ಬೆಂಗಳೂರು,ಜು.24- ಮೈಸೂರು ನಗರಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ವಿರುದ್ಧ ಪ್ರತಿಪಕ್ಷ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದೆ. ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಯ ಬಳಿಕ ಮುಡಾ ಅಕ್ರಮ ಪ್ರಕರಣ ಯಾವ ಹಂತಕ್ಕೆ ಬರಲಿದೆ ಎಂದು ನೋಡಿಕೊಂಡು ಪಾದಯಾತ್ರೆ ನಡೆಸಲು ಬಿಜೆಪಿ ರಾಜ್ಯ ನಾಯಕರು ತೀರ್ಮಾನಿಸಿದ್ದು, ಒಂದು ವೇಳೆ ಸಿಎಂ ರಾಜೀನಾಮೆ ಕೊಡದಿದ್ದರೆ ಪಾದಯಾತ್ರೆ ಮೂಲಕ ಮೈಸೂರಿಗೆ ತೆರಳಿ ಸಿಎಂ ರಾಜೀನಾಮೆಗೆ ಆಗ್ರಹಿಸಲಿದ್ದಾರೆ.
ಅಧಿವೇಶನ ಬಳಿಕ ಜು. 29ರಂದು 120 ಕಿ.ಮೀ. ಪಾದಯಾತ್ರೆ ನಡೆಸಲು ಬಿಜೆಪಿ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಸುನೀಲ್ ಕುಮಾರ್ ಸೇರಿ ವಿವಿಧ ನಾಯಕರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ. ಇನ್ನು ಪಾದಯಾತ್ರೆ ವೇಳೆ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಸಾಗದೆ, ಚನ್ನಪಟ್ಟಣ, ಮಂಡ್ಯ ಒಳರಸ್ತೆಯಲ್ಲಿ ಪಾದಯಾತ್ರೆ ಮೂಲಕ ತೆರಳಿ ಜನರ ಗಮನ ಸೆಳೆಯಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಿ ಅವರಿಗೆ ಅರ್ಹತೆಗೂ ಮೀರಿ ಎರಡು ಕೋಟಿ ರೂ. ಬೆಲೆಬಾಳುವ 14 ನಿವೇಶನಗಳನ್ನು ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ ಹಂಚಿಕೆ ಮಾಡಲಾಗಿದೆ. ಅರ್ಹತೆ ಪ್ರಕಾರ ಪಾರ್ವತಿ ಅವರಿಗೆ ನೀಡಬೇಕಾಗಿದ್ದು ಕೇವಲ ಎರಡು ಜಮೀನು ಮಾತ್ರ. ಆದರೆ 14 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಗಂಭೀರ ಆರೋಪ ಮಾಡುತ್ತಿದೆ.
ಈ ಆರೋಪಕ್ಕೆ ಸಿದ್ದರಾಮಯ್ಯ, ನಿಯಮದ ಪ್ರಕಾರವೇ ಎಲ್ಲರಿಗೂ ಹಂಚಿಕೆಯಾಗುವಂತೆ ಮುಡಾದಿಂದ ಸೈಟ್ ಹಂಚಿಕೆಯಾಗಿದೆ. ನಾವು ಯಾವುದೇ ತಪ್ಪು ಮಾಡಿಲ್ಲ. ನಾವು ಅಲ್ಲೇ ನಿವೇಶನ ನೀಡಬೇಕೆಂದು ಕೇಳಿಕೊಂಡಿಲ್ಲ. ಮುಡಾದವರು ಹಂಚಿಕೆ ಮಾಡಿದ್ದಾರೆ. ಯಾವುದೇ ಅಕ್ರಮ ನಡೆಸಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರು ಟು ಬಳ್ಳಾರಿ ಪಾದಯಾತ್ರೆ :
2010ರ ಜುಲೈನಲ್ಲಿ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿ ರೆಡ್ಡಿ ಸಹೋದರರ ವಿರುದ್ಧ ದಿನೇಶ್ ಗುಂಡೂರಾವ್ ಅಕ್ರಮ ಗಣಿಗಾರಿಕೆ ಆರೋಪ ಮಾಡಿದ್ದರು. ಇದರಿಂದ ಸದನದಲ್ಲಿ ಮಾತಿನ ಚಕಮಕಿ ಆರಂಭವಾಯಿತು. ಈ ವೇಳೆ ಅಂದಿನ ಬಿಜೆಪಿ ಶಾಸಕ ಟಿ.ಎಸ್.ಸುರೇಶ್ ಬಾಬು ಗುಂಡೂರಾವ್ ವಿರುದ್ಧ ಹರಿಹಾಯ್ದರು. ಬಳ್ಳಾರಿಗೆ ಬಾ ನೋಡಿಕೊಳ್ಳುತ್ತೇವೆ ಎಂದು ಸವಾಲು ಎಸೆದಿದ್ದರು.
ಇದರಿಂದ ಸದನ ಮತ್ತಷ್ಟು ಗದ್ದಲಮಯವಾಯಿತು. ಬಳ್ಳಾರಿ ಶಾಸಕರು ತೋಳೇರಿಸಿಕೊಂಡು ವಿಪಕ್ಷ ನಾಯಕರ ಬಳಿ ಹೊರಟರು. ಇವರಲ್ಲಿ ಮೂವರು ರೆಡ್ಡಿ ಸಹೋದರರೂ ಇದ್ದರು. ಆಗ ಸಿಟ್ಟಿಗೆದ್ದ ಸಿದ್ದರಾಮಯ್ಯ ತೋಳು ತಟ್ಟಿ ಬಳ್ಳಾರಿಗೆ ಬರುತ್ತೇವೆ, ರೆಡ್ಡಿ ಮನೆ ಮುಂದೆಯೇ ಮೆರವಣಿಗೆ ಮಾಡುತ್ತೇವೆ ಎಂದು ಅಬ್ಬರಿಸಿ ಸವಾಲೆಸೆದಿದ್ದರು.
ಅನಂತರ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿದರು. ನಂತರ ನಡೆದಿದೆಲ್ಲ ಇತಿಹಾಸ. ಇದೀಗ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದಲ್ಲಿ ಭಾಗಿಯಾದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಬೆಂಗಳೂರು ಟು ಬಳ್ಳಾರಿ ಮಾದರಿಯಲ್ಲಿ ಬೆಂಗಳೂರು ಟು ಮೈಸೂರಿಗೆ ಪಾದಯಾತ್ರೆ ನಡೆಸಲು ಚಿಂತನೆ ನಡೆಸಿದ್ದಾರೆ.