ಹಾಸನ, ಸೆ.13-ಮೊಸಳೆಹೊಸಹಳ್ಳಿ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಪರಿಹಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಬೈರೇಗೌಡ ಒತ್ತಾಯಿಸಿದರು.
ಅಪಘಾತ ಸಂಭವಿಸಿದ ಸ್ಥಳ ಪರಿಶೀಲನೆ ನಡೆಸಿ, ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಟ್ರಕ್ ಹರಿದು 9 ಜನ ಮೃತಪಟ್ಟಿದ್ದಾರೆ. ದುರಂತಕ್ಕೆ ಟ್ರಕ್ ಚಾಲಕ ಭುವನ್ ಬೇಜವಾಬ್ದಾರಿಯೇ ಕಾರಣ ಎಂದರು.
ಈಗಾಗಲೇ ಆತನ ವಿರುದ್ಧ ಗೋರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಜನರಿಂದ ತೀವ್ರ ಥಳಿತಕ್ಕೊಳಪಟ್ಟ ಕಾರಣ ಚಿಕಿತ್ಸೆ ನೀಡಲಾಗುತ್ತಿದೆ. ಆತನ ವಿರುದ್ಧ ಎಲ್ಲಾ ರೀತಿಯ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.
ಈ ಭಾಗದಲ್ಲಿ ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಿಸಿಲ್ಲದ ಕಾರಣ ರಸ್ತೆಯನ್ನು ಮತ್ತಷ್ಟು ಅಗಲೀಕರಣ ಮಾಡಬೇಕು ಎಂಬ ಕೂಗು ಹಿಂದಿನಿಂದಲೂ ಕೇಳಿಬರುತ್ತಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸರ್ಕಾರದ ಪರವಾಗಿ ನಾನು ಹಾಗೂ ಹಾಸನ ಜಿಲ್ಲೆ ಸಂಸದ ಶ್ರೇಯಸ್ ಎಂ. ಪಾಟೀಲ್ ಅವರೂ ಪತ್ರ ಬರೆಯುತ್ತೇವೆ ಎಂದು ಅವರು ಹೇಳಿದರು.
ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಪರಿಹಾರ ನೀಡಬೇಕಿದೆ. ಈ ಬಗ್ಗೆಯೂ ಪತ್ರದಲ್ಲಿ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.
ವಿರೋಧ ಪಕ್ಷದ ಕೆಲವರು ಈ ಅಪಘಾತದ ಘಟನೆಗೆ ಕೋಮು ಬಣ್ಣ ನೀಡುತ್ತಿರುವುದೂ ಸಹ ಕಂಡುಬಂದಿದೆ. ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ಇಂತಹ ದುರ್ವರ್ತನೆಯೂ ಸಹ ಕಾನೂನು ರೀತಿಯ ಅಪರಾಧವಾಗಿದ್ದು, ಅಂತಹವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳ ಲಾಗುವುದು. ಈ ಬಗ್ಗೆ ಜಿಲ್ಲಾ ಎಸ್ಪಿ ಅವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.