ಬೆಂಗಳೂರು,ಅ.10- ಇಬ್ಬರು ಕರುಳ ಕುಡಿಗಳನ್ನು ಕೊಂದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಭುವನೇಶ್ವರಿ ನಗರದ 8ನೇ ಮುಖ್ಯ ರಸ್ತೆ, 4ನೇ ಅಡ್ಡ ರಸ್ತೆಯ ಮನೆಯೊಂದರಲ್ಲಿ ವಾಸವಾಗಿದ್ದ ವಿಜಯಲಕ್ಷ್ಮಿ (27) ಎಂಬುವವರೇ ತನ್ನ ಮಗಳು ಬೃಂದಾ (4) ಹಾಗೂ ಒಂದೂವರೆ ವರ್ಷದ ಮಗ ಭುವನ್ ನನ್ನು ಕೊಂದು ಆತಹತ್ಯೆ ಮಾಡಿಕೊಂಡವರು.
ಮೂಲತಃ ರಾಯಚೂರು ಜಿಲ್ಲೆ ಮಸ್ಕಿಯವರಾದ ರಮೇಶ್ ಅವರು ಸಂಬಂಧಿ ವಿಜಯಲಕ್ಷ್ಮಿ ಅವರನ್ನು ಮದುವೆಯಾಗಿದ್ದು, ನಗರಕ್ಕೆ ಬಂದು ಭುವನೇಶ್ವರಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇಬ್ಬರು ಮಕ್ಕಳೊಂದಿಗೆ ದಂಪತಿ ವಾಸವಾಗಿದ್ದು, ಇವರ ಜೊತೆ ರಮೇಶ್ ಅವರ ಚಿಕ್ಕಮ ನೆಲೆಸಿದ್ದು ಅವರೂ ಸಹ ಕೆಲಸಕ್ಕೆ ಹೋಗುತ್ತಿದ್ದರು.
ರಮೇಶ್ ಅವರು ಮಾಲ್‌ವೊಂದರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದು, ಕೆಲಸದ ನಿಮಿತ್ತ ಊರಿಗೆ ಹೋಗಿದ್ದರು.ನಿನ್ನೆ ರಮೇಶ್ ಅವರ ಚಿಕ್ಕಮ ಎಂದಿನಂತೆ ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಿದ್ದಾರೆ. ಆ ಸಂದರ್ಭದಲ್ಲಿ ಮನೆಯಲ್ಲಿದ್ದ ವಿಜಯಲಕ್ಷ್ಮಿ ಅವರು ಇಬ್ಬರು ಮಕ್ಕಳಿಗೆ ವೇಲ್‌ನಿಂದ ಕುತ್ತಿಗೆ ಬಿಗಿದು ನೇಣುಹಾಕಿ ಕೊಂದು ನಂತರ ಸೀರೆಯಿಂದ ಆಕೆಯೂ ಫ್ಯಾನಿಗೆ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ.
ಸಂಜೆ ಕೆಲಸ ಮುಗಿಸಿಕೊಂಡು ರಮೇಶ್ ಚಿಕ್ಕಮ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಇವರ ಮನೆಯಿಂದ ಕೂಗಾಟ-ಕಿರುಚಾಟ ಕೇಳಿ ನೆರೆಹೊರೆಯವರು ಬಂದು ನೋಡಿದಾಗ ಮಕ್ಕಳು ಹಾಗೂ ತಾಯಿ ಮೃತಪಟ್ಟಿರುವುದು ಗೊತ್ತಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿದು ಬಾಗಲಗುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮೂವರ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.ಪತ್ನಿ ಮತ್ತು ಮಕ್ಕಳು ಮೃತಪಟ್ಟಿರುವ ಸುದ್ದಿ ತಿಳಿದು ಇಂದು ಬೆಳಗ್ಗೆ ಮಸ್ಕಿಯಿಂದ ರಮೇಶ್ ವಾಪಸ್ ಆಗಿದ್ದಾನೆ. ಈ ಘಟನೆಗೆ ಸದ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಜಯಲಕ್ಷ್ಮಿ ಅವರ ಕುಟುಂಬದ ಪ್ರಕಾರ ರಮೇಶ್ ಬೇರೆ ಮದುವೆ ಮಾಡಿಕೊಳ್ಳುತ್ತೇನೆಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ.
ವಿಜಯಲಕ್ಷ್ಮಿ ಅವರ ಚಿಕ್ಕಪ್ಪ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.ಮನೆಯಲ್ಲಿ ಸದ್ಯಕ್ಕೆ ಯಾವುದೇ ಡೆತ್‌ನೋಟ್ ಸಿಕ್ಕಿಲ್ಲ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.