Tuesday, September 17, 2024
Homeರಾಜ್ಯನಾಳೆ ಸದನದಲ್ಲಿ ಮುಡಾ ಪ್ರತಿಧ್ವನಿ

ನಾಳೆ ಸದನದಲ್ಲಿ ಮುಡಾ ಪ್ರತಿಧ್ವನಿ

ಬೆಂಗಳೂರು,ಜು.21- ಕಳೆದ ವಾರವಿಡೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ವಿಧಾನಸಭೆಯ ಕಲಾಪವನ್ನು ಆಪೋಶನ ತೆಗೆದುಕೊಂಡಿದ್ದು, ನಾಳೆಯಿಂದ ನಡೆಯುವ 2ನೇ ವಾರದ ಕಲಾಪದಲ್ಲಿ ಮುಡಾ ಹಂಚಿಕೆ ಹಗರಣವು ಸೇರ್ಪಡೆಯಾಗುವ ಸಾಧ್ಯತೆ ಇದೆ.
ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ಅಕ್ರಮವಾಗಿ 89.60 ಕೋಟಿ ರೂ. ವರ್ಗಾವಣೆಯಲ್ಲಿ ಎಸ್‍ಐಟಿ, ಸಿಬಿಐ, ಜಾರಿನಿರ್ದೇಶನಾಲಯಗಳು ತನಿಖೆ ನಡೆಸುತ್ತಿವೆ. ಹಗರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ನಾಗೇಂದ್ರ ಆದಿಯಾಗಿ ಎಲ್ಲಾ ಪ್ರಮುಖ ಆರೋಪಿಗಳ ಬಂಧನವಾಗಿದೆ.

ವಿರೋಧ ಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ರಾಜೀನಾಮೆನೀಡಬೇಕೆಂದು ಒತ್ತಾಯಿಸಿ ವಿಧಾನಸಭೆಯಲ್ಲಿ 2 ದಿನಗಳ ಕಾಲ ಧರಣಿ ನಡೆಸಿದೆ. ಒಂದು ವಾರದ ನಡೆದ ಚರ್ಚೆಗೆ ಸಿದ್ದರಾಮಯ್ಯನವರು ಲಿಖಿತವಾಗಿ ಉತ್ತರ ನೀಡಿ, ಯೂನಿಯನ್ ಬ್ಯಾಂಕ್ ರಾಷ್ಟ್ರೀಕೃತವಾಗಿದ್ದು, ಅಲ್ಲಿ ಹಣದ ಕಳ್ಳತನ ನಡೆದಿದೆ. ಇದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಣೆ ಹೊರುತ್ತಾರೆಯೇ ಎಂದು ತಿರುಗೇಟು ನೀಡುವ ಮೂಲಕ ವಿರೋಧ ಪಕ್ಷಗಳಿಗೆ ಸಡ್ಡು ಹೊಡೆದಿದ್ದಾರೆ.

ಜೊತೆಗೆ ಬಿಜೆಪಿ ಅವಧಿಯಲ್ಲಿ ನಡೆದ 21 ಹಗರಣಗಳ ಪಟ್ಟಿಯನ್ನು ಮುಂದಿಟ್ಟು ತಿರುಗೇಟು ನೀಡಿದ್ದಾರೆ. ಬಹುತೇಕ ಈ ವಿಚಾರ ಮುಗಿದ ಅಧ್ಯಾಯದಂತಾಗಿದೆ. ಆದರೂ ವಿರೋಧ ಪಕ್ಷಗಳು ಸೋಮವಾರ ಕಲಾಪದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿಚಾರವನ್ನೇ ಮುಂದುವರೆಸುತ್ತಾರೆಯೇ ಅಥವಾ ಹೊಸ ವಿಚಾರಗಳತ್ತ ಗಮನಹರಿಸುತ್ತಾರೆಯೇ ಎಂಬುದು ಕಾದು ನೋಡಬೇಕಿದೆ.

ಮೂಲಗಳ ಪ್ರಕಾರ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮುಡಾ ಹಗರಣದ ಚರ್ಚೆಗೆ ಆಸಕ್ತಿ ವಹಿಸಿವೆ. ವಿರೋಧ ಪಕ್ಷಗಳು ನಿಲುವಳಿ ಸೂಚನೆಯಡಿ ಈ ವಿಚಾರವನ್ನು ಪ್ರಸ್ತಾಪಿಸಿದರೆ ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿರುವುದರಿಂದ ಚರ್ಚೆಗೆ ಅವಕಾಶ ಇಲ್ಲ ಎಂದು ನಿಲುವಳಿಯನ್ನು ತಳ್ಳಿ ಹಾಕುವ ಸಾಧ್ಯತೆಗಳಿವೆ.
ಸಾರ್ವಜನಿಕ ಮಹತ್ವದ ವಿಚಾರವನ್ನಾಗಿ ಚರ್ಚೆಗೆ ಅವಕಾಶ ನೀಡುವ ಪರಿಸ್ಥಿತಿಗಳು ಕ್ಷೀಣವಾಗಿವೆ. ವಿಪಕ್ಷಗಳು ಕಳೆದ ವಾರ ಪೂರ್ತಿ ನಿಗಮದ ಹಗರಣ ಬಿಟ್ಟು ಬೇರೆ ಯಾವುದೇ ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಿಲ್ಲ.
ಮುಡಾ ಹಗರಣವೊಂದು ಮುನ್ನಲೆಗೆ ಬಂದರೆ ಮಿಕ್ಕಾ ಎಲ್ಲಾ ವಿಚಾರಗಳು ನೇಪಥ್ಯಕ್ಕೆ ಸರಿಯುವ ಆತಂಕವಿದೆ. ರಾಜ್ಯದಲ್ಲಿ ವ್ಯಾಪಕ ಮಳೆಯಿಂದಾಗಿ ನೆರೆ ಪರಿಸ್ಥಿತಿ ಉಂಟಾಗಿದೆ. ಸುಮಾರು 1 ಸಾವಿರಕ್ಕೂ ಹೆಚ್ಚು ಕಡೆ ಭೂ ಕುಸಿತಗಳಾಗಿವೆ.

ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿವೆ. ರಸ್ತೆ, ಸೇತುವೆ, ವಿದ್ಯುತ್ ಕಂಬ, ಶಾಲಾ ಕಟ್ಟಡಗಳು ಹಾನಿಗೊಳಗಾಗಿವೆ. ಹತ್ತಕ್ಕೂ ಹೆಚ್ಚು ಜೀವಹಾನಿಯಾಗಿದೆ. ಜಾನುವಾರುಗಳ ಹಾನಿಯ ಬಗ್ಗೆ ಸಮೀಕ್ಷೆ ನಡೆಯುತ್ತಿವೆ. ಜನರಸಾಮಾನ್ಯರ ಮನೆ ಕುಸಿದು ಬದುಕು ಬೀದಿಗೆ ಬಿದ್ದಿದೆ. ಪರಿಸ್ಥಿತಿ ಗಂಭೀರವಾಗಿದ್ದರೂ ವಿಧಾನಸಭೆಯಲ್ಲಿ ಈ ಬಗ್ಗೆ ಹೆಚ್ಚಿನ ಚರ್ಚೆಗಳಾಗಿಲ್ಲ. ಉತ್ತರಕನ್ನಡ ಜಿಲ್ಲೆ ಶಿರೂರಿನಲ್ಲಿ ಭೂಕುಸಿತವಾಗಿ ಹೆದ್ದಾರಿ ಬಂದಾಗಿದ್ದು, ಏಳೆಂಟು ಮಂದಿ ಜೀವ ಹಾನಿಯಾಗಿದೆ. ಈ ವಿಚಾರವನ್ನು ಆಡಳಿತ ಪಕ್ಷದ ಶಾಸಕರೇ ಪ್ರಸ್ತಾಪಿಸಿದ್ದರು.

ವಿರೋಧ ಪಕ್ಷಗಳು ಜನಸಾಮಾನ್ಯರನ್ನು ಕಾಡುತ್ತಿರುವ ಗಂಭೀರ ವಿಚಾರಗಳ ಬಗ್ಗೆ ಚಕಾರ ಎತ್ತದೆ ರಾಜಕೀಯ ಕಾರಣಕ್ಕಾಗಿ ವಾಲ್ಮೀಕಿ ನಿಗಮ ಹಾಗೂ ಮುಡಾದಂತಹ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಆಡಳಿತ ಪಕ್ಷ ತಿರುಗೇಟು ನೀಡುತ್ತಿದೆ. ಒಟ್ಟಿನಲ್ಲಿ ನಾಳೆಯಿಂದ ನಡೆಯುವ ವಿಧಾನಮಂಡಲ ಕಲಾಪ ಮತ್ತಷ್ಟು ಕಾವೇರುವ ಸಾಧ್ಯತೆ ಇದೆ. ಗಲಾಟೆ, ಗದ್ದಲದ ನಡುವೆ ಕೆಲ ಮಸೂದೆಗಳು ಚರ್ಚೆಯಾಗದೆ ಅಂಗೀಕಾರಗೊಳ್ಳುವ ದುಗುಡವೂ ಕಾಡುತ್ತಿದೆ.

RELATED ARTICLES

Latest News