Tuesday, October 7, 2025
Homeರಾಜ್ಯಎಸ್‌‍.ಎಲ್‌.ಭೈರಪ್ಪನವರ ನಿವಾಸಕ್ಕೆ ಸಂಸದ ಯದುವೀರ್‌ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

ಎಸ್‌‍.ಎಲ್‌.ಭೈರಪ್ಪನವರ ನಿವಾಸಕ್ಕೆ ಸಂಸದ ಯದುವೀರ್‌ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

MP Yaduveer visits S.L. Bhairappa's residence

ಮೈಸೂರು,ಅ.7- ಇತ್ತೀಚೆಗೆ ನಿಧನರಾದ ಸಾರಸ್ವತ ಲೋಕದ ಧ್ರುವತಾರೆ ಡಾ. ಎಸ್‌‍.ಎಲ್‌ ಭೈರಪ್ಪನವರ ನಿವಾಸಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಕುವೆಂಪು ನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ ಯದುವೀರ್‌, ಭೈರಪ್ಪ ಅವರ ಪತ್ನಿ ಸರಸ್ವತಮ ಹಾಗೂ ಪುತ್ರ ರವಿಶಂಕರ್‌ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿ, ಸಾಂತ್ವನ ಹೇಳಿದರು.ದಸರಾ ಹಾಗೂ ಕೆಲವು ಧಾರ್ಮಿಕ ವಿಧಿ-ವಿಧಾನಗಳು ನಡೆಯುತ್ತಿದ್ದ ಕಾರಣ ಸಾಹಿತ್ಯ ರತ್ನ ಡಾ. ಎಸ್‌‍.ಎಲ್‌. ಭೈರಪ್ಪ ಅವರ ನಿವಾಸಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಈಗ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದ್ದೇವೆ ಎಂದು ಯದುವೀರ್‌ ಹೇಳಿದ್ದಾರೆ.

ಕರ್ನಾಟಕಕ್ಕೆ ಮತ್ತು ವಿಶೇಷವಾಗಿ ಮೈಸೂರು ಭಾಗಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಿಸಿಕೊಟ್ಟಿರುವ ಎಸ್‌‍.ಎಲ್‌. ಭೈರಪ್ಪನವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದೇನೆ ಎಂದು ಯದುವೀರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೈಸೂರಿನ ನಗರ ಕೇಂದ್ರ ಗ್ರಂಥಾಲಯಕ್ಕೆ ಡಾ. ಎಸ್‌‍.ಎಲ್‌. ಭೈರಪ್ಪ ಅವರ ಹೆಸರು ಮರು ನಾಮಕರಣ ಮಾಡಲು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದರು.
ಗ್ರಂಥಾಲಯದ ಆವರಣದಲ್ಲಿ ಭೈರಪ್ಪನವರ ಜೀವನ ಚರಿತ್ರೆ, ಸಾಹಿತ್ಯ ಕೃತಿಗಳನ್ನು ಪ್ರತಿಬಿಂಬಿಸುವ ಶಾಶ್ವತ ಸಾರಕವನ್ನು ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿನಂತಿಸಿದ್ದೇವೆ ಎಂದು ಭೈರಪ್ಪನವರ ಪತ್ನಿ ಹಾಗೂ ಪುತ್ರರಿಗೆ ಮಾಹಿತಿ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಎಸ್‌‍.ಎಲ್‌. ಭೈರಪ್ಪ ಅವರ ಅಗಲಿಕೆ ಇಡೀ ನಾಡಿಗೆ ತೀವ್ರ ನೋವುಂಟು ಮಾಡಿದೆ. ಅವರು ನಮನ್ನು ಭೌತಿಕವಾಗಿ ಅಗಲಿದ್ದರೂ ಅವರ ಅಕ್ಷರಗಳ ಮೂಲಕ ಅಮರರಾಗಿದ್ದಾರೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದ್ದಾರೆ.

RELATED ARTICLES

Latest News