ಬೆಂಗಳೂರು, ಅ. 21- ರಾಜಾಜಿನಗರದ ಶ್ರೀ ರಾಮಮಂದಿರ ದೇವಸ್ಥಾನದಲ್ಲಿ ಶ್ರೀ ರಾಮಾಂಜನೇಯ ಪ್ರತಿಮೆಯ ಚರ ಪ್ರತಿಷ್ಠಾಪನ ಮಹೋತ್ಸವವು ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಹಿನ್ನಲೆಯಲ್ಲಿ ಈ ಮಾರ್ಗದಲ್ಲಿ ಸಂಚಾರ ಮಾರ್ಪಾಡು ಮಾಡಲಾಗಿದೆ. ಇಂದಿನಿಂದ ಅ. 23ರ ವರೆಗೆ ರಾಜಾಜಿನಗರದ 10ನೇ ಮುಖ್ಯ ರಸ್ತೆ, ರಾಮಮಂದಿರ ರಸ್ತೆಯಲ್ಲಿರುವ ಶ್ರೀ ರಾಮಮಂದಿರ ದೇವಸ್ಥಾನದ ಬಳಿ ಪ್ರತಿಷ್ಠಾಪನ ಮಹೋತ್ಸವ ನೆರವೇರಲಿದ್ದುಘಿ, 20 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಸೇರಲಿದ್ದಾರೆ.
ರಾಜಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ಪೊಲೀಸ್ ಠಾಣಾ ಸರ್ಕಲ್ ಕಡೆಯಿಂದ ರಾಮಮಂದಿರದ ಕಡೆಗೆ ಹೋಗುವ ಹಾಗೂ ರಾಜಾಜಿನಗರ ಎಂಟ್ರೆನ್ಸ್ ಕಡೆಯಿಂದ ರಾಮಮಂದಿರ ಕಡೆಗೆ ಬರುವ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ.
ಇಎಸ್‌ಐ ಸಿಗ್ನಲ್ ಕಡೆಯಿಂದ ಬರುವ ಬಸ್‌ಗಳು, ವಾಹನಗಳು ಹಳೆ ಪೊಲೀಸ್ ಠಾಣಾ ಸರ್ಕಲ್ ಬಳಿ ಬಲ ತಿರುವು ಪಡೆದುಕೊಳ್ಳದೇ ಮುಂದೆ ಚಲಿಸಿ, ಡಾ. ರಾಜಕುಮಾರ್ ರಸ್ತೆಗೆ ಸೇರುವುದು. ರಾಜಾಜಿನಗರ ಕಡೆಯಿಂದ ಬರುವ ಬಸ್‌ಗಳು, ವಾಹನಗಳು ವಾಟಾಳ್ ನಾಗರಾಜ್ ರಸ್ತೆಯಲ್ಲಿ ಬಂದು ರಾಮಮಂದಿರದ ಬಳಿ ಬಲ ತಿರುವು ಪಡೆದುಕೊಳ್ಳದೆ ವಾಟಾಳ್ ನಾಗರಾಜ್ ರಸ್ತೆಯಲ್ಲಿ ಚಲಿಸಿ ಬಾಷ್ಯಂ ಸರ್ಕಲ್ ಕಡೆಗೆ ಚಲಿಸಬೇಕು.
ಸಂಚಾರ ಮಾರ್ಪಾಡಿಗೆ ಸಾರ್ವಜನಿಕರು ಸಹಕರಿಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.