ಪುಣೆ, ಅ. 25 (ಪಿಟಿಐ) ತಾಯಿ-ಮಗ ಸೇರಿಕೊಂಡು ತಮ ಸಾಕು ನಾಯಿಯನ್ನು ಮರಕ್ಕೆ ನೇಣು ಬಿಗಿದು ಹತ್ಯೆ ಮಾಡಿರುವ ಪ್ರಕರಣ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ.ನಾಯಿಯನ್ನು ಕೊಲೆ ಮಾಡಿದ ತಾಯಿ ಮಗನನ್ನು ಮುಲ್ಶಿ ತಹಸಿಲ್‌ನ ಪಿರಂಗುಟ್ ಪ್ರದೇಶದ ಪ್ರಭಾವತಿ ಜಗತಾಪ್ ಮತ್ತು ಓಂಕಾರ್ ಜಗತಾಪ್ ಎಂದು ಗುರುತಿಸಲಾಗಿದೆ.
ವಿಷನ್ ಪಾಸಿಬಲ್ ಫೌಂಡೇಷನ್‌ನ ಪ್ರಾಣಿ ಕಾರ್ಯಕರ್ತೆ ಪದಿನಿ ಸ್ಟಂಪ್ ನೀಡಿರುವ ದೂರಿನ ಆಧಾರದ ಮೇಲೆ ಪುಣೆ ಗ್ರಾಮಾಂತರ ಪೊಲೀಸರು ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅ.22 ರಂದು ಪ್ರಭಾವತಿ ಅವರು ತಮ ಮುದ್ದಿನ ಲ್ಯಾಬ್ರಡಾರ್ ನಾಯಿ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ್ದರು. ನಂತರ ಆಕೆಯ ಮಗ ಓಂಕಾರ್ ನಾಯಿಯನ್ನು ಮರಕ್ಕೆ ನೇಣು ಹಾಕಿದ್ದಾನೆ. ಭಾರತೀಯ ನ್ಯಾಯ ಸಂಹಿತೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ನಾವು ಪ್ರಕರಣ ದಾಖಲಿಸಿದ್ದೇವೆ ಎಂದು ಪೌಡ್ ರೋಡ್ ಪೊಲೀಸ್ ಠಾಣೆಯ ಹಿರಿಯ ಇನ್‌್ಸಪೆಕ್ಟರ್ ಸಂತೋಷ ಗಿರಿಗೋಸಾವಿ ತಿಳಿಸಿದ್ದಾರೆ.
ನಾಯಿಯನ್ನು ಕೊಲ್ಲುವ ಮೊದಲು, ಕುಟುಂಬವು ಪಿಂಪ್ರಿಯ ಒಬ್ಬ ಶ್ವಾನ ಪ್ರೇಮಿಗೆ ಕರೆ ಮಾಡಿ ನಾಯಿಯನ್ನು ತೆಗೆದುಕೊಂಡು ಹೋಗುವಂತೆ ಕೇಳಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ನಂತರ, ಅವರು ಮರಕ್ಕೆ ನೇತಾಡುತ್ತಿರುವ ನಾಯಿಯ ಚಿತ್ರವನ್ನು ಕಳುಹಿಸಿದರು. ನಾವು ಅಲ್ಲಿಗೆ ಧಾವಿಸಿ ಅವರ ವಿರುದ್ಧ ಅಪರಾಧವನ್ನು ದಾಖಲಿಸಿದ್ದೇವೆ ಎಂದು ಸ್ಟಂಪ್ ಪಿಟಿಐಗೆ ತಿಳಿಸಿದರು.ನಾಯಿಗೆ ರೇಬಿಸ್ ರೋಗ ಇರಬಹುದು ಎಂಬ ಶಂಕೆಯಿಂದ ಅವರು ಈ ರೀತಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.