Tuesday, September 17, 2024
Homeರಾಜ್ಯರಾಜ್ಯಕ್ಕೆ ಜೂನ್‌ ಮೊದಲ ವಾರ ರಾಜ್ಯ ಪ್ರವೇಶಿಸಲಿದೆ ಮುಂಗಾರು

ರಾಜ್ಯಕ್ಕೆ ಜೂನ್‌ ಮೊದಲ ವಾರ ರಾಜ್ಯ ಪ್ರವೇಶಿಸಲಿದೆ ಮುಂಗಾರು

ಬೆಂಗಳೂರು, ಮೇ 26-ಪ್ರಸಕ್ತ ಸಾಲಿನ ನೈರುತ್ಯ ಮುಂಗಾರು ಮೇ 31ಕ್ಕೆ ಕೇರಳ ಪ್ರವೇಶಿಸುವ ಮುನ್ಸೂಚನೆ ಇದ್ದು, ಜೂನ್‌ ಮೊದಲ ವಾರದಲ್ಲಿ ರಾಜ್ಯಕ್ಕೆ ಪ್ರವೇಶಿಸುವ ಸಾಧ್ಯತೆಗಳಿವೆ. ಬಂಗಾಳಕೊಲ್ಲಿಯಲ್ಲಿ ಚಂಡ ಮಾರುತ ಉಂಟಾಗಿದ್ದರೂ, ಮುಂಗಾರು ಮಳೆ ಆರಂಭಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗುತ್ತಿದೆ. ಚಂಡಮಾರುತ ಪಶ್ಚಿಮ ಬಂಗಾಲ ಹಾಗೂ ಬಾಂಗ್ಲಾ ಕಡೆಗೆ ಸಾಗುತ್ತಿರುವುದರಿಂದ ಮುಂಗಾರು ಮಳೆಯ ಮೇಲೆ ವ್ಯತಿರಿಕ್ತ ಪರಿಣಾಮಗಳಿಲ್ಲ. ಈಗಾಗಲೇ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹದಲ್ಲಿ ಮಳೆ ಆರಂಭವಾಗಿದೆ. ಅರಬ್ಬೀ ಸಮುದ್ರದಲ್ಲೂ ನಿರೀಕ್ಷೆಯಂತೆ ಮುಂಗಾರು ಆರಂಭಕ್ಕೆ ಪೂರಕ ವಾತಾವರಣವಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಕಳೆದ ಎರಡು ವಾರಗಳಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಒಳನಾಡಿನಲ್ಲಿ ಸಾಕಷ್ಟು ಮಳೆಯಾಗಿದೆ. ತೀವ್ರ ಬರ ಹಾಗೂ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮುಂಗಾರು ಪೂರ್ವ ಮಳೆ ತಂಪೆರೆದಿದೆ. ಜತೆಗೆ ವಾಡಿಕೆಗಿಂತ ಹೆಚ್ಚು ಮಳೆ ಬೇಸಿಗೆಯಲ್ಲೂ ಹಲವೆಡೆ ಆಗುತ್ತಿದೆ.

ಮುಂಗಾರು ಆರಂಭವಾಗುವ ಪ್ರಕ್ರಿಯೆ ಹಿನ್ನೆಲೆಯಲ್ಲಿ ರಾಜ್ಯ ಒಳನಾಡಿನಲ್ಲಿ ನಾಲ್ಕು ದಿನಗಳ ಕಾಲ ಮಳೆ ಪ್ರಮಾಣ ಕಡಿಮೆಯಾಗಲಿದೆ. ಆದರೆ, ಪೂರ್ಣವಾಗಿ ಮಳೆ ನಿಲ್ಲುವುದಿಲ್ಲ. ಮೋಡ ಕವಿದ ವಾತಾವರಣವಿದ್ದು, ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ.
ಆದರೆ, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಮುಂದುವರೆಯಲಿದೆ. ನಾಲ್ಕೈದು ದಿನಗಳ ನಂತರ ಮುಂಗಾರು ವ್ಯಾಪಕವಾಗಿ ವ್ಯಾಪಿಸುವ ಲಕ್ಷಣಗಳಿವೆ. ಚಾಮರಾಜನಗರ ಮೂಲಕ ರಾಜ್ಯಕ್ಕೆ ಆಗಮಿಸುವ ಮುಂಗಾರು ಮಳೆ ಒಂದು ವಾರದೊಳಗೆ ರಾಜ್ಯಾದ್ಯಂತ ವ್ಯಾಪಿಸಲಿದೆ.

ಮುಂಗಾರು ಮಳೆ ಆರಂಭಗೊಳ್ಳುತ್ತಿದ್ದಂತೆ ವ್ಯಾಪಕ ಪ್ರಮಾಣದಲ್ಲಿ ಎಲ್ಲೆಡೆ ಮಳೆಯಾಗಲಿದೆ. ವಾಡಿಕೆ ಪ್ರಮಾಣದ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಈ ಬಾರಿಯ ಮುಂಗಾರು ಆಶಾದಾಯಕವಾಗಿರಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ವರ್ಷಉತ್ತಮವಾದ ಮಳೆಯಾಗುವ ನಿರೀಕ್ಷೆ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಲ್ಲಿ ರೈತರು ನಿರತರಾಗಿದ್ದಾರೆ,

RELATED ARTICLES

Latest News