ನವದೆಹಲಿ,ಜೂ.5- ಕೇಂದ್ರದಲ್ಲಿ ಮತ್ತೆ ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವ ನರೇಂದ್ರಮೋದಿ ಅವರು ತಿಂಗಳ 8(ಶನಿವಾರ)ರಂದು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಮಿತ್ರಕೂಟ ಪಕ್ಷಗಳು ತಮಗಿರುವ ಸಂಸದರ ಸಂಖ್ಯಾಬಲದ ಬೆಂಬಲ ಪತ್ರವನ್ನು ನೀಡಿದ್ದಾರೆ.
ಒಟ್ಟು 294 ಸಂಸದರ ಬೆಂಬಲ ಪತ್ರವನ್ನು ರಾಷ್ಟ್ರಪತಿಗಳಿಗೆ ನೀಡಲಾಗಿದ್ದು, ಸರ್ಕಾರ ರಚನೆಗೆ ಹಕ್ಕು ಮಂಡಿಸಿಸಿದ್ದಾರೆ. ಶನಿವಾರ ರಾತ್ರಿ 8 ಗಂಟೆಗೆ ನರೇಂದ್ರಮೋದಿ ಹಾಗೂ ಸಂಪುಟದ ಸಹೋದ್ಯೋಗಿಗಳಿಗೆ ಅಧಿಕಾರ ಗೌಪ್ಯತೆ ಬೋಧಿಸಲು ಸಮತಿಸಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರ ಎನ್‌ಡಿಎ ಮಿತ್ರಪಕ್ಷಗಳ ಎಲ್ಲ ಸಂಸದರು ದೆಹಲಿಗೆ ಬರುವಂತೆ ಸೂಚಿಸಲಾಗಿದೆ. ಅಂದು ಸದಸ್ಯರನ್ನು ಉದ್ದೇಶಿಸಿ ಮೋದಿ ಅವರು ಮಾತನಾಡಲಿದ್ದಾರೆ. ಕರ್ನಾಟಕದ 18 ಸಂಸದರು ಗುರುವಾರವೇ ದೆಹಲಿಗೆ ಬರುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆ ನೀಡಿದ್ದಾರೆ.
ಎನ್‌ಡಿಎ ಮೈತ್ರಿಕೂಟವು ಮೋದಿ ಅವರನ್ನು ಪ್ರಧಾನಿ ಮಾಡುವ ಸರ್ವಸಮತದ ನಿರ್ಣಯಕ್ಕೆ ಬೆಂಬಲ ಸೂಚಿಸಿವೆ. ಮೋದಿಯವರೊಂದಿಗೆ ಮಿತ್ರಪಕ್ಷದ ಹಲವು ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಟಿಡಿಪಿ, ಜೆಡಿಯು, ಎಲ್‌ಜೆಪಿ, ಶಿವಸೇನೆ, ಜೆಡಿಎಸ್ ಸೇರಿದಂತೆ ಮತ್ತಿತರ ಪ್ರಾದೇಶಿಕ ಪಕ್ಷಗಳ ಮುಖಂಡರು ಮೊದಲ ಹಂತದಲ್ಲೇ ಸಂಪುಟಕ್ಕೆ ಸೇರುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಮೊದಲ ಹಂತದಲ್ಲಿ ಅಮಿತ್ ಷಾ, ರಾಜನಾಥ್ ಸಿಂಗ್, ನಿರ್ಮಲ ಸೀತಾರಾಮನ್, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವರು ಸಂಪುಟಕ್ಕೆ ಸೇರ್ಪಡೆಯಾಗುವ ಸಂಭವನೀಯ ಪಟ್ಟಿಯಲ್ಲಿದ್ದಾರೆ. ಹೊಸ ಸಚಿವ ಸಂಪುಟದ ಮುಖಗಳಿಗೆ ಸಂಬಂಧಿಸಿದಂತೆ ಮಿತ್ರಪಕ್ಷಗಳೊಂದಿಗೆ ಮಾತುಕತೆ ಮತ್ತು ಸಭೆಗಳ ಸುತ್ತು ಕೂಡ ತೀವ್ರಗೊಂಡಿದೆ.
ಇಂದು ಸಂಜೆ 4 ಗಂಟೆಗೆ ಎನ್‌ಡಿಎ ಸಭೆ ಇಂದು ಸಂಜೆ 4 ಗಂಟೆಗೆ ದೆಹಲಿಯಲ್ಲಿ ಎನ್‌ಡಿಎ ಸಭೆ ಕರೆಯಲಾಗಿದೆ. ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಇತರ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ. 2019ರ ಫಲಿತಾಂಶದ 7 ದಿನಗಳ ನಂತರ ಪ್ರಧಾನಿ ಹುದ್ದೆಗೆ ಪ್ರಮಾಣ ವಚನ ಸಮಾರಂಭವನ್ನು ನಡೆಸಲಾಗಿತ್ತು.
2014ರಲ್ಲಿ ಎನ್‌ಡಿಎ ಸರ್ಕಾರ ರಚನೆಯಾದಾಗ, 10 ದಿನಗಳ ನಂತರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಬಾರಿ ಫಲಿತಾಂಶ ಘೋಷಣೆಯಾದ 4 ದಿನಗಳ ನಂತರ ಅಂದರೆ ಜೂನ್ 8ರಂದು ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಲೋಕಸಭೆ ಚುನಾವಣೆ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ 292 ಸ್ಥಾನಗಳನ್ನು ಗೆದ್ದು ಬಹುಮತ ಪಡೆದಿದೆ. ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ 234 ಸ್ಥಾನಗಳನ್ನು ಪಡೆದುಕೊಂಡಿದೆ. ಬಿಜೆಪಿ ಏಕಾಂಗಿಯಾಗಿ 240 ಸ್ಥಾನಗಳನ್ನು ಗೆದ್ದಿದೆ. ಅಂತಹ ಪರಿಸ್ಥಿತಿಯಲ್ಲಿ ಇದು ಬಹುಮತದ ಅಂಕ (272) ಗಿಂತ ಬಹಳ ಹಿಂದೆ ಇದೆ.
2014ರ ಚುನಾವಣೆಯಲ್ಲಿ ಮೋದಿ ನಾಯಕತ್ವದಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆದ್ದುಕೊಂಡಿತ್ತು ಮತ್ತು 2019ರ ಚುನಾವಣೆಯಲ್ಲಿ 303 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ವಂತ ಬಲದಿಂದ ಬಹುಮತ ಗಳಿಸಿತ್ತು. ಆದರೆ ಈ ಬಾರಿ ಮಿತ್ರಪಕ್ಷಗಳನ್ನು ಸೇರಿಸಿಕೊಂಡು ಎನ್‌ಡಿಎ ಬಹುಮತ ಸಾಧಿಸಲು ಸಾಧ್ಯವಾಗಿದೆ.