ಬೆಂಗಳೂರು,ಮಾ.8- ಬಜೆಟ್ನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚು ಅನುದಾನ ಸಿಗುತ್ತಿರುವುದಕ್ಕೆ ಹಳೆ ಮೈಸೂರು ಭಾಗದಲ್ಲಿ ಸಿಡಿಮಿಡಿ ವ್ಯಕ್ತವಾಗುತ್ತಿದೆ. ಬೆಂಗಳೂರು ಮತ್ತು ಕಲಬುರಗಿ ಎರಡೂ ಕಡೆ ಸುದ್ದಿಗಾರರ ಜೊತೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಲ್ಯಾಣ ಕರ್ನಾಟಕ ಭಾಗದವರಿಗೆ ಲಾಟರಿ ಬಂಪರ್ ಹೊಡೆದಿದೆ. ಮಲ್ಲಿಕಾರ್ಜುನ ಖರ್ಗೆಯವರು 371 ಜೆ ಜಾರಿಗೆ ತಂದಿದ್ದರಿಂದಾಗಿ ಪ್ರತಿವರ್ಷ 5 ಸಾವಿರ ಕೋಟಿ ರೂ. ವಿಶೇಷ ಅನುದಾನ ನೀಡುವ ಬದ್ಧತೆಯನ್ನು ರಾಜ್ಯಸರ್ಕಾರ ಮುಂದುವರೆಸಿದೆ ಎಂದಿದ್ದಾರೆ.
ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡು ವಾಗಲೂ
ಡಿ.ಕೆ.ಶಿವಕುಮಾರ್ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಅನುದಾನವನ್ನು ಪ್ರಸ್ತಾಪಿಸಿ ಹಳೆ ಮೈಸೂರು ಭಾಗದ ಶಾಸಕರು ಜಗಳ ಮಾಡುತ್ತಿದ್ದಾರೆ. ನಮಗೆಲ್ಲಾ ಶೇ.25 ರಷ್ಟು ಅನುದಾನ ಸಿಕ್ಕರೆ ಕಲ್ಯಾಣ ಕರ್ನಾಟಕ ಭಾಗದ ಶಾಸಕರಿಗೆ ಶೇ.75 ರಷ್ಟು ಅನುದಾನ ಲಭ್ಯವಾಗುತ್ತಿದೆ. ಬಜೆಟ್ನಲ್ಲಿ ಯಾಂತ್ರಿಕವಾಗಿ ಬರುವ ಅನುದಾನದ ಜೊತೆಗೆ ವಿಶೇಷ ಅನುದಾನವೂ ದೊರೆಯುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಕಲ್ಯಾಣ ಕರ್ನಾಟಕಕ್ಕೆ ಕಲ್ಯಾಣ ಪಥ ಎಂಬ ವಿಶೇಷ ರಸ್ತೆ ಯೋಜನೆಗೆ 1 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 5 ಸಾವಿರ ಕೋಟಿ ರೂ. ಕಲ್ಯಾಣ ಕರ್ನಾಟಕಕ್ಕೆ ಅನುದಾನದ ಪಾಲು ಸಿಗುತ್ತಿದೆ. ಆದಾಗ್ಯೂ ಅನುದಾನ ಕಡಿಮೆಯಾಗುತ್ತಿದೆ ಎಂದರೆ ಹೇಗೆ? ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಈ ವೇಳೆ ಡಿ.ಕೆ.ಶಿವಕುಮಾರ್ರವರು, ನೀವೆಲ್ಲಾ ಹೆಚ್ಚು ಅನುದಾನ ಪಡೆದು ಮುಂದೆ ಹೋಗಿ, ನಾವು ಹಿಂದೆ ಹೋಗುತ್ತೇವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ್ಸಿಂಗ್, ನಮ ಭಾಗದಲ್ಲಿ ಪ್ರತಿವರ್ಷ ಸುಮಾರು 8 ಸಾವಿರ ಕೋಟಿಯಷ್ಟು ಅಭಿವೃದ್ಧಿಯಾಗುತ್ತದೆ. ಕಲ್ಯಾಣ ಪಥ ಹಾಗೂ ಪ್ರಗತಿ ಪಥ ಎರಡರಿಂದ 2 ಸಾವಿರ ಕೋಟಿ ರೂ. ಹಣ ಸಿಗುತ್ತಿದೆ. ಬೇರೆಬೇರೆ ಯೋಜನೆಗಳಿಗೂ ಹೆಚ್ಚಿನ ಹಣ ಸಿಗುತ್ತಿದೆ. ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ 11,720 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.