ಚೆನ್ನೈ,ಸೆ.28- ತಮಿಳು ನಟ ಹಾಗೂ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಅವರ ಕರೂರ್ ರ್ಯಾಲಿ ವೇಳೆ ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದಲ್ಲಿ ಸಾವಿನ್ನಪ್ಪಿದವರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಇದರಲ್ಲಿ ಒಂಬತ್ತು ಮಕ್ಕಳು ಮತ್ತು 17 ಮಹಿಳೆಯರು ಸೇರಿದಂತೆ 39 ಜನರು ಮೃತಪಟ್ಟಿದ್ದಾರೆ. ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಿದೆ. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.
ಘಟನೆಯಲ್ಲಿ ಮೃತಪಟ್ಟವರ ಪೈಕಿ 35 ಮಂದಿ ಮೃತದೇಹಗಳ ಗುರುತು ಪತ್ತೆಯಾಗಿದೆ. ಗುರುತು ಪತ್ತೆಯಾದವರಲ್ಲಿ ಕರೂರು ಜಿಲ್ಲೆಯವರು 28 ಜನ, ಈರೋಡ್, ತಿರುಪುರ, ಧಾರಾಪುರಂ ಜಿಲ್ಲೆಗಳ ತಲಾ ಇಬ್ಬರು, ಸೇಲಂ ಜಿಲ್ಲೆಯ ಒಬ್ಬರ ಗುರುತು ಪತ್ತೆಯಾಗಿದೆ. ಉಳಿದ 4 ಶವಗಳನ್ನು ಗುರುತಿಸುವ ಕಾರ್ಯವನ್ನು ಸ್ಥಳೀಯ ಪೊಲೀಸರು ಮಾಡುತ್ತಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಕರೂರು ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ಕಾಲ್ತುಳಿತದಲ್ಲಿ ಗಾಯಗೊಂಡ 50 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕರೂರಿನ ಖಾಸಗಿ ಆಸ್ಪತ್ರೆಗಳಲ್ಲಿ 61 ಜನರೂ ಸೇರಿ ಒಟ್ಟು 111 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳ ಪರಿಶೀಲನೆ ನಡೆಸಿದ ಎಡಿಜಿಪಿ ಡೇವಿಡ್ ಸನ್ ದೇವರ್ಶಿತಮ್ ಮಾತನಾಡಿ, 10,000 ಜನ ಸೇರುತ್ತಾರೆ ಅಂತ ಅನುಮತಿ ಪಡೆದಿದ್ದರು. ಹೀಗಾಗಿ 116 ಸ್ಥಳೀಯ ಪೊಲೀಸರು ಹೊರತುಪಡಿಸಿ ಹೆಚ್ಚುವರಿ 500 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಈ ಹಿಂದೆಯೂ 15,000 ಜನಕ್ಕೆ 600 ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ ಇಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಹೀಗಾಗಿ ಕಾಲ್ತುಳಿತ ಸಂಭವಿಸಿದೆ. ದುರಂತಕ್ಕೆ ಕಾರಣಗಳನ್ನು ಪಟ್ಟಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಹೆಚ್ಚಿನ ಸಂಖ್ಯೆಯಲ್ಲಿ ಜನರು ರ್ಯಾಲಿಯಲ್ಲಿ ಭಾಗವಹಿಸಿದ್ದರು. ಇದರಿಂದ ಕಾಲ್ತುಳಿತ ಸಂಭವಿಸಿದೆ. ನಮಕ್ಕಲ್ನಲ್ಲಿ ರ್ಯಾಲಿಯ ನಂತರ ವಿಜಯ್ ಭಾಷಣಕ್ಕೆ ನಿಗದಿಯಾಗಿದ್ದ ಸ್ಥಳದಲ್ಲಿ ಕನಿಷ್ಠ 30,000 ಜನರು ಸೇರಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಂದಾಜಿಸಿದ್ದಾರೆ.
38 ಜನರ ಶವಗಳನ್ನು ಗುರುತಿಸಲಾಗಿದೆ. ಈ ಪೈಕಿ 14 ಜನರನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಒಬ್ಬ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಅವರನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ದಿಂಡಿಗಲ್ ಜಿಲ್ಲಾಧಿಕಾರಿ ಎಸ್.ಸರವಣನ್ ತಿಳಿಸಿದ್ದಾರೆ. ರ್ಯಾಲಿಗೆ ಕನಿಷ್ಠ 30 ಸಾವಿರ ಜನರು ಸೇರಿದ್ದರು. ಅಲ್ಲದೆ ಅತೀವ ಬಿಸಿಲು ಮತ್ತು ಸೆಖೆಯಿಂದಾಗಿ ದಣಿದಿದ್ದ ಜನರ ಪೈಕಿ ಹಲವರು ಮೂರ್ಛೆ ಹೋಗಿದ್ದರು. ಇದೇ ಸಂದರ್ಭದಲ್ಲಿ ನಟ ವಿಜಯ್ ವೇದಿಕೆ ಮೇಲೆ ಆಗಮಿಸಿದಾಗ ಅವರನ್ನು ನೋಡಲು ಅಭಿಮಾನಿಗಳು ಏಕಾಏಕಿ ನುಗ್ಗಿದರು. ಈ ವೇಳೆ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಜನಸಂದಣಿ ಹೆಚ್ಚಾದಾಗ ಮತ್ತು ಬಿಸಿಲು ಮತ್ತು ಜನದಟ್ಟಣೆಯಿಂದಾಗಿ ಜನರು ಉಸಿರುಗಟ್ಟಿ ಬೀಳಲು ಆರಂಭವಾದಾಗ , ನಟ ವಿಜಯ್ ತಮ ಭಾಷಣವನ್ನು ನಿಲ್ಲಿಸಿ ಸಹಾಯಕ್ಕಾಗಿ ಜನಸಮೂಹದ ಮೇಲೆ ನೀರಿನ ಬಾಟಲಿಗಳನ್ನು ಎಸೆಯಲು ಪ್ರಾರಂಭಿಸಿದರು ಎಂದು ಸಾಮಾಜಿಕ ಜಲತಾಣಗಳಲ್ಲಿ ಪ್ರಸಾರವಾಗುತ್ತಿರುವ ವೀಡಿಯೊಗಳಲ್ಲಿ ದಾಖಲಾಗಿದೆ. ಕರೂರಿನಲ್ಲಿ ಲಕ್ಷಾಂತರ ಜನರು ಬೆಳಿಗ್ಗೆಯಿಂದಲೇ ಕುಡಿಯುವ ನೀರು ಅಥವಾ ಆಹಾರವಿಲ್ಲದೆ ವಿಜಯ್ ಅವರನ್ನು ನೋಡಲು ಕಾಯುತ್ತಿದ್ದರು. ಗಾಳಿ ವ್ಯವಸ್ಥೆ ಇಲ್ಲದ ಕಾರಣ ಜನರು ಸುಸ್ತಾಗಿದ್ದರು. ಸಾವಿರಾರು ಜನರು ಸೇರಿದ್ದರಿಂದ ಅವರಿಗೆ ಅಲ್ಲಿಂದ ಹೊರಹೋಗಲು ಕೂಡ ಸಾಧ್ಯವಾಗಲಿಲ್ಲ. ವಿಜಯ್ ತಮ ಭಾಷಣ ಮುಗಿಸಿದ ನಂತರ, ಜನರು ಹೊರಹೋಗಲು ಪ್ರಯತ್ನಿಸಿದಾಗ ಕಾಲ್ತುಳಿತ ಉಂಟಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಇನ್ನು ದುರಂತದ ಕುರಿತು ಮಾತನಾಡಿದ ತಮಿಳುನಾಡು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಸ್. ಡೇವಿಡ್ಸನ್ ದೇವಶಿರ್ವತಮ್ ಅವರು, ನಾವು ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಬೇಕಾಗಿದೆ. ದುರಂತದಲ್ಲಿ ಮೂವತ್ತೊಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

