ಬೆಂಗಳೂರು, ಡಿ.12- ಕೌಟುಂಬಿಕ ಕಲಹದಿಂದ ಮನನೊಂದು ತನ್ನಿಬ್ಬರು ಕರುಳ ಕುಡಿಗಳನ್ನು ಉಸಿರುಗಟ್ಟಿಸಿ ಸಾಯಿಸಿ ನಂತರ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಡಿಗೇಹಳ್ಳಿಯ ಬಾಲಾಜಿ ಲೇಔಟ್, ನಾಲ್ಕನೇ ಕ್ರಾಸ್ನ ಅಪಾರ್ಟ್ಮೆಂಟ್ವೊಂದರ 3ನೇ ಫ್ಲಾಟ್ನಲ್ಲಿ ವಾಸವಾಗಿದ್ದ ಕುಸುಮಾ(36) ಎಂಬುವವರೇ ಪುತ್ರ ಶ್ರೇಯಾನ್(6) ಹಾಗೂ ಮಗಳು ಚಾರ್ವಿ(2)ಯನ್ನು ಉಸಿರುಗಟ್ಟಿಸಿ ಸಾಯಿಸಿ ಆತಹತ್ಯೆಗೆ ಶರಣಾದ ಗೃಹಿಣಿ.
ಪತಿ ಸುರೇಶ್ ಅವರು ಖಾಸಗಿ ಕಂಪೆನಿಯೊಂದರಲ್ಲಿ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಪತಿಯೊಂದಿಗೆ ಕೌಟುಂಬಿಕ ವಿಚಾರವಾಗಿ ಜಗಳವಾಗಿದ್ದು, ಇದರಿಂದ ಮನನೊಂದಿದ್ದ ಕುಸುಮಾ ಆತಹತ್ಯೆ ಮಾಡಿಕೊಳ್ಳಲು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.
ನಿನ್ನೆ ಬೆಳಗ್ಗೆ ಪತಿ ಸುರೇಶ್ ಅವರು ಎಂದಿನಂತೆ ಕೆಲಸಕ್ಕೆ ಹೋಗಿದ್ದಾಗ ನಮ ಸಾವಿಗೆ ನಾವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಮೊದಲು ಇಬ್ಬರು ಮಕ್ಕಳಿಗೆ ದಿಂಬನ್ನು ಮುಖದ ಮೇಲಿಟ್ಟು ಉಸಿರುಗಟ್ಟಿಸಿ ಸಾಯಿಸಿ ನಂತರ ಫ್ಯಾನ್ಗೆ ನೇಣು ಬಿಗಿದುಕೊಂಡು ಕುಸುಮಾ ಆತಹತ್ಯೆ ಮಾಡಿಕೊಂಡಿದ್ದಾರೆ
ರಾತ್ರಿ 9.30ರ ಸುಮಾರಿಗೆ ಪತಿ ಮನೆಗೆ ಬಂದಾಗ ಪತ್ನಿ, ಮಕ್ಕಳು ಸಾವನ್ನಪ್ಪಿರುವುದು ಕಂಡು ಬಂದಿದೆ. ವಿಷಯ ತಿಳಿದು ಕೊಡುಗೇಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ಮೂವರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಾಥಮಿಕ ತನಿಖೆಯಿಂದ ಕೌಟುಂಬಿಕ ಕಲಹದಿಂದಾಗಿ ಈ ಘಟನೆ ನಡೆದಿರಬಹುದೆಂಬುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.