ಮೈಸೂರು,ಜ.31- ಮುಡಾ ಪ್ರಕರಣದಲ್ಲಿ ಮನಿ ಲ್ಯಾಂಡ್ರಿಂಗ್ ಆಗಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ತಿಳಿಸಿದೆ. ಹಾಗಿದ್ದರೂ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವುದು ರಾಜಕೀಯ ಪ್ರೇರಿತ ಹಾಗೂ ದುರುದ್ದೇಶಪೂರಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯ ಮುಡಾ ಪ್ರಕರಣದಲ್ಲಿ ನಿವೇಶನ ಜಪ್ತಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಅಲ್ಲಿ ಮನಿ ಲ್ಯಾಂಡ್ರಿಂಗ್ ಆಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದರು.
ಜಾರಿ ನಿರ್ದೇಶನಾಲಯದ ನೋಟಿಸ್ ಅನ್ನು ಪ್ರಶ್ನಿಸಿ ಮುಡಾದ ಹಿಂದಿನ ಆಯುಕ್ತ ನಟೇಶ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ ನಂತರ ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣೆಗೆ ಕರೆದಿರುವುದೇ ತಪ್ಪು, ಮನಿ ಲ್ಯಾಂಡ್ರಿಂಗ್ ಬರುವುದಿಲ್ಲ ಎಂದು ಹೇಳಿದೆ. ಇದು ಅನ್ವಯವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಜಾರಿ ನಿರ್ದೇಶನಾಲಯ ಉದ್ದೇಶಪೂರಕವಾಗಿ ರಾಜಕೀಯ ಮಾಡುತ್ತಿದೆ. ಲೋಕಾಯುಕ್ತ ಪೊಲೀಸರು ಮುಡಾ ಹಗರಣವನ್ನು ತನಿಖೆ ನಡೆಸುತ್ತಿದ್ದಾರೆ. ದೂರುದಾರರಾದ ಸ್ನೇಹಮಯಿ ಕೃಷ್ಣ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದಾಗ ಲೋಕಾಯುಕ್ತದಿಂದ ತನಿಖೆ ಮಾಡಿಸಿ ಎಂದು ಹೇಳಿದರು. ಅದರ ಪ್ರಕಾರ ತನಿಖೆ ನಡೆಯುತ್ತಿದೆ. ಈಗ ಜಾರಿ ನಿರ್ದೇಶನಾಲಯ ಮಧ್ಯಪ್ರವೇಶ ಮಾಡಿದೆ. ವಿಚಾರಣಾ ಮಾಹಿತಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ ತಮ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ನಡೆಸುತ್ತಿದೆ. ಇದು ದುರದ್ದೇಶ ಹಾಗೂ ರಾಜಕೀಯ ಪ್ರೇರಿತವಾಗಿ ದಾಖಲಿಸಿರುವ ಪ್ರಕರಣ ಎಂದು ಕಿಡಿಕಾರಿದರು.
ನಾನು ಮುಖ್ಯಮಂತ್ರಿಯಾಗಿರುವುದಕ್ಕೆ ಗುರಿ ಮಾಡಿದ್ದಾರೆ. ತಮ ಪತ್ನಿ ಪಾರ್ವತಿ ಅವರಿಗೆ ಜಾರಿ ನಿರ್ದೇಶನಾಲಯ ನೀಡಿರುವ ನೋಟಿಸನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೇಲನವಿ ಸಲ್ಲಿಸಿದ್ದೇವೆ. ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ನನ್ನ ವಿರುದ್ಧ ಬೇರೆ ಏನೂ ಇಲ್ಲದಿದ್ದ ಕಾರಣಕ್ಕೆ ದುರುದ್ದೇಶಪೂರಕವಾಗಿ ಮುಡಾ ವಿಚಾರದಲ್ಲಿ ಸುಳ್ಳು ಮಾಹಿತಿ ಹರಡಿಸಲಾಗುತ್ತಿದೆ ಎಂದು ಟೀಕಿಸಿದರು.
ರಾಜ್ಯದ ಮುಖ್ಯಮಂತ್ರಿ ಹುದ್ದೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ. ತಮ ಪುತ್ರ ಯತೀಂದ್ರ ಹೇಳಿರುವುದಕ್ಕೆ ಮತ್ತೆ ಚರ್ಚೆ ಹುಟ್ಟುಹಾಕಬೇಡಿ ಎಂದರು.
ಒಂದಿಬ್ಬರು ಸಚಿವರು ಭೇಟಿಯಾಗಿ ಪರಸ್ಪರ ಚರ್ಚೆ ನಡೆಸಿದರೆ ಅದನ್ನು ಬೇರೆ ರೀತಿಯಲ್ಲಿ ಊಹೆ ಮಾಡಿ ಸುದ್ದಿ ಮಾಡುವುದು ಸರಿಯಲ್ಲ. ಯಾರಾದರೂ ಸಭೆ ಮಾಡಿದರೆ, ಊಟ ಮಾಡಿದರೆ ಅದು ತಪ್ಪಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್, ಇತರ ಸಚಿವರು ಸೇರಿರುವ ಸಭೆಯ ಕುರಿತು ಪ್ರತಿಕ್ರಿಯಿಸಿದರು.