Friday, November 22, 2024
Homeರಾಜ್ಯಜೂನ್‌ 2ರ ವೇಳೆ ರಾಜ್ಯಕ್ಕೆ ಮುಂಗಾರು ಆಗಮನ ಸಾಧ್ಯತೆ

ಜೂನ್‌ 2ರ ವೇಳೆ ರಾಜ್ಯಕ್ಕೆ ಮುಂಗಾರು ಆಗಮನ ಸಾಧ್ಯತೆ

ಬೆಂಗಳೂರು, ಮೇ 30- ಕೇರಳ ಕರಾವಳಿಯಲ್ಲಿ ನಿರಂತರ ಭಾರಿ ಮಳೆಯಾಗುತ್ತಿದ್ದರೂ ಪ್ರಸಕ್ತ ಸಾಲಿನ ನೈರುತ್ಯ ಮುಂಗಾರು ಸದ್ಯಕ್ಕೆ ಪ್ರಬಲವಾಗಿಲ್ಲ. ಮುಂಗಾರು ದುರ್ಬಲವಾಗಿರುವುದರಿಂದ ಕೇರಳ ಹಾಗೂ ಕರ್ನಾಟಕದ ಒಳನಾಡಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ನಾಳೆ ಮುಂಗಾರು ಕೇರಳ ಪ್ರವೇಶಿಸುವ ಸಾಧ್ಯತೆಗಳಿವೆ. ನಿರೀಕ್ಷೆಯಂತೆ ಮುಂಗಾರು ಆಗಮನವಾದರೆ ಒಂದೆರಡು ದಿನಗಳಲ್ಲಿ ರಾಜ್ಯ ಪ್ರವೇಶಿಸಲಿದೆ. ಅಂದರೆ ಜೂನ್‌ 2ರ ವೇಳೆಗೆ ರಾಜ್ಯದ ಕೆಲವು ಭಾಗದಲ್ಲಿ ಮುಂಗಾರು ಆಗಮನವಾಗುವ ನಿರೀಕ್ಷೆ ಇದೆ. ಕೇರಳ ಕರಾವಳಿಗೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ. ಮುಂಗಾರು ಆರಂಭಕ್ಕೆ ಪೂರಕವಾದ ಸನ್ನಿವೇಶಗಳು ಸೃಷ್ಟಿಯಾಗಿವೆ. ಆದರೂ ಮುಂಗಾರು ಶಕ್ತಿಯುತವಾಗಿ ಒಳನಾಡಿನತ್ತ ಮುನ್ನುಗ್ಗುವ ಲಕ್ಷಣಗಳು ಸದ್ಯಕ್ಕಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಮುಂಗಾರು ಆಗಮನ ಯಾವ ರೀತಿ ಆಗಲಿದೆ ಎಂಬುದನ್ನು ನಾಳೆಯವರೆಗೆ ಕಾದು ನೋಡಬೇಕಿದೆ. ಆ ನಂತರ ಸ್ಪಷ್ಟ ಚಿತ್ರಣ ಗೋಚರಿಸಲಿದೆ. ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಒಳನಾಡಿನಲ್ಲಿ ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆ ಮುಂದುವರೆದಿದೆ.ಆದರೆ, ವ್ಯಾಪಕ ಪ್ರಮಾಣದ ಮಳೆಯಾಗುತ್ತಿಲ್ಲ.

ವ್ಯಾಪಕ ಪ್ರಮಾಣದಲ್ಲಿ ಎಲ್ಲೆಡೆ ಮಳೆಯಾದರೆ ಮುಂಗಾರು ಪ್ರವೇಶವಾಗಿರುವುದು ಖಾತರಿಯಾಗಲಿದೆ. ರಾಜ್ಯದ ಕರಾವಳಿಯಲ್ಲಿ ಮಳೆಯಾಗುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಭಾರಿ ಮಳೆಯಾಗುತ್ತಿಲ್ಲ. ಇದರಿಂದ ಮುಂಗಾರಿನ ಆರಂಭ ದುರ್ಬಲವಾಗಿದೆ. ಅದು ಪ್ರಬಲಗೊಂಡಿಲ್ಲ. ನಾಳೆಯ ವೇಳೆಗೆ ಮುಂಗಾರಿನ ಸ್ಪಷ್ಟ ಚಿತ್ರಣ ಕಂಡುಬರಲಿದೆ ಎಂದು ತಜ್ಞರು ಹೇಳಿದರು.

ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದೆ. ಸಂಜೆ ಹಾಗೂ ರಾತ್ರಿ ವೇಳೆ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಸುಮಾರು ಒಂದು ವಾರ ಕಾಲ ರಾಜ್ಯದಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಇನ್ನೂ ಒಂದು ವಾರ ಮಳೆಯಾಗುವ ಮುನ್ಸೂಚನೆಗಳಿವೆ.

RELATED ARTICLES

Latest News