Friday, October 18, 2024
Homeರಾಜ್ಯಮುಂದುವರೆದ ಮುಂಗಾರು ಮಳೆ ಅಬ್ಬರ, ಜಲಾಶಯಗಳು ಭರ್ತಿ, ನದಿಪಾತ್ರದ ಗ್ರಾಮಗಳು ಜಲಾವೃತ

ಮುಂದುವರೆದ ಮುಂಗಾರು ಮಳೆ ಅಬ್ಬರ, ಜಲಾಶಯಗಳು ಭರ್ತಿ, ನದಿಪಾತ್ರದ ಗ್ರಾಮಗಳು ಜಲಾವೃತ

ಬೆಂಗಳೂರು,ಜು.26– ಮುಂಗಾರು ಮಳೆ ಅಬ್ಬರ ಮುಂದುವರೆದಿದೆ. ನಿರಂತರ ಮಳೆಯಿಂದ ಅನೇಕ ಕಡೆ ಮರಗಳು ಧರೆಗುರುಳಿ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿದೆ.ವಿದ್ಯುತ್‌ ಕಂಬಗಳು ಮುರಿದು ಬಿದ್ದು ಹಲವೆಡೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಜಲಾಶಯಗಳು ಭರ್ತಿಯಾಗಿ ಭಾರಿ ಪ್ರಮಾಣದ ನೀರನ್ನು ಹೊರಬಿಟ್ಟಿರುವುದರಿಂದ ನದಿಪಾತ್ರದ ಹಲವು ಗ್ರಾಮಗಳು ಜಲಾವೃತಗೊಂಡಿವೆ.

ಮಂಡ್ಯದಲ್ಲಿ ಕಾವೇರಿಯ ಅಬ್ಬರ ಹೆಚ್ಚಾಗಿದೆ. ಕೆಆರ್‌ಎಸ್‌‍ನಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿರುವುದರಿಂದ ನದಿಪಾತ್ರದಲ್ಲಿರುವ ಧಾರ್ಮಿಕ ಕ್ಷೇತ್ರಗಳು ಮುಳುಗಡೆಯಾಗಿವೆ.
ನಿಮಿಷಾಂಬ ದೇಗುಲದ ಸ್ನಾನಘಟ್ಟ ಸಂಪೂರ್ಣ ಜಲಾವೃತವಾಗಿದೆ. ಕಾವೇರಿ ನದಿ ಬಳಿ ಬ್ಯಾರಿಕೇಡ್‌ ಅಳವಡಿಸಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಭಕ್ತರು ನದಿಗೆ ತೆರಳದಂತೆ ಸೂಚನೆ ನೀಡಲಾಗಿದೆ.

ರಂಗನತಿಟ್ಟು ಪಕ್ಷಿಧಾಮ ಜಲಾವೃತಗೊಂಡಿದ್ದು, ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಕಾವೇರಿಯ ಬೋರ್ಗರೆತಕ್ಕೆ ಪಕ್ಷಿ ಸಂಕುಲನ ನಲುಗಿ ಹೋಗಿದೆ. ಬೋಟಿಂಗ್‌ ಪಾಯಿಂಟ್‌ ಅನ್ನು ಸ್ಥಗಿತಗೊಳಿಸಲಾಗಿದೆ.ಉತ್ತರ ಕರ್ನಾಟಕದ ಬೆಳಗಾವಿಯಲ್ಲೂ ಮಳೆಯ ಆರ್ಭಟ ಮುಂದುವರೆದಿದೆ. ಬೆಳಗಾವಿ, ಹಾವೇರಿ, ಯಾದಗಿರಿ ಜಿಲ್ಲೆಗಳಲ್ಲೂ ಮಳೆಯ ರೌದ್ರನರ್ತನ ಮುಂದುವರೆದಿದೆ. ಭಾರಿ ಪ್ರಮಾಣದಲ್ಲಿ ಜಲಾಶಯಗಳಿಂದ ನೀರನ್ನು ಹೊರಬಿಡುತ್ತಿರುವುದರಿಂದ ನದಿಪಾತ್ರದ ಹಲವು ಗ್ರಾಮಗಳಲ್ಲಿ ಮುಳುಗಡೆ ಭೀತಿ ಎದುರಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಹಲವರನ್ನು ಸ್ಥಳಾಂತರ ಮಾಡಲಾಗಿದೆ. ಬೆಳಗಾವಿ, ಖಾನಾಪುರ ಮುಂತಾದೆಡೆ ಮಳೆ ಧಾರಕಾರವಾಗಿ ಸುರಿಯುತ್ತಿರುವುದರ ಜೊತೆಗೆ ಮಹಾರಾಷ್ಟ್ರದಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಹೊಲ-ಗದ್ದೆಗಳು ಜಲಾವೃತಗೊಂಡು ಪ್ರವಾಹದ ಭೀತಿ ಎದುರಾಗಿದೆ.

ದೂಪದಾಳ, ಮಾರ್ಕಂಡಯ್ಯ, ಬಳ್ಳಾರಿ ನಾಲದಿಂದ ಘಟಪ್ರಭಾ ನದಿಗೆ 60 ಸಾವಿರ ಕ್ಯೂಸೆಕ್‌್ಸ ನೀರನ್ನು ಹೊರಬಿಡಲಾಗುತ್ತಿದೆ. ಆಲಮಟ್ಟಿಯಿಂದ ಕೃಷ್ಣಾ ನದಿಗೆ 2,500 ಲಕ್ಷ ಕ್ಯೂಸೆಕ್‌್ಸ ನೀರನ್ನು ಹೊರಬಿಡಲಾಗುತ್ತಿದೆ. ನಾರಾಯಣಪುರ ಜಲಾಶಯದಿಂದಲೂ ಕೂಡ ಭಾರಿ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದ್ದು, ಕೃಷ್ಣ, ತುಂಗಭದ್ರಾ ತೀರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.

ಮಲೆನಾಡು ಭಾಗದ ಸಕಲೇಶಪುರ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಧಾರಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.ಉತ್ತರಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೂಡ ಮಳೆ ನಿರಂತರವಾಗಿ ಸುರಿಯುತ್ತಿದೆ. ಹಲವೆಡೆ ಗುಡ್ಡ ಕುಸಿದಿದೆ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡು ಕಡಲ ಕೊರೆತ ಉಂಟಾಗಿದೆ.

ಹಾಸನ ಜಿಲ್ಲೆಯಲ್ಲಿ ಸತತ ಹತ್ತು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೇಮಾವತಿ ಉಪನದಿಗಳಾದ ಐಗೂರು, ಎಡಕೆರೆ, ಪಾಲಳ್ಳಿ ಹೊಳೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯತೊಡಗಿದೆ.

ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತುಂಗ, ಭದ್ರ, ಘಟಪ್ರಭಾ, ಮಲಪ್ರಭಾ, ಕಾವೇರಿ, ನೇತ್ರಾವತಿ, ಅಘನಾಶಿನಿ ಸೇರಿದಂತೆ ಬಹುತೇಕ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹದ ಭೀತಿ ಎದುರಾಗಿದ್ದು, ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ.

RELATED ARTICLES

Latest News