Sunday, April 20, 2025
Homeರಾಜಕೀಯ | Politicsಮುಡಾ ಪ್ರಕರಣ ರಾಜಕೀಯ ಪ್ರೇರಿತ, ಸಿದ್ದರಾಮಯ್ಯನವರ ವಿರುದ್ಧ ಷಡ್ಯಂತ್ರ ನಡೆಸಲಾಗಿತ್ತು : ಡಿಕೆಶಿ

ಮುಡಾ ಪ್ರಕರಣ ರಾಜಕೀಯ ಪ್ರೇರಿತ, ಸಿದ್ದರಾಮಯ್ಯನವರ ವಿರುದ್ಧ ಷಡ್ಯಂತ್ರ ನಡೆಸಲಾಗಿತ್ತು : ಡಿಕೆಶಿ

Muda case politically motivated, conspiracy against Siddaramaiah: DK Shivakumar

ಬೆಂಗಳೂರು, ಫೆ.20- ಮುಡಾ ಪ್ರಕರಣ ರಾಜಕೀಯ ಪ್ರೇರಿತ. ಆಸ್ತಿಗೆ ಪ್ರತಿಯಾಗಿ ಪರಿಹಾರ ಕೇಳಿದ್ದನ್ನು ಅಪರಾಧ ಎಂಬಂತೆ ಬಿಂಬಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸಲಾಯಿತು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಪ್ರಕರಣದಲ್ಲಿ ಬಿಜೆಪಿ ದೆಹಲಿಯಿಂದ ವಕೀಲರನ್ನು ಕರೆಸಿ ವಾದ ಮಂಡಿಸಿದ್ದು ನಮಗೆ ಗೊತ್ತಿದೆ. ಇದರ ಹಿಂದೆ ಯಾವ ರೀತಿಯ ರಾಜಕೀಯ ಇದೆ ಎಂದು ನಮಗೆಲ್ಲಾ ಅರ್ಥವಾಗಿದೆ ಎಂದರು.

ಲೋಕಾಯುಕ್ತ ತನಿಖೆ ಮುಖ್ಯಮಂತ್ರಿ ಅಥವಾ ಇನ್ಯಾರದೋ ಅಣತಿಯಂತೆ ನಡೆದಿಲ್ಲ. ನ್ಯಾಯಾಲಯದ ಉಸ್ತುವಾರಿಯಲ್ಲಿ ವಿಚಾರಣೆಯಾಗಿದೆ. ಮೇಲಾಗಿ ಲೋಕಾಯುಕ್ತ ಚುನಾವಣಾ ಆಯೋಗದಂತೆ ಸಂಪೂರ್ಣ ಸ್ವಾಯತ್ತ ಸಂಸ್ಥೆ. ಅಲ್ಲಿ ಮುಖ್ಯಮಂತ್ರಿಯವರ ಹಸ್ತಕ್ಷೇಪ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಡಾ ಪ್ರಕರಣ ಕುರಿತು ತಾವು ಆರಂಭದಲ್ಲೇ ಹೇಳಿಕೆ ನೀಡಿದ್ದು, ಇದರಲ್ಲಿ ಯಾವುದೇ ಸಾಕ್ಷ್ಯಗಳಿಲ್ಲ. ಮುಖ್ಯಮಂತ್ರಿಯವರು ಸಹಿ ಮಾಡಿರುವ ಯಾವುದೇ ಕಾಗದಪತ್ರಗಳಿಲ್ಲ ಎಂದು ದಿಢೀರ್ ಬಿಜೆಪಿಯ ಪಾದಯಾತ್ರೆಯ ವೇಳೆ ನಾನು ಹೇಳಿಕೆ ನೀಡಿದ್ದೆ. ಮುಡಾ ಪ್ರಕರಣ ಬಿಜೆಪಿ ಹಾಗೂ ಜೆಡಿಎಸ್ ಕುತಂತ್ರ. ಇದು ಹೆಚ್ಚಿನ ದಿನ ನಡೆಯುವುದಿಲ್ಲ ಎಂದು ತಿಳಿಸಿದರು.

ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದೆ ಎಂದು ಕೇಳಿದಾಗ, ಈ ಪ್ರಕರಣದ ಪ್ರಾರಂಭದಲ್ಲೇ ನಾನು ಹೇಳಿದ್ದೆ. ಬಿಜೆಪಿ ಹಾಗೂ ಜೆಡಿಎಸ್‌ನವರು ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಮಾಡಿದಾಗಲೇ, ನಾನು ಏನು ಹೇಳಬೇಕೋ ಹೇಳಿದ್ದೆ. ಇದು ರಾಜಕೀಯ ಪ್ರೇರಿತ ಆರೋಪ, ಯಾವ ದಾಖಲೆಯಲ್ಲೂ ಸಿದ್ದರಾಮಯ್ಯ ಅವರ ಸಹಿ ಇಲ್ಲದಿರುವಾಗ, ಸಂಬಂಧವೇ ಇಲ್ಲದಿರುವಾಗ ಅವರ ಪಾತ್ರ ಹೇಗೆ ಬರುತ್ತದೆ. ಆಸ್ತಿ ಕಳೆದುಕೊಂಡವರು ಪರಿಹಾರ ಕೇಳುವುದು ಸಹಜ.

ನಾವು ನೀವು ಕೂಡ ಕೇಳುತ್ತೇವೆ. ಅವರು ಕೊಟ್ಟಿದ್ದಾರೆ. ನಮಗೆ ಇಂತಹುದೇ ಜಾಗದಲ್ಲಿ ನಿವೇಶನ ನೀಡಿ ಎಂದು ಅವರು ಎಲ್ಲಿಯೂ ಕೇಳಿಲ್ಲ. ಆದರೂ ಅನಗತ್ಯ ಗೊಂದಲ ಬೇಡ ಎಂದು ಅವರು ಈ ನಿವೇಶನಗಳನ್ನು ವಾಪಸ್ ನೀಡಿದ್ದಾರೆ. ಯಾವುದೇ ಪ್ರಕರಣ ದಾಖಲಿಸುವಾಗ ಅದಕ್ಕೆ ಪೂರಕವಾದ ದಾಖಲೆ ಬೇಕು. ಲೋಕಾಯುಕ್ತ ಸಂಸ್ಥೆ ತನ್ನ ಕರ್ತವ್ಯ ಮಾಡಿದೆ. ಬಿಜೆಪಿಯವರು ತಮ್ಮ ಹೋರಾಟ ಮಾಡಿಕೊಳ್ಳಲಿ. ದೆಹಲಿಯಿಂದ ವಕೀಲರನ್ನು ಕರೆಸಿ ವಾದ ಮಂಡಿಸಲು ನಮಗೆ ಗೊತ್ತಿಲ್ಲವೇ? ಇದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕುತಂತ್ರ. ಇದು ಹೆಚ್ಚು ದಿನ ನಡೆಯುವುದಿಲ್ಲ ಎಂದರು.

ಲೋಕಾಯುಕ್ತ ಸಂಸ್ಥೆ ಸರ್ಕಾರದ ತಾಳಕ್ಕೆ ಕುಣಿದಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ಸುಪ್ರೀಂ ಕೋರ್ಟ್ ತೀರ್ಪು ಏನಿದೆ ಗೊತ್ತಿದೆಯೇ? ಸ್ಥಳೀಯ ಮಟ್ಟದ ಯಾವುದೇ ಸಂಸ್ಥೆಗಳನ್ನು ದುರ್ಬಲಗೊಳಿಸಬಾರದು ಎಂಬ ನಿರ್ದೇಶನವಿದೆ. ಇನ್ನು ಹೈಕೋರ್ಟ್ ಕೂಡ ಲೋಕಾಯುಕ್ತ ಸ್ವಾಯತ್ತ ಸಂಸ್ಥೆ ಎಂದು ಹೇಳಿದೆ.

ಅವರವರು ಅವರ ಕೆಲಸ ಮಾಡುತ್ತಿದ್ದಾರೆ. ಯಾರೇ ಸಿಎಂ ಆಗಿರಲಿ, ಬೊಮ್ಮಾಯಿ ಸಿಎಂ ಆಗಿರಲಿ, ಮುಖ್ಯಮಂತ್ರಿ ಹೇಳಿದಂತೆ ಲೋಕಾಯುಕ್ತ ಪೊಲೀಸರು ಕೇಳುತ್ತಾರಾ? ಇಲ್ಲಿ ಮುಖ್ಯಮಂತ್ರಿ ಹಸ್ತಕ್ಷೇಪವಿಲ್ಲ. ಇಲ್ಲಿ ಯಾವುದೇ ಅಧಿಕಾರಿ ನೇಮಿಸಬೇಕಾದರೂ ಲೋಕಾಯುಕ್ತರ ಅನುಮತಿ ಮೇರೆಗೆ ಕೆಲಸ ಮಾಡಲಾಗುವುದು.

ಇಲ್ಲಿ ಕರ್ನಾಟಕದ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುವುದೇ ಹೊರತು, ಹೊರ ರಾಜ್ಯದವರನ್ನು ಆಯ್ಕೆ ಮಾಡಲು ಬರುವುದಿಲ್ಲ ಎಂದು ತಿಳಿಸಿದರು. ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎಂಬ ವಿಜಯೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಅವರಿಗೆ ಬೇರೆ ಸಮಯದಲ್ಲಿ ಉತ್ತರ ನೀಡುತ್ತೇನೆ ಎಂದರು.

RELATED ARTICLES

Latest News