Saturday, January 18, 2025
Homeರಾಜ್ಯಮುಡಾ ಅಕ್ರಮ : ಸಿಎಂಗೆ ಇ.ಡಿ. ನೋಟೀಸ್..!

ಮುಡಾ ಅಕ್ರಮ : ಸಿಎಂಗೆ ಇ.ಡಿ. ನೋಟೀಸ್..!

MUDA illegality: ED notice to CM!

ಬೆಂಗಳೂರು,ಜ.18- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಕ್ರಮ ನಿವೇಶನ ಹಂಚಿಕೆ ಸಂಬಂಧ ಜಾರಿನಿರ್ದೇಶನಾಲಯ(ಇಡಿ) 300 ಕೋಟಿ ರೂ. ಮೌಲ್ಯದ 142 ನಿವೇಶನಗಳನ್ನು ಜಪ್ತಿ ಮಾಡಿದ ಬೆನ್ನಲ್ಲೇ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬಕ್ಕೆ ನೋಟಿಸ್ ನೀಡಲು ಮುಂದಾಗಿದೆ.

ಯಾವುದೇ ಸಂದರ್ಭದಲ್ಲೂ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದುನ ಮಲ್ಲಿಕಾರ್ಜುನಯ್ಯ ಹಾಗೂ ಜಮೀನು ಮಾಲೀಕ ದೇವರಾಜ್ ಅವರಿಗೆ ತನಿಖಾಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ತೀರ್ಮಾನಿಸಿದೆ.

ಪ್ರಕರಣದಲ್ಲಿ ಸಿದ್ದರಾಮಯ್ಯನವರು ತಮ ಪ್ರಭಾವ ಬಳಸಿಯೇ ಮುಡಾದಿಂದ
ಕಾನೂನು ಬಾಹಿರವಾಗಿ ತಮ ಪತ್ನಿ ಪಾರ್ವತಿಯವರಿಗೆ ಮೈಸೂರಿನ ವಿಜಯನಗರ ಸೇರಿದಂತೆ ಮತ್ತಿತರ ಕಡೆ ನಿವೇಶನಗಳನ್ನು ಮಂಜೂರು ಮಾಡಿಸಿದ್ದರು ಎಂಬುದನ್ನು ಇ.ಡಿ ಪತ್ತೆಹಚ್ಚಿದೆ.

ಈಗಾಗಲೇ ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಮತ್ತು ಜಮೀನು ಮಾಲೀಕ ದೇವರಾಜ್ ಅವರನ್ನು ಇಡಿ ಒಂದು ಬಾರಿ ವಿಚಾರಣೆ ನಡೆಸಿತ್ತು. ಆದರೆ ಅವರಿಂದ ಸಮರ್ಪಕ ಉತ್ತರ ಬಾರದಿರುವ ಕಾರಣ ಮತ್ತೊಮೆ ನಾಲ್ವರಿಗೆ ನೋಟಿಸ್ ನೀಡಲು ಸಜ್ಜಾಗಿದೆ.

ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮತ್ತು ಕುಟುಂಬದವರು ಲೋಕಾಯುಕ್ತ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇದರ ಬೆನ್ನಲ್ಲೇ ಇಡಿಯಿಂದಲೂ ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಖಚಿತಪಡಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರು 14 ಮುಡಾ ನಿವೇಶನಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಿಂತಿರುಗಿಸುವುದಾಗಿ ಹೇಳಿಕೊಂಡಿದ್ದರೂ ತನಿಖೆಗೆ ಯಾವುದೇ ಅಡ್ಡಿ ಆತಂಕಗಳು ಎದುರಾಗುವುದಿಲ್ಲ ಎನ್ನುತ್ತಾರೆ ಕಾನೂನು ತಜ್ಞರು.

ನಾವು ನಿವೇಶನಗಳನ್ನು ಹಿಂತಿರುಗಿಸುವುದಾಗಿ ಮುಡಾಗೆ ಅಧಿಕೃತ ಪತ್ರ ಬರೆದಿದ್ದೇವೆ ಎಂದು ಆಯುಕ್ತರಿಗೆ ಪತ್ರ ಬರೆದಿದ್ದರೂ ಈಗಾಗಲೇ ಹೈಕೋರ್ಟ್ ಏಕಸದಸ್ಯ ಪೀಠ ಮೇಲ್ನೋಟಕ್ಕೆ ನಿಯಮ ಉಲ್ಲಂಘನೆಯಾಗಿರುವುದು ಕಂಡುಬಂದಿರುವುದರಿಂದ ತನಿಖೆ ಅಗತ್ಯವಿದೆ ಎಂದು ಆದೇಶದಲ್ಲಿ ಹೇಳಿತ್ತು.

ಇತ್ತ ಜನಪ್ರತಿನಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತ ತನಿಖೆಗೆ ಎಫ್ಐಆರ್ ದಾಖಲಿಸಿ 3 ತಿಂಗಳೊಳಗೆ ವರದಿ ನೀಡುವಂತೆ ಸೂಚಿಸಿತ್ತು. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ(ಇಡಿ) ಬೇನಾಮಿ ವಹಿವಾಟು ಪ್ರಕರಣ ಸಂಬಂಧ ಇಸಿಐಆರ್ ದಾಖಲಿಸಿಕೊಂಡಿತ್ತು.

ಇದೀಗ ಇದೇ ತಿಂಗಳ 26ರಂದು ಲೋಕಾಯುಕ್ತ ತನಿಖಾಧಿಕಾರಿಗಳು ಎಡಿಜಿಪಿಯವರಿಗೆ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಸಲ್ಲಿಸಬೇಕು. ಬಳಿಕ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿಗೆ ಎಡಿಜಿಪಿ ಸಲ್ಲಿಕೆ ಮಾಡಬೇಕು.
ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ಅರ್ಜಿದಾರ ಸ್ನೇಹಮಯಿ ಕೃಷ್ಣ ಅವರು ಮೇಲನವಿ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಹಲವು ಬಾರಿ ಎರಡು ಕಡೆ ವಾದ ಪ್ರತಿವಾದ ನಡೆದು ಪುನಃ ಅರ್ಜಿ ವಿಚಾರಣೆಯು ಇದೇ 28ಕ್ಕೆ ಬರಲಿದೆ.

ಕಾನೂನು ಪ್ರಕ್ರಿಯೆ ಈಗಾಗಲೇ ಸಾಕಷ್ಟು ದೂರ ಸಾಗಿರುವುದರಿಂದ ಇಂಥ ಸಂದರ್ಭದಲ್ಲಿ ಅರ್ಜಿದಾರರು ತಮ ಪ್ರಕರಣವನ್ನು ಕೈಬಿಡುವಂತೆ ಮನವಿ ಮಾಡಿದರೂ ಊರ್ಜಿತವಾಗುವ ಸಾಧ್ಯತೆಗಳು ಕಡಿಮೆ ಎನ್ನುತ್ತಾರೆ ಕಾನೂನು ತಜ್ಞರು.
ಏಕೆಂದರೆ ಕಾನೂನಿನ ದೃಷ್ಟಿಯಲ್ಲಿ ತಪ್ಪು ಮಾಡಿದವನಿಗೆ ಶಿಕ್ಷೆಯಾಗಬೇಕು. ಇಲ್ಲಿ ನಿವೇಶನಗಳನ್ನು ಹಿಂತಿರುಗಿಸಿದ ತಕ್ಷಣ ಪ್ರಕರಣದಿಂದ ಆರೋಪಿ ಸ್ಥಾನದಲ್ಲಿರುವವರು ಮುಕ್ತರಾಗುವುದಿಲ್ಲ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುವ ಮೊದಲೇ ಸ್ಥಳೀಯ ಮಟ್ಟದಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕಿತ್ತು.

ಈಗ ತನಿಖೆ ಪ್ರಾರಂಭವಾಗಿರುವುದರಿಂದ ನ್ಯಾಯಾಲಯ ಇಂಥ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡುವುದು ತೀರ ಕಡಿಮೆ ಎನ್ನಲಾಗುತ್ತಿದೆ. ಪ್ರಕರಣದಲ್ಲಿ ಸಿದ್ದರಾಮಯ್ಯನವರೇ ಎ1 ಆರೋಪಿಯಾಗಿರುವುದರಿಂದ ಇಡಿ ಯಾವುದೇ ಸಂದರ್ಭದಲ್ಲಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಡಬಹುದು.

ಒಂದು ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡಾಗ ನ್ಯಾಯಾಲಯವು ಮಧ್ಯಪ್ರವೇಶ ಮಾಡಲು ಅವಕಾಶ ಇರುವುದಿಲ್ಲ. ಹಾಗೊಂದು ವೇಳೆ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿದರೆ ದೂರುದಾರರು ಸುಪ್ರೀಂಕೋರ್ಟ್ಗೆ ಹೋಗುವ ಸಾಧ್ಯತೆ ಇದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.

ಪ್ರಕರಣದಲ್ಲಿ ಅಕ್ರಮ ಹಣದ ವಹಿವಾಟು ನಡೆದಿದೆ ಎಂದು ಇ.ಡಿ ಶಂಕಿಸಿರುವ ಕಾರಣ ನ್ಯಾಯಾಲಯ ಪ್ರಕರಣವನ್ನು ರದ್ದುಪಡಿಸುವ ಸಾಧ್ಯತೆ ತೀರಾ ಕಡಿಮೆ.ಇದಕ್ಕೂ ಮುನ್ನ ಇಡಿ ಬೆಂಗಳೂರು ವಲಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿತ್ತು. ಕಳೆದ ವಾರಾಂತ್ಯದಲ್ಲಿ ಕರ್ನಾಟಕ ಲೋಕಾಯುಕ್ತದ ಮೈಸೂರು ಘಟಕವು ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ ಮತ್ತು ಮಾಜಿ ಭೂ ಮಾಲೀಕ ದೇವರಾಜ್ ವಿರುದ್ಧ ದಾಖಲಿಸಿದ ಎಫ್ ಐಆರ್ ಆಧರಿಸಿ ಇಸಿಐಆರ್ ದಾಖಲಿಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.

ಭೂಮಾಲೀಕ ದೇವರಾಜು ಇವರಿಂದ ಸ್ವಾಮಿ ಜಮೀನು ಖರೀದಿಸಿ ಪಾರ್ವತಿಗೆ ಉಡುಗೊರೆಯಾಗಿ ನೀಡಿದ್ದರು. 2021ರಲ್ಲಿ ಮೈಸೂರು ನಗರ ವ್ಯಾಪ್ತಿಯ ಡೌನಾರ್ಕೆಟ್ ಕೆಸರೆ ಪ್ರದೇಶದಲ್ಲಿ ಲೇಔಟ್ ರಚಿಸಲು 3 ಎಕರೆ 16 ಗುಂಟೆ ಜಾಗಕ್ಕೆ ಬದಲಾಗಿ 14 ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರ, ವಂಚನೆ ಮತ್ತು ಫೋರ್ಜರಿ ಆರೋಪದ ಮೇಲೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು.

RELATED ARTICLES

Latest News