ನವದೆಹಲಿ,ಜು.11– 75 ವರ್ಷ ದಾಟಿದ ನಂತರ ರಾಜಕೀಯ ನಾಯಕರು ಸಕ್ರಿಯ ರಾಜಕಾರಣದಿಂದ ನಿವೃತ್ತರಾಗಬೇಕೆಂದು ಆರ್‌ಎಸ್‌ಎಸ್ ಸರಸಂಚಾಲಕ ಮೋಹನ್ ಭಾಗವತ್ ನೀಡಿರುವ ಹೇಳಿಕೆ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17ಕ್ಕೆ 75 ವರ್ಷಕ್ಕೆ ಕಾಲಿಡಲಿದ್ದು, ಅವರನ್ನೇ ಗುರಿಯಾಗಿಟ್ಟುಕೊಂಡು ನೀಡಿರುವ ಹೇಳಿಕೆ ಇದಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ.
ಆರೆಸ್‌ಎಸ್ ಚಿಂತಕ ಮೊರೋಪಂತ್ ಪಿಂಗಳೆ ಅವರ ಸರಣಾರ್ಥ ನಾಗ್ಪುರದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, 75ನೇ ವರ್ಷಕ್ಕೆ ಕಾಲಿಡುವುದು ಪ್ರಕೃತಿಯು ವಿರಾಮ ತೆಗೆದುಕೊಂಡು ಇತರರಿಗೆ ದಾರಿ ಮಾಡಿಕೊಡುವ ಸಂಕೇತವಾಗಿದೆ ಎಂದು ಸೂಚ್ಯವಾಗಿ ಹೇಳಿರುವುದು ನಾನಾ ಅರ್ಥಗಳನ್ನು ಹುಟ್ಟು ಹಾಕಿದೆ.
75 ವರ್ಷದ ನಂತರ ಶಾಲು ಹೊದಿಸಿ ಸನಾನಿಸಲಾಗುತ್ತಿರುವುದು ಸಮಾಜವು ನಿವೃತ್ತಿ ಹೊಂದಲು ಮತ್ತು ಮುಂದಿನ ಪೀಳಿಗೆಗೆ ಅವಕಾಶ ಕಲ್ಪಿಸಲು ಸಜ್ಜಾಗಿರುವ ಸಮಯ ಎಂದು ಒಮೆ ತಮಾಷೆ ಮಾಡಿದ್ದ ಪಿಂಗಳೆ ಅವರ ಹಾಸ್ಯಮಯ ಕ್ಷಣವನ್ನು ಅವರು ನೆನಪಿಸಿಕೊಂಡರು.
ಪಿಂಗಳೆ ಅವರು ರಾಷ್ಟ್ರೀಯ ಸೇವೆಗೆ ಸಮರ್ಥವಾಗಿ ಬದ್ಧರಾಗಿದ್ದರೂ, ವಯಸ್ಸು ನಿರ್ದೇಶಿಸಿದ ನಂತರ ಮುಖ್ಯವಾಹಿನಿಯಿಂದ ಹಿಂದೆ ಸರಿಯುವುದರಲ್ಲಿ ಅವರು ನಂಬಿಕೆ ಇಟ್ಟಿದ್ದರು ಎಂದು ಮೆಲುಕು ಹಾಕಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೇ 2023ರಲ್ಲಿ ಈ ಬಗ್ಗೆ ಮಾತನಾಡಿದ್ದರು. ಬಿಜೆಪಿಯ ಸಂವಿಧಾನದಲ್ಲಿ ಅಂತಹ ವಯಸ್ಸಿಗೆ ಸಂಬಂಧಿಸಿದ ನಿವೃತ್ತಿ ನೀತಿಗಳಿಲ್ಲ. ಮೋದಿಯವರು 2029 ರವರೆಗೆ ಅಧಿಕಾರದಲ್ಲಿರುತ್ತಾರೆ. ಇಂಡಿಯಾ ಮೈತ್ರಿಕೂಟ ಆಧಾರರಹಿತ ವದಂತಿಗಳಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಮೋಹನ್ ಭಾಗವತ್ ಅವರ ಈ ಹೇಳಿಕೆ, ಬಿಜೆಪಿಯಲ್ಲಿ 75 ವರ್ಷಕ್ಕೆ ಅಧಿಕಾರದಿಂದ ನಿವೃತ್ತಿ ಪ್ರಧಾನಿ ಮೋದಿಯವರ ಬಗ್ಗೆ ಸೂಕ್ಷ್ಮವಾಗಿ ಹೇಳಿರುವುದು ಎಂದು ವ್ಯಾಪಕವಾಗಿ ಅರ್ಥೈಸಲಾಗಿದೆ, ಇದಕ್ಕೆ ವಿರೋಧ ಪಕ್ಷದ ನಾಯಕರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಶಿವಸೇನೆ ಸಂಸದ ಸಂಜಯ್ ರಾವತ್, ಮೋದಿ ಅವರು ಎಲ್‌ಕೆ ಅಡ್ವಾಣಿ, ಜಸ್ವಂತ್ ಸಿಂಗ್ ಮತ್ತು ಮುರಳಿ ಮನೋಹರ್ ಜೋಶಿಯಂತಹ ಹಿರಿಯ ನಾಯಕರನ್ನು 75 ರ ನಂತರ ನಿವೃತ್ತಿ ಹೊಂದುವಂತೆ ಒತ್ತಾಯಿಸಿದ್ದರು. ಅವರು ಅದೇ ಮಾನದಂಡಕ್ಕೆ ಬದ್ಧರಾಗುತ್ತಾರೆಯೇ ಎಂದು ನೋಡೋಣ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ, ಬೇರೆಯವರಿಗೆ ಬೋಧಿಸುವ ಮುನ್ನ ತಾವು ಅಭ್ಯಾಸ ಮಾಡಬೇಕು, ಬಿಜೆಪಿಯ ಮಾರ್ಗದರ್ಶಕ ಮಂಡಲವನ್ನು 75 ವರ್ಷಗಳ ಆಳ್ವಿಕೆಯ ಆಧಾರದ ಮೇಲೆ ನಿವೃತ್ತಿ ಹೊಂದಲು ರಚಿಸಲಾಯಿತು, ಆದರೆ ಪ್ರಸ್ತುತ ನಾಯಕತ್ವ ಸ್ವತಃ ಅಪವಾದವನ್ನು ಮಾಡುತ್ತಿರುವಂತೆ ತೋರುತ್ತಿದೆ ಎಂದು ಟೀಕಿಸಿದ್ದಾರೆ.ಕಾಂಗ್ರೆಸ್ ನಾಯಕ ಪವನ್ ಖೇರಾ ಕೂಡ, ಭಾಗವತ್ ಮತ್ತು ಮೋದಿ ಇಬ್ಬರೂ ಬ್ಯಾಗ್ ಎತ್ತಿಕೊಂಡು ಒಬ್ಬರನ್ನೊಬ್ಬರು ಹೇಗೆ ಮಾರ್ಗದರ್ಶನ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.
- ದಾವಣಗೆರೆ : ಸಾಲ ತೀರಿಸಲಾಗದೆ ರೈಲಿಗೆ ತಲೆಕೊಟ್ಟ ತಾಯಿ -ಮಗಳು
- ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕನ ಹತ್ಯೆ
- ಸಿಎಂ-ಡಿಸಿಎಂ ಕುರ್ಚಿ ಕಿತ್ತಾಟದಲ್ಲಿ ಬಡವಾದ ಕಾರ್ಯಕರ್ತರು
- ಸಂಚಾರ ನಿಯಮ ಉಲ್ಲಂಘಿಸಿದ 10 ಶಾಲಾ ವಾಹನಗಳ ಜಪ್ತಿ
- ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ : 15 ಮಂದಿ ಸೆರೆ, 39.26 ರೂ.ಕೋಟಿ ಮೌಲ್ಯದ ನಗದು, ಆಭರಣ ಜಪ್ತಿ