ಬೆಂಗಳೂರು, ಫೆ.25- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಪರಿಹಾರ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಅವರ ಸೋದರ ಮಲ್ಲಿಕಾರ್ಜುನ ಮತ್ತು ಜಮೀನು ಮಾಲೀಕ ದೇವರಾಜು ವಿರುದ್ಧ ದಾಖಲಾದ ಪ್ರಕರಣವನ್ನು ವೈಯಕ್ತಿಕವಾಗಿ ವಾದಿಸಲು (ವಕೀಲರ ಸಹಾಯವಿಲ್ಲದೆ) ದೂರುದಾರ ಸ್ನೇಹಮಯಿ ಕೃಷ್ಣ ಸಿದ್ಧತೆ ನಡೆಸಿದ್ದಾರೆ.
ಮುಡಾ 50:50 ಹಗರಣ ವಿಚಾರವಾಗಿ ಇದೀಗ ಸ್ನೇಹಮಯಿ ಕೃಷ್ಣ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾದ ಮಂಡಿಸಲು ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ. ತನಿಖೆಯ ಬಗ್ಗೆ ಅಗತ್ಯ ದಾಖಲೆಗಳನ್ನು ಮತ್ತು ಅಂತಿಮ ವರದಿಯನ್ನು ಮಾರ್ಚ್ 1, 2025 ರೊಳಗೆ ಕೃಷ್ಣ ಅವರಿಗೆ ಸಲ್ಲಿಸುವಂತೆ ನ್ಯಾಯಾಲಯ ಸೋಮವಾರ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದೆ.
ಕೃಷ್ಣ ಮತ್ತು ಲೋಕಾಯುಕ್ತ ಪೊಲೀಸರನ್ನು ಪ್ರತಿನಿಧಿಸುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟೇಶ್ ಅರಬಟ್ಟಿ ಅವರ ವಾದ ಆಲಿಸಿದ ನಂತರ ಹಾಲಿ ಮತ್ತು ಮಾಜಿ ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಆದೇಶವನ್ನು ಹೊರಡಿಸಿ, ಕೃಷ್ಣ ಅವರ ಸಲ್ಲಿಕೆಗಾಗಿ ವಿಚಾರಣೆಯನ್ನು ಮಾರ್ಚ್ 7 ಕ್ಕೆ ಮುಂದೂಡಿದರು.
ಈ ಹಿಂದೆ, ಕೃಷ್ಣ ಅವರು ವೈಯಕ್ತಿಕವಾಗಿ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡಬಹುದು ಎಂದು ಸಲ್ಲಿಸಿದರು. ಸಿಆರ್‌ಪಿಸಿಯ ಸೆಕ್ಷನ್ 173 ರ ಅಡಿಯಲ್ಲಿ ಅವರು ಅರ್ಜಿ ಸಲ್ಲಿಸಿದ್ದು, ಪ್ರಕರಣವನ್ನು ವಿಚಾರಣೆಗೆ ಒಳಪಡಿಸಲು ಅಂತಿಮ ವರದಿಯ ಪ್ರತಿಯನ್ನು ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.ನ್ಯಾಯಾಲಯವು ಮೆಮೋ ಮತ್ತು ಅರ್ಜಿ ಎರಡಕ್ಕೂ ಅನುಮತಿ ನೀಡಿತು ಮತ್ತು ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಸಂಪೂರ್ಣ ಅಂತಿಮ ವರದಿಯ ಪ್ರತಿಯನ್ನು ಅವರ ಸಲ್ಲಿಕೆಗಳಿಗಾಗಿ ಸಲ್ಲಿಸುವಂತೆ ರಿಜಿಸ್ಟ್ರಾರ್‌ಗೆ ನಿರ್ದೇಶನ ನೀಡಿತು.
ನಂತರ, ಎಸ್ ಪಿಪಿ ಪರವಾಗಿ, ತನಿಖಾ ಸಂಸ್ಥೆ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಒಂದು ವಾರದೊಳಗೆ ಮೈಸೂರಿನ ತನಿಖಾಧಿಕಾರಿಗಳ ಕಚೇರಿಯಲ್ಲಿ ದೂರುದಾರರಿಗೆ ಸಲ್ಲಿಸಲಿದೆ ಎಂದು ಮೆಮೋ ಸಲ್ಲಿಸಲಾಯಿತು. ದೂರುದಾರರು ಸಹ ಒಪ್ಪಿಕೊಂಡರು ಮತ್ತು ಮಾರ್ಚ್ 1 ರಂದು ಅಥವಾ ಅದಕ್ಕೂ ಮೊದಲು ದಾಖಲೆಗಳನ್ನು ಒದಗಿಸಬಹುದು ಎಂದು ವಿನಂತಿಸಿದರು.
ಲೋಕಾಯುಕ್ತ ಪೊಲೀಸರು ಇತ್ತೀಚೆಗೆ ನ್ಯಾಯಾಲಯಕ್ಕೆ ಬಿ ರಿಪೋರ್ಟ್ (ಮುಕ್ತಾಯ) ಸಲ್ಲಿಸಿದ್ದರು. ಈ ನಡೆ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ತನಿಖಾ ಸಂಸ್ಥೆ ಪ್ರಭಾವಕ್ಕೆ ಒಳಗಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಆರೋಪಿಸಿದ್ದರು. ಈ ಸಲುವಾಗಿಯೇ ಇದೀಗ ತಾವೇ ಖುದ್ದು ಕೋರ್ಟ್ ನಲ್ಲಿ ಪ್ರಕರಣದ ಬಗ್ಗೆ ವಾದಿಸಲಿದ್ದಾರೆ. ಇದಕ್ಕೆ ಈಗ ಕೋರ್ಟ್ ಸಹ ಅನುಮತಿ ನೀಡಿದೆ.
ಮುಡಾ ಹಗರಣ ವಿಚಾರವಾಗಿ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಸಾಕ್ಷ್ಯಾಧಾರಗಳ ಕೊರತೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದರು. ಲೋಕಾಯುಕ್ತ ಎಸ್ಪಿ ಉದೇಶ್ ಅವರು ಸ್ನೇಹಮಯಿ ಕೃಷ್ಣ ಅವರಿಗೆ ನೋಟಿಸ್‌ನಲ್ಲಿ.
ನೀವು ನೀಡಿದ ದೂರು ಸಂಬಂಧ 1 ನೇ ಆರೋಪಿಯಿಂದ 4ನೇ ಆರೋಪಿವರೆಗೆ ವಿಚಾರಣೆ ನಡೆಸಲಾಗಿದೆ. ಇದು ಸಿವಿಲ್ ಸ್ವರೂಪ್ಪದ್ದಾಗಿದೆ. ಹಾಗೆಯೇ ಈ ಪ್ರಕರಣ ತನಿಖೆ ನಡೆಸಲು ತಕ್ಕುದಲ್ಲ. ಅಲ್ಲದೆ ದೂರಿನಲ್ಲಿ ವಜಾ ಮಾಡಿದ ಪ್ರಕರಣಗಳು ಸಹ ಇದೆ. ಜೊತೆಗೆ ಸಾಕಷ್ಟು ಸಾಕ್ಷ್ಯಾಧಾರಗಳ ಕೊರೆತೆ ಇದೆ.
ಎಲ್ಲಾ ಆರೋಪಿಗಳ ಆರೋಪಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪ ಸಾಬೀತಾಗಿಲ್ಲ. ಹಾಗೆಯೇ ಈ ವರದಿಯನ್ನು ವಿರೋಧಿಸುವುದಿದ್ದರೆ, ತಾವು ಈ ನೋಟಿಸ್ ತಲುಪಿದ ಒಂದು ವಾರದೊಳಗಾಗಿ ಮ್ಯಾಜಿಸ್ಟ್ರೇಟರ ಎದುರು ಆ ಬಗ್ಗೆ ವಿರೋಧಿಸಬಹುದಾಗಿದೆ ಎಂದು ತಿಳಿಸಿದ್ದರು.ಲೋಕಾಯುಕ್ತ ಪೊಲೀಸರು ಆತ್ಮಸಾಕ್ಷಿ ಮಾರಿಕೊಂಡಿದ್ದಾರೆ.
ನಾನು ಸಾಕಷ್ಟು ಸಾಕ್ಷಿಗಳನ್ನ ಕೊಟ್ಟಿದ್ದೇನೆ ಕೋರ್ಟ್ ನಲ್ಲಿ ಪ್ರಶ್ನಿಸಿ ಎಂದು ಹೇಳಿದ್ದೇನೆ. ರಾಜ್ಯದ ಜನರಿಗೆ ಅಧಿಕಾರಿಗಳು ವಂಚಿಸುತ್ತಿದ್ದಾರೆ. ರಾಜ್ಯದ ಜನತೆ ಮುಂದೆ ಸತ್ಯ ಸಾಭೀತು ಮಾಡುವೆ. ಸಿಎಂಗೆ ಶಿಕ್ಷೆ ಕೊಡಿಸುವೆ ಎಂದು ಶಪಥ ಮಾಡಿದ್ದರು. 50:50ರ ಅನುಪಾತದಡಿ ಮುಡಾ ನಿವೇಶನಗಳ ಹಂಚಿಕೆಯ ಲಲ್ಲಿ ಅಕ್ರಮವಾಗಿದ್ದು, ತನಿಖೆ ನಡೆಸಬೇಕೆಂದು ಕೋರಿ ಸ್ನೇಹಮಯಿ ಕೃಷ್ಣ ಮತ್ತಿತರರು ಜನಪ್ರತಿನಿಧಿಗಳ ನ್ಯಾಯಾಲಯದ ಮೆಟ್ಟಿಲೇರಿದ್ದರು. ಎಫ್‌ಐಆರ್ ದಾಖಲಿಸಿ, 90 ದಿನಗಳೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ನ್ಯಾಯಾಲಯವು 2024ರ ಸೆಪ್ಟೆಂಬರ್‌ನಲ್ಲಿ ಆದೇಶಿಸಿತ್ತು. ನಂತರ ನ್ಯಾಯಾಲಯವು ತನಿಖೆಗೆ ನೀಡಿದ್ದ ಗಡುವನ್ನು ಜ.27ರವರೆಗೆ ವಿಸ್ತರಿಸಿತ್ತು.
ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಆರೋಪಿಯಾಗಿದ್ದು, ಅವರ ಪತ್ನಿ ಬಿ.ಎಂ.ಪಾರ್ವತಿ ಎರಡನೇ, ಬಾಮೈದ ಬಿ.ಎಂ.ಮಲ್ಲಿಕಾರ್ಜುನಸ್ವಾಮಿ ಮೂರನೇ ಹಾಗೂ ಜಮೀನಿನ ಮಾಲೀಕ ಜೆ.ದೇವರಾಜು ನಾಲ್ಕನೇ ಆರೋಪಿಯಾಗಿದ್ದಾರೆ. ಪ್ರಕರಣ ಸಂಬಂಧ ಮುಡಾದ ಹಾಲಿ-ಮಾಜಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿಚಾರಣೆ ನಡೆಸಲಾಗಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರೆ ಆರೋಪಿಗಳಿಗೆ ತನಿಖಾ ವರದಿಯಲ್ಲಿ ಕ್ಲೀನ್ ಚಿಟ್ ನೀಡಿದ್ದು ಈ ಸಂಬಂಧ ದೂರುದಾರ ಸ್ನೇಹಮಯಿ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದರು. ಸಾಕ್ಷಾಧಾರಗಳ ಕೊರತೆಯಿಂದ ಬಿ ರಿಪೋರ್ಟ್ ಸಲ್ಲಿಸುವುದಾಗಿ ಲೋಕಾಯುಕ್ತ ಪೊಲೀಸರು ಹೇಳಿದ್ದು, ಇದನ್ನ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದೆಂದು ಹೇಳಿದ್ದಾರೆ.
ತನಿಖೆ ಇನ್ನೂ ಬಾಕಿಯಿರುವಾಗಲೇ ಬಿ ರಿಪೋರ್ಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಇನ್ನು ತನಿಖೆ ಮುಕ್ತಾಯಗೊಳಿಸದೇ ಮಧ್ಯಂತರ ವರದಿ ಸಲ್ಲಿಸಲು ಮುಂದಾಗಿದ್ದಾರೆ. ಲೋಕಾಯುಕ್ತ ಪೊಲೀಸರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.