Saturday, March 1, 2025
Homeಕ್ರೀಡಾ ಸುದ್ದಿ | Sportsಮತ್ತೊಂದು ದಾಖಲೆಗೆ ಬರೆಯಲು ಸಜ್ಜಾದ ಕೊಹ್ಲಿ

ಮತ್ತೊಂದು ದಾಖಲೆಗೆ ಬರೆಯಲು ಸಜ್ಜಾದ ಕೊಹ್ಲಿ

Most matches for India in ODIs, Virat Kohli to play 300th ODI

ನವದೆಹಲಿ, ಮಾ.1– ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೊಸ ಸಾಧನೆಗೆ ಮುನ್ನುಡಿ ಬರೆಯಲು ತಯಾರಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ ನಾಳೆ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯವನ್ನಾಡುವ ಕೊಹ್ಲಿ 300ನೆ ಪಂದ್ಯವಾಡಿದ ಭಾರತದ 7 ಆಟಗಾರ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.

ಅಲ್ಲದೆ ಈ ಸಾಧನೆ ಮಾಡಿದ ಭಾರತದ 7ನೇ ಹಾಗೂ ವಿಶ್ವದ 22ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಕೇವಲ 21 ಆಟಗಾರರು ಮಾತ್ರ 300 ಕ್ಕೂ ಅಧಿಕ ಪಂದ್ಯಗಳನ್ನಾಡಿದ್ದಾರೆ. ವಿಶ್ವದ ಇಪ್ಪತ್ತೊಂದು ಆಟಗಾರರಲ್ಲಿ ಕೇವಲ 6 ಭಾರತೀಯರು ಮಾತ್ರ ಈ ಸಾಧನೆ ಮಾಡಿದ್ದಾರೆ. ಇದೀಗ ಈ ಸಾಧನೆ ಮಾಡಲಿರುವ 7ನೇ ಆಟಗಾರನಾಗಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಾಳೆ ನಡೆಯಲಿರುವ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಕಣಕ್ಕಿಳಿದರೆ ಏಕದಿನ ಕ್ರಿಕೆಟ್‌ನಲ್ಲಿ 300 ಪಂದ್ಯಗಳನ್ನಾಡಿದ 22ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಈವರೆಗೆ 299 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 287 ಇನಿಂಗ್ಸ್ ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 15078 ಎಸೆತಗಳನ್ನು ಎದುರಿಸಿ ಒಟ್ಟು 14085 ರನ್ ಕಲೆಹಾಕಿದ್ದಾರೆ.

ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವದ 3ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ 299 ಏಕದಿನ ಮ್ಯಾಚ್‌ಗಳ 296 ಇನಿಂಗ್ಸ್ ಗಳಲ್ಲಿ ಫೀಲ್ಡಿಂಗ್ ಮಾಡಿರುವ ವಿರಾಟ್ ಕೊಹ್ಲಿ ಒಟ್ಟು 158 ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಅತೀ ಹೆಚ್ಚು ಕ್ಯಾಚ್‌ಗಳನ್ನು ಹಿಡಿದ ಫೀಲ್ಡರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದೀಗ ಟೀಮ್ ಇಂಡಿಯಾದ ಬೆಸ್ಟ್ ಫೀಲ್ಡರ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ 3 ಕ್ಯಾಚ್ ಹಿಡಿದರೆ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲಿದ್ದಾರೆ. ಅಂದರೆ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿಗೆ ಎರಡು ವಿಶ್ವ ದಾಖಲೆ ನಿರ್ಮಿಸುವ ಅವಕಾಶವಿದೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ವಿಶ್ವ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. 1989 ರಿಂದ 2012 ರವರೆಗೆ ಸಚಿನ್ ತೆಂಡೂಲ್ಕರ್ ಒಟ್ಟು 463 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 452 ಇನಿಂಗ್ಸ್ ಆಡಿರುವ ಅವರು 18426 ರನ್ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

RELATED ARTICLES

Latest News