ಮೈಸೂರು,ಡಿ.14- ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50ರ ಅನುಪಾತದಲ್ಲಿ ಅಕ್ರಮವಾಗಿ ನಿವೇಶನ ಪಡೆದ ಎಲ್ಲರಿಗೂ ತಕ್ಕ ಶಿಕ್ಷೆಯಾಗಬೇಕು. ಪ್ರಾಧಿಕಾರ ತನ್ನ ಮೂಲ ಉದ್ದೇಶಕ್ಕನುಗುಣವಾಗಿ ಕೆಲಸ ಮಾಡಬೇಕು ಎಂದು ದೂರುದಾರರಾದ ಸ್ನೇಹಮಯಿ ಕೃಷ್ಣ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಮಾತ್ರ ಹೋರಾಟ ನಡೆಸುತ್ತಿಲ್ಲ. ಮುಡಾ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವಾಗಿ ಉಳಿದಿಲ್ಲ, ಪ್ರಭಾವಿಗಳ ಅಭಿವೃದ್ಧಿ ಪ್ರಾಧಿಕಾರವಾಗಿದೆ. ಎಲ್ಲಾ ಪ್ರಭಾವಿಗಳು ಅಕ್ರಮ ಹಣ ಸಂಪಾದನೆಗೆ ಮುಡಾವನ್ನು ಖಜಾನೆಯಂತೆ ಬಳಸಿಕೊಂಡಿದ್ದಾರೆ ಎಂದು ದೂರಿದರು.
ಮೈಸೂರು ಮಹಾನಗರ ಪಾಲಿಕೆಯ ಸದಸ್ಯ ಹಾಗೂ ಬಿಜೆಪಿ ಮುಖಂಡ ಎಂ.ಸಿ.ರಮೇಶ್ ಅವರು ಸುಳ್ಳು ದಾಖಲೆ ಸೃಷ್ಟಿಸಿ 50:50 ರ ಅನುಪಾತದಲ್ಲಿ ನಿವೇಶನ ಪಡೆದುಕೊಂಡಿದ್ದಾರೆ. ಬಸವನಹಳ್ಳಿಯ ಸರ್ವೆ ನಂ. 126/1 ರ ಜಮೀನಿಗೆ ತಮ ಬಳಿ ಜಿಪಿಎ ಇದೆ ಎಂದು ಹೇಳಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ವಾಸ್ತವವಾಗಿ ಈ ಜಮೀನಿನ ವ್ಯಾಜ್ಯ ನ್ಯಾಯಾಲಯದಲ್ಲಿದ್ದು ಬಗೆಹರಿದಿಲ್ಲ.
ಮೇಲಾಗಿ ಭೂಸ್ವಾಧೀನಗೊಂಡಿದೆ ಎಂದು ಹೇಳಲಾದ ಜಮೀನು ಸರ್ವೆ ನಂ 126/1 ಅಥವಾ 126/4 ಕ್ಕೆ ಸೇರಿದೆಯೇ ಎಂಬುದು ಗೊಂದಲಕಾರಿಯಾಗಿದೆ. ಆದರೂ ನಿವೇಶನ ಪಡೆದುಕೊಂಡಿದ್ದಾರೆ ಎಂದು ದೂರಿದ್ದಾರೆ.
ಈ ಕುರಿತು ಆದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. ಇದರ ಸಂಪೂರ್ಣ ತನಿಖೆಯಾಗಬೇಕು. ಜೆಡಿಎಸ್-ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷದವರು ತಪ್ಪು ಮಾಡಿದ್ದರೂ ಎಲ್ಲರಿಗೂ ಶಿಕ್ಷೆಯಾಗಬೇಕು. ಆಗ ಮಾತ್ರ ನಗರಾಭಿವೃದ್ಧಿ ಪ್ರಾಧಿಕಾರ ಜನರಿಗೆ ಸೇವೆ ಮಾಡಲು ಸೂಕ್ತವಾಗುತ್ತದೆ ಎಂದರು.ತಾವು ದೂರು ದಾಖಲಿಸಿ ಕಾನೂನಿನ ಹೋರಾಟ ಆರಂಭಿಸಿದ ಬಳಿಕ ಸಾಕಷ್ಟು ಪ್ರಕರಣಗಳು ಹೊರಬಂದಿವೆ. ಆಘಾತಕಾರಿ ದಾಖಲೆಗಳು ಲಭ್ಯವಾಗುತ್ತಿವೆ ಎಂದು ಹೇಳಿದರು.