‌ಜೆಪಿ, ಜೆಡಿಎಸ್‌‍ ಸೇರಿದಂತೆ ಮಿತ್ರಪಕ್ಷಗಳಿಗೂ ಸಂಪುಟದಲ್ಲಿ ಸ್ಥಾನಮಾನ ನೀಡಬೇಕಾಗಿರುವುದರಿಂದ ಈ ಹಿಂದೆ ಎರಡು ಅವಧಿಗೆ ಸಚಿವರಾಗಿದ್ದವರನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ನಿಯೋಜನೆ ಮಾಡುವ ಚಿಂತನೆ ಬಿಜೆಪಿಯೊಳಗೆ ನಡೆದಿದೆ.

ನಿರ್ಧಿಷ್ಟ ಕೆಲವು ಪ್ರಮುಖ ಖಾತೆಗಳನ್ನು ಮಿತ್ರಪಕ್ಷಗಳು ತಮಗೆ ನೀಡಬೇಕೆಂದು ಪಟ್ಟು ಹಿಡಿದಿರುವ ಕಾರಣ ಸಂಪುಟವನ್ನು ಸಮದೂಗಿಸಲು ಕೆಲವು ಸಚಿವರು ತ್ಯಾಗ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಬಿಜೆಪಿ ಈಗಾಗಲೇ ಕೆಲವರಿಗೆ ಮೌಕಿಕ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಚಂದ್ರಬಾಬು ನಾಯ್ಡು ಸ್ಪೀಕರ್‌ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಸ್ಪೀಕರ್‌ ಸ್ಥಾನ ಬಿಟ್ಟುಕೊಡಲು ಒಪ್ಪದ ಬಿಜೆಪಿ, ಡೆಪ್ಯೂಟಿ ಸ್ಪೀಕರ್‌ ಸ್ಥಾನ ನೀಡುವುದಾಗಿ ಭರವಸೆ ನೀಡಿದೆ.ಹಾಗೆಯೇ ಮೂರು ಕ್ಯಾಬಿನೆಟ್‌ ದರ್ಜೆ ಮತ್ತು 2 ರಾಜ್ಯ ಖಾತೆಗೂ ನಾಯ್ಡು ಬೇಡಿಕೆ ಇಟ್ಟಿದ್ದಾರೆ. ಟಿಡಿಪಿ, ಗ್ರಾಮೀಣಾಭಿವೃದ್ಧಿ ವಸತಿ ಖಾತೆ ಬೇಡಿಕೆ ಇಟ್ಟಿದ್ದರೆ, ಇದರ ಬದಲು ನಾಗರಿಕ ವಿಮಾನಯಾನ ಖಾತೆ ಹಾಗೂ ಬಂದರು ಮತ್ತು ಹಡಗು ಖಾತೆ ಬೇಡಿಕೆ ಬದಲು, ಉಕ್ಕು ಖಾತೆ ನೀಡಲು ಬಿಜೆಪಿ ಭರವಸೆ ನೀಡಿದೆ.

ರಸ್ತೆ ಸಾರಿಗೆ, ಹೆದ್ದಾರಿ ಖಾತೆ ಬೇಡಿಕೆಯನ್ನೂ ಒಪ್ಪದ ಬಿಜೆಪಿ, ಇದರ ಬದಲು ಬೇರೆ ಎರಡು ಖಾತೆ ನೀಡುವ ಸಾಧ್ಯತೆ ಇದೆ.ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಸಹ ಮೂರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ. ಅದರಂತೆ ಮೂರು ಸಚಿವ ಸ್ಥಾನ ಜೆಡಿಯುಗೆ ಸಿಗಬಹುದು. ಆದರೆ ನಿತೀಶ್‌ ರೈಲ್ವೆ ಖಾತೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಬಿಜೆಪಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆ ನೀಡುವ ಸಾಧ್ಯತೆ ಇದೆ.

ಸಚಿವ ಸ್ಥಾನ ಬಿಟ್ಟುಹೋಗುವವರಲ್ಲಿ ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಪರಾಜಿತರಾದ ಸಚಿವರೂ ಇರಬಹುದು. ಅವರು ಸಾಂಸ್ಥಿಕ ಜವಾಬ್ದಾರಿಗಳನ್ನು ಪಡೆಯುತ್ತಾರೆ ಅಥವಾ ರಾಜ್ಯಸಭೆಗೆ ಪ್ರವೇಶಿಸಬಹುದು ಎಂದು ಮೂಲಗಳು ತಿಳಿಸಿವೆ.

ಮೋದಿಯವರ ಎರಡನೇ ಅವಧಿಯ ಸುಮಾರು 19 ಮಂತ್ರಿಗಳು ದೊಡ್ಡ ಮತಗಳ ಅಂತರದಿಂದ ಚುನಾವಣೆಯಲ್ಲಿ ಸೋತಿದ್ದಾರೆ. ಅವರಲ್ಲಿ ಸೃತಿ ಇರಾನಿ, ರಾಜೀವ್‌ ಚಂದ್ರಶೇಖರ್‌, ಆರ್‌.ಕೆ.ಸಿಂಗ್‌ ಮತ್ತು ಅರ್ಜುನ್‌ ಮುಂಡಾ ಪ್ರಮುಖರಾಗಿದ್ದು ಇವರು ಎಲ್ಲಾ ಸಂಪುಟ ದರ್ಜೆಯ ಸಚಿವರಾಗಿದ್ದರು. ಚುನಾವಣಾ ಹಿನ್ನಡೆ ಅಥವಾ ಕಡಿಮೆ ಅಂತರದಲ್ಲಿ ಗೆದ್ದವರ ಬದಲಿಗೆ ಹೊಸ ಮುಖಗಳನ್ನು ಪರಿಚಯಿಸಲು ಬಿಜೆಪಿ ನಾಯಕತ್ವ ಸಜ್ಜಾಗಿದೆ ಎಂದು ಮೂಲಗಳು ಹೇಳುತ್ತವೆ.

ಕಾಂಗ್ರೆಸ್‌‍ನ ಶಶಿ ತರೂರ್‌ ವಿರುದ್ಧ ಸ್ಪರ್ಧಿಸಿದ್ದ ರಾಜೀವ್‌ ಚಂದ್ರಶೇಖರ್‌ ಅವರು ತಿರುವನಂತಪುರಂನಲ್ಲಿ 16,077 ಮತಗಳ ಅಂತರದಿಂದ ಸೋತಿದ್ದರೆ, ಸ್ಮೃತಿ ಇರಾನಿ 1.67 ಲಕ್ಷ ಮತಗಳ ಅಂತರದಿಂದ ಸೋತಿದ್ದಾರೆ. ಅರ್ಜುನ್‌ ಮುಂಡಾ 1.49 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದಾರೆ. ಕಡಿಮೆ ಗೆಲುವಿನ ಅಂತರವಿರುವ ಸಂಸದರನ್ನು ಸಂಪುಟದಲ್ಲಿ ಸಚಿವರನ್ನಾಗಿ ಸೇರಿಸಿಕೊಳ್ಳಲು ಬಿಜೆಪಿ ನಾಯಕತ್ವ ಒಲವು ತೋರಿಲ್ಲ ಎಂದು ಮೂಲಗಳು ಸೂಚಿಸಿವೆ.

ಬಿಜೆಪಿ ಕೋಟಾದ ಕೆಲವು ಪ್ರಮುಖ ಸಚಿವಾಲಯಗಳಲ್ಲಿ ಬದಲಾವಣೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಅಂತಹ ಒಂದು ನಿದರ್ಶನವೆಂದರೆ ಹಣಕಾಸು ಸಚಿವಾಲಯ ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ.

ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಎನ್‌‍ಡಿಎ ಮಿತ್ರ ಪಕ್ಷದೊಂದಿಗೆ ಟಿಡಿಪಿ ಅಥವಾ ಜೆಡಿಯು ಜೊತೆ ಹೋಗಬಹುದು. ಅಜಯ್‌ ಕುಮಾರ್‌ ಮಿಶ್ರಾ, ಸುಭಾಷ್‌ ಸರ್ಕಾರ್‌, ಕೈಲಾಶ್‌ ಚೌಧರಿ, ಸಂಜೀವ್‌ ಬಲ್ಯಾನ್‌‍, ರಾವ್‌ಸಾಹೇಬ್‌ ದಾನ್ವೆ, ಕುಶಾಲ್‌ ಕಿಶೋರ್‌, ನಿರಂಜನ್‌ ಜ್ಯೋತಿ ಮತ್ತು ಮಹೇಂದ್ರನಾಥ್‌ ಪಾಂಡೆ ಅವರು ಚುನಾವಣೆಯಲ್ಲಿ ಸೋತಿರುವ ಸಂಪುಟದ ಇತರ ಪ್ರಮುಖ ಮಂತ್ರಿಗಳು.

ಬಿಜೆಪಿ 4:1 ಸೂತ್ರ:
ಎನ್‌‍ಡಿಎ ಮಿತ್ರ ಪಕ್ಷಗಳ ಸಚಿವ ಸ್ಥಾನದ ಬೇಡಿಕೆಗೆ ಬಿಜೆಪಿ ಸೂತ್ರ ಹೆಣೆದಿದೆ. ಪ್ರತಿ ನಾಲ್ಕು ಸಂಸದರಿಗೆ ಒಂದು ಸಚಿವ ಸ್ಥಾನ ನೀಡುವ ಭರವಸೆ ನೀಡಿದೆ. ಈ ಪ್ರಕಾರ, 16 ಸಂಸದರನ್ನ ಹೊಂದಿರುವ ಟಿಡಿಪಿಗೆ 4 ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. 12 ಸಂಸದರನ್ನ ಹೊಂದಿರುವ ಜೆಡಿಯುಗೆ 3 ಸಚಿವ ಸ್ಥಾನ ಸಿಗಲಿದೆ. ಟಿಡಿಪಿಗೆ ಸ್ಪೀಕರ್‌ ಸ್ಥಾನ ಕೊಡದಿರಲು ಬಿಜೆಪಿ ನಿರ್ಧಾರ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರಮುಖ ಖಾತೆಗಳನ್ನ ತನ್ನಲ್ಲೇ ಉಳಿಸಿಕೊಳ್ಳಲು ಬಿಜೆಪಿ ಚಿಂತನೆ ನಡೆಸಿದೆ. ಹಣಕಾಸು, ಗೃಹ, ವಿದೇಶಾಂಗ, ರಕ್ಷಣಾ ಖಾತೆ ಬಿಟ್ಟುಕೊಡದಿರುವ ಬಿಜೆಪಿ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ರೈಲ್ವೆ, ಸಾರಿಗೆ ಮೂಲಸೌಕರ್ಯ, ಸಮಾಜ ಕಲ್ಯಾಣ ಮತ್ತು ಕೃಷಿ ಖಾತೆಯೂ ಬಿಜೆಪಿಯೇ ಉಳಿಸಿಕೊಳ್ಳುವ ಸಾಧ್ಯತೆ ಇದೆ.

RELATED ARTICLES

Latest News