Wednesday, June 11, 2025
Homeರಾಜ್ಯಚುರುಕಾದ ಮುಂಗಾರು, ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಮಳೆ

ಚುರುಕಾದ ಮುಂಗಾರು, ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಮಳೆ

Monsoon intensifies, rains to increase further in the state

ಬೆಂಗಳೂರು, ಜೂ.10– ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕುಗೊಂಡಿದ್ದು, ಚದುರಿದಂತೆ ಮಳೆ ಮಳೆಯಾಗಿದೆ. ಭಾನುವಾರದವರೆಗೂ ಮಳೆ ಮುಂದುವರೆಯುವ ಮುನ್ಸೂಚನೆಗಳಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ.

ಕಳೆದ ಮೂರು-ನಾಲ್ಕು ದಿನಗಳಿಂದ ಮಳೆ ರಾಜ್ಯದಲ್ಲಿ ಆರಂಭವಾಗಿದ್ದು, ದಿನದಿಂದ ದಿನಕ್ಕೆ ಮಳೆ ಪ್ರಮಾಣ ಹೆಚ್ಚಾಗಲಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲೈ ಸುಳಿಗಾಳಿ ಹಾಗೂ ಒಳನಾಡಿನಲ್ಲಿರುವ ಟ್ರಪ್‌ನ ಪ್ರಭಾವದಿಂದ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಮಳೆಯಾಗುತ್ತಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ನಿನ್ನೆ ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದೆ. ಧಾರವಾಡ ತಾಲ್ಲೂಕಿನ ನವಲಗುಂದದಲ್ಲಿ 118.2 ಮಿ.ಮೀ.ನಷ್ಟು ಭಾರಿ ಮಳೆಯಾಗಿದೆ. ಬೀದರ್‌, ದಾವಣಗೆರೆ, ಕಲಬುರಗಿ, ದಕ್ಷಿಣ ಕನ್ನಡ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಸಾಧಾರಣ ವ್ಯಾಪಕ ಪ್ರಮಾಣದ ಮಳೆಯಾಗಿದೆ.

ತುಮಕೂರು, ಮಂಡ್ಯ, ರಾಮನಗರ, ಗದಗ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಧಾರವಾಡ ಬೆಳಗಾವಿ, ಶಿವಮೊಗ್ಗ, ರಾಯಚೂರು, ಹಾವೇರಿ, ವಿಜಯನಗರ, ಕೋಲಾರ, ವಿಜಯಪುರ, ಕೊಡಗು, ಯಾದಗಿರಿ, ಮೈಸೂರು, ಬಾಗಲಕೋಟೆ, ಬಳ್ಳಾರಿ, ಚಿಕ್ಕಮಗಳೂರು, ಕೊಪ್ಪಳ, ಚಾಮರಾಜನಗರ, ಹಾಸನ ಜಿಲ್ಲೆಗಳ ಕೆಲವೆಡೆ ಮಾತ್ರ ಮಳೆಯಾಗಿದೆ.

ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಸಾಮಾನ್ಯ ಮುಂಗಾರು ಮುಂದುವರೆಯಲಿದೆ. ಇಂದಿನಿಂದ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ. ರಾಜ್ಯದ ಪೂರ್ವಭಾಗದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ.

ಗುರುವಾರದಿಂದ ಮಳೆ ಪ್ರಮಾಣ ಹೆಚ್ಚಾಗಲಿದ್ದು, ಕೆಲವೆಡೆ ಭಾರಿ ಮಳೆಯಾಗುವ ಲಕ್ಷಣಗಳು ಕಂಡುಬರುತ್ತಿವೆ. ಮುಂದಿನ ಭಾನುವಾರದವರೆಗೂ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಗಳಿವೆ.

RELATED ARTICLES

Latest News