ಬೆಂಗಳೂರು, ಅ.18- ಮುಂಗಾರು ಮಳೆಯಂತೆ ಹಿಂಗಾರು ಮಳೆಯ ಆರಂಭವೂ ವಿಳಂಬವಾಗಿದ್ದು, ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಕಳೆದ ಎರಡು ವಾರದಲ್ಲಿ ಒಣಹವೆ ಹೆಚ್ಚಾಗಿದ್ದು, ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇದರಿಂದ ಹಿಂಗಾರು ಹಂಗಾಮಿನ ಬಿತ್ತನೆಯೂ ವಾಡಿಕೆಯಂತೆ ಆಗುತ್ತಿಲ್ಲ.
ಉತ್ತರ ಕರ್ನಾಟಕ ಭಾಗದಲ್ಲಿ ಅಕ್ಟೋಬರ್ ಆರಂಭದಿಂದಲೂ ಸಾಕಷ್ಟು ಮಳೆಯಾಗಿಲ್ಲ. ಒಳನಾಡಿನ ಹಲವೆಡೆ ಮಳೆಯಾಗಿದ್ದರೂ ವಾಡಿಕೆ ಪ್ರಮಾಣದಲ್ಲಿ ಆಗುತ್ತಿಲ್ಲ. ಈ ನಡುವೆ ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆಯೇ ಎಂಬುದು ಸದ್ಯಕ್ಕೆ ಗೊಚರವಾಗುತ್ತಿಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.
ಶೆಟ್ಟರ್ – ಸಾಹುಕಾರ್ ಭೇಟಿ ಬಗ್ಗೆ ಡಿಕೆಶಿ ಹೇಳಿದ್ದೇನು..?
ಹವಾಮಾನದಲ್ಲಿ ಉಂಟಾಗಿರುವ ವೈಪರಿತ್ಯದಿಂದ ನೈರುತ್ಯ ಮುಂಗಾರು ಮಳೆಯಲ್ಲೂ ವ್ಯತ್ಯಯವಾಗಿ ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಈಶಾನ್ಯ ಹಿಂಗಾರು ಹಂಗಾಮಿನಲ್ಲೂ ಹವಾಮಾನದ ವೈಪರಿತ್ಯ ಮುಂದುವರೆಯಲಿದೆ. ಅಂದರೆ ಮುಂದಿನ ಜನವರಿವರೆಗೂ ಹೆಚ್ಚುಕಡಿಮೆ ಹವಾಮಾನ ವೈಪರಿತ್ಯದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದರು.
ಸಾಮಾನ್ಯವಾಗಿ ಸೆಪ್ಟೆಂಬರ್ ಅಂತ್ಯಕ್ಕೆ ಮುಂಗಾರು ಮುಕ್ತಾಯಗೊಂಡು ಅಕ್ಟೋಬರ್ ಮೊದಲ ವಾರದಲ್ಲಿ ಹಿಂಗಾರು ಆರಂಭವಾಗಬೇಕಿತ್ತು. ಆದರೆ, ಹವಾಮಾನ ವೈಪರಿತ್ಯದಿಂದ ಇನ್ನೂ ಮುಂಗಾರು ಮಳೆ ಮುಕ್ತಾಯಗೊಂಡಿಲ್ಲ. ಮುಂಗಾರು ಮಾರುತಗಳ ಮರಳುವಿಕೆ ಆರಂಭಗೊಂಡಿದೆ. ಇನ್ನೆರಡು ದಿನದಲ್ಲಿ ಮುಂಗಾರು ಮರಳುವಿಕೆ ಪೂರ್ಣಗೊಳ್ಳಲಿದೆ.
ವಾಯುಭಾರ ಕುಸಿತಗಳು ಉಂಟಾಗಿರುವುದರಿಂದ ಮುಂಗಾರು ಮುಗಿಯುತ್ತಿದ್ದಂತೆ ಈ ಶಾನ್ಯ ಹಿಂಗಾರು ಆರಂಭಗೊಳ್ಳಬಹುದು. ವಾಯುಭಾರ ಕುಸಿತದಿಂದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗಲಿದೆಯೆ ಅಥವಾ ಇಲ್ಲವೆ ಎಂಬುದು ನಾಳೆ ಸ್ಪಷ್ಟವಾಗಲಿದೆ ಎಂದು ಅವರು ಹೇಳಿದರು.
ಅಕ್ಟೋಬರ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಅಂದರೆ ಶೇ.50ಕ್ಕಿಂತಲೂ ಹೆಚ್ಚು ಮಳೆ ಕೊರತೆ ರಾಜ್ಯದಲ್ಲಿ ಕಂಡುಬರುತ್ತಿದೆ. ಹೀಗಾಗಿ ಹಿಂಗಾರು ಹಂಗಾಮಿನ ಬೆಳೆಗಳ ಬಿತ್ತನೆಗೆ ತೊಂದರೆಯಾಗಿದೆ. ಮುಂಗಾರು ಹಂಗಾಮಿನ ಬೆಳೆಗಳು ಸಹ ತೇವಾಂಶ ಕೊರತೆಯಿಂದ ಒಣಗುತ್ತಿವೆ.
ಇಂಧನವಿಲ್ಲದ ಕಾರಣ 48 ವಿಮಾನ ಹಾರಾಟ ರದ್ದು ಮಾಡಿದ ಪಾಕಿಸ್ತಾನ
ಮಳೆಗಾಲ ಮುಕ್ತಾಯಗೊಂಡು ಚಳಿಗಾಲ ಆರಂಭವಾಗುವ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬೇಸಿಗೆಯ ವಾತಾವರಣ ಕಂಡುಬರುತ್ತಿದೆ. ಭಾಗಶಃ ಮೋಡ ಕವಿದಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಎಲ್ಲೆಡೆ ಒಣ ಹವೆಯೇ ಮುಂದುವರೆದಿದೆ. ಮಳೆ ಕೊರತೆಯಿಂದಾಗಿ ಜಲಾಶಯಗಳ ಒಳ ಹರಿವು ಕ್ಷೀಣಿಸಿದ್ದು, ಮುಂದಿನ ದಿನಗಳು ಇನ್ನಷ್ಟು ಕಷ್ಟದಾಯಕವಾಗಲಿವೆ.