ಕೆಜಿಎಫ್,ಡಿ.25- ಕೌಟುಂಬಿಕ ಕಲಹದಿಂದ ಮನನೊಂದ ತಾಯಿ ತನ್ನಿಬ್ಬರು ಕರುಳ ಕುಡಿಗಳನ್ನು ನೇಣು ಹಾಕಿ ಕೊಲೆ ಮಾಡಿ ನಂತರ ತಾನೂ ಆತಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕಿನ ಕಮಸಂದ್ರದ ನಿವಾಸಿ ತಿಪ್ಪಮ ಅಲಿಯಾಸ್
ತ್ರಿವೇಣಿ (38) ಎಂಬುವರೇ 7 ವರ್ಷದ ಹೆಣ್ಣುಮಗು ಹಾಗೂ 4 ವರ್ಷದ ಗಂಡುಮಗುವನ್ನು ನೇಣು ಹಾಕಿ ಸಾಯಿಸಿ ಆತಹತ್ಯೆಗೆ ಶರಣಾದ ತಾಯಿ.
ತಿಪ್ಪಮ-ಮಣಿ 18 ವರ್ಷದ ಹಿಂದೆ ಮದುವೆಯಾಗಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ತಿಪ್ಪಮ ಕೂಲಿ ಕೆಲಸ ಮಾಡುತ್ತಿದ್ದರು. ಪತಿ ಮಣಿ ಸರಿಯಾಗಿ ಕೆಲಸಕ್ಕೆ ಹೋಗದೆ ಕುಡಿದು ಬಂದು ಪತ್ನಿ ಜೊತೆ ವಿನಾಕಾರಣ ಜಗಳವಾಡುತ್ತಿದ್ದನಲ್ಲದೆ, ಕುಟುಂಬ ನಿರ್ವಹಣೆ ಮಾಡುತ್ತಿರಲಿಲ್ಲ.
ಇತ್ತೀಚೆಗೆ ಹಿರಿಯರೆಲ್ಲ ಸೇರಿ ರಾಜಿ ಪಂಚಾಯ್ತಿ ಮಾಡಿ ಮಣಿಗೆ ಬುದ್ದಿವಾದ ಹೇಳಿದ್ದರೂ ಆತ ತನ್ನ ವರ್ತನೆ ಬದಲಿಸಿಕೊಂಡಿರಲಿಲ್ಲ. ಕುಟುಂಬ ನಿರ್ವಹಣೆಗೆ ಹಣವನ್ನೂ ಕೊಡುತ್ತಿರಲಿಲ್ಲ. ಇದರಿಂದ ತಿಪ್ಪಮ ನೊಂದಿದ್ದರು.
ಒಂದು ಕಡೆ ತಾನು ದುಡಿದ ಕೂಲಿ ಹಣ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಮತ್ತೊಂದು ಕಡೆ ಪತಿಯ ಕುಡಿತದ ಚಟದಿಂದ ಮನನೊಂದಿದ್ದ ತಿಪ್ಪಮ ಆತಹತ್ಯೆಗೆ ನಿರ್ಧರಿಸಿದ್ದಾಳೆ.
ನಿನ್ನೆ ಶಾಲೆಯಲ್ಲಿ ವಾರ್ಷಿಕೋತ್ಸವ ಇದ್ದ ಕಾರಣ ಮಕ್ಕಳನ್ನು ಕರೆದುಕೊಂಡು ತಿಪ್ಪಮ ಶಾಲೆಗೆ ಹೋಗಿದ್ದರು.
ಕಾರ್ಯಕ್ರಮ ಮುಗಿಸಿಕೊಂಡು ಬಂದು ರಾತ್ರಿ ಒಂದು ಕೋಣೆಯಲ್ಲಿ ಮಕ್ಕಳು ನಿದ್ರೆಗೆ ಜಾರಿದ್ದಾಗ ನೇಣು ಹಾಕಿ ಇಬ್ಬರನ್ನೂ ಕೊಲೆ ಮಾಡಿ ನಂತರ ಆಕೆಯೂ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ.
ಮತ್ತೊಂದು ಕೊಠಡಿಯಲ್ಲಿ ಮಲಗಿದ್ದ ಮಣಿ ಬೆಳಗ್ಗೆ ಎದ್ದಾಗ ಮಕ್ಕಳು ಹಾಗೂ ಪತ್ನಿ ನೇಣು ಹಾಕಿಕೊಂಡಿರುವುದು ಗಮನಿಸಿ ತಕ್ಷಣ ನೇಣಿನ ಕುಣಿಕೆಯಿಂದ ಬಿಡಿಸಿದರಾದರೂ ಅಷ್ಟರಲ್ಲಿ ಮೂವರ ಪ್ರಾಣಪಕ್ಷಿ ಹಾರಿಹೋಗಿತ್ತು.ಸುದ್ದಿ ತಿಳಿದು ಬೆಮೆಲ್ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ನೆರೆಹೊರೆಯವರಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ.
ಮೂವರ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮಣಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.