Friday, November 22, 2024
Homeರಾಜ್ಯಮುಡಾ ಹಗರಣ : ದೂರುದಾರ ಸ್ನೇಹಮಯಿ ಕೃಷ್ಣಗೆ ಇಡಿ ನೋಟಿಸ್‌‍

ಮುಡಾ ಹಗರಣ : ದೂರುದಾರ ಸ್ನೇಹಮಯಿ ಕೃಷ್ಣಗೆ ಇಡಿ ನೋಟಿಸ್‌‍

Muda scam

ಬೆಂಗಳೂರು,ಅ.2- ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಮೈಸೂರಿನ ಸ್ನೇಹಮಯಿ ಕೃಷ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೋಟಿಸ್‌‍ ನೀಡಿದ್ದಾರೆ.

ಮೊದಲ ಬಾರಿಗೆ ಅಧಿಕೃತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಪ್ರಕರಣದ ಸಾಕ್ಷ್ಯಾಧಾರ ಮತ್ತು ದಾಖಲೆ ಸಲ್ಲಿಸುವಂತೆ ಇ.ಡಿ ಸಮನ್‌್ಸ ನೀಡಿದೆ. ಈ ಮೂಲಕ ಇ.ಡಿ ಅಧಿಕೃತವಾಗಿ ಮುಡಾ ಪ್ರಕರಣದಲ್ಲಿ ಪ್ರವೇಶ ಮಾಡಿದಂತಾಗಿದೆ.

ನಾಳೆ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಶಾಂತಿನಗರದಲ್ಲಿರುವ ನಿರ್ದೇಶನಾಲಯದ ಕಚೇರಿಗೆ ಮೂಡಾ ಅಕ್ರಮಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳ ಸಮೇತ ಬರುವಂತೆ ಸೂಚನೆ ನೀಡಲಾಗಿದೆ.

ಕಳೆದ ಶನಿವಾರವಷ್ಟೇ ಸ್ನೇಹಮಯಿ ಕೃಷ್ಣ ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಭಾಮೈದ ಮಲ್ಲಿಕಾರ್ಜುನ ಸ್ವಾಮಿ, ಭೂ ಮಾಲೀಕ ದೇವರಾಜು ವಿರುದ್ಧ ಇ.ಡಿಗೆ ದೂರು ನೀಡಿದ್ದರು. ಸೋಮವಾರ ಇ.ಡಿ ಇಸಿಐಆರ್‌ ದಾಖಲಿಸಿಕೊಂಡಿದೆ.
ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಯಾದ ಜಾರಿನಿರ್ದೇಶನಾಲಯವು ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಸಿಐಆರ್‌ ದಾಖಲಿಸಿಕೊಂಡಿದೆ.

ಒಂದು ಕಡೆ ಲೋಕಾಯುಕ್ತ ಪೊಲೀಸರು ಈಗಾಗಲೇ ಅವರ ವಿರುದ್ದ ಎಫ್‌ಐಆರ್‌ ದಾಖಲಿಸಿದ್ದರೂ, ಜಾರಿ ನಿರ್ದೇಶನಾಲಯ ಸಿದ್ದರಾಮಯ್ಯ ವಿರುದ್ದ ಇಸಿಐಆರ್‌ ದಾಖಲಿಸಿಕೊಂಡಿದೆ.

ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ, ಅವರ ಭಾವಮೈದುನ ಮಲ್ಲಿಕಾರ್ಜುನಸ್ವಾಮಿ ಮತ್ತು ಜಾಗವನ್ನು ಸಿಎಂ ಭಾವನಿಗೆ ಮಾರಾಟ ಮಾಡಿದ್ದ ದೇವರಾಜು ವಿರುದ್ದ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.ಇಡಿ ತನಿಖಾ ಸಂಸ್ಥೆಯು ತನ್ನ ಇಸಿಐಆರ್‌ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪೊಲೀಸ್‌‍ ಎಫ್‌ಐಆರ್‌ಗೆ ಸಮಾನವಾದ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್‌ಗಳನ್ನು ಹಾಕಿರುವುದು ಗಮನಿಸಬೇಕಾದ ವಿಚಾರವಾಗಿದೆ.

ಇ.ಡಿ ತನ್ನ ಕಾರ್ಯವಿಧಾನದ ಪ್ರಕಾರ, ಆರೋಪಿ ಸ್ಥಾನದಲ್ಲಿ ಇರುವವರನ್ನು ವಿಚಾರಣೆಗೆ ಕರೆಯಲು ಮತ್ತು ಅವಶ್ಯಕತೆ ಬಿದ್ದಲ್ಲಿ ಅವರ ಆಸ್ತಿಯನ್ನು ತನಿಖಾ ಅವಧಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲು ಇಸಿಐಆರ್‌, ಮೊದಲಿಗೆ ದಾಖಲಿಸಿಕೊಳ್ಳುತ್ತದೆ.

ಎನ್ಫೋರ್ಸ್‌ಮೆಂಟ್‌ ಕೇಸ್‌‍ ಇನ್ಫಾರ್ಮೇಶನ್‌ ರಿಪೋರ್ಟ್‌, ಇದು ಪೊಲೀಸ್‌‍ ಭಾಷೆಯಲ್ಲಿ ಎಫ್‌ಐಆರ್‌ ಇದ್ದ ಹಾಗೇ. ಜಾರಿ ನಿರ್ದೇಶನಾಲಯವು ಯಾರನ್ನಾದಾರೂ ವಿಚಾರಣೆಗೆ ಅಥವಾ ಬಂಧಿಸುವ ಮುನ್ನ ಅಥವಾ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು (ತನಿಖೆಯ ವೇಳೆ) ಹಾಕುವ ಮುನ್ನ ಇಸಿಐಆರ್‌ ಅನ್ನು ದಾಖಲಿಸಿಕೊಳ್ಳುತ್ತದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002ರ ಕಾಯ್ದೆಯಡಿ, ಇಸಿಐಆರ್‌ ಎನ್ನುವುದು ಶಾಸನಬದ್ಧವಲ್ಲದ ದಾಖಲೆ/ಕ್ರಮ ಎಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಈ ಕಾಯ್ದೆಯಲ್ಲಿ ಇದರ ನೋಂದಣಿಯ ಅಗತ್ಯವಿಲ್ಲ. ಇನ್ನೊಂದು ತನಿಖಾ ಸಂಸ್ಥೆಯು ಈಗಾಗಲೇ ಎಫ್‌ಐಆರ್‌ ದಾಖಲಿಸಿದ್ದರೂ, ಇಡಿ ತನ್ನ ಇಸಿಐಆರ್‌ ಅನ್ನು ರದ್ದುಗೊಳಿಸಬೇಕಾಗಿಲ್ಲ.

ಇಸಿಐಆರ್‌ ಎನ್ನುವುದು ಯಾವುದೇ ಆರೋಪಿಯನ್ನು ವಿಚಾರಣೆ/ಬಂಧನ ಮಾಡುವಲ್ಲಿನ ಮೊದಲ ಹೆಜ್ಜೆಯಾಗಿದೆ. ಪಿಎಂಎಲ್‌ಎ ಕಾಯ್ದೆಯಲ್ಲಿ ಇಸಿಐಆರ್‌ ಬಗ್ಗೆ ಉಲ್ಲೇಖವಿಲ್ಲದಿದ್ದರೂ, ಇಡಿ ಇದನ್ನು ದಾಖಲಿಸುವ ಪದ್ಧತಿಯನ್ನು ಪಾಲಿಸಿಕೊಂಡು ಬರುತ್ತಿದೆ.

ಇಸಿಆರ್‌ ಕಾಯ್ದೆಯಡಿ ಎಫ್‌ಐಆರ್‌ ದಾಖಲಾಗಿದ್ದು, ಈ ಪೊಲೀಸರ ಎಫ್‌ಐಆರ್‌ಗೆ ಸರಿಸಮಾನವಾಗಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ತನಿಖೆ ಹಂತದಲ್ಲಿ ಆಸ್ತಿಗಳನ್ನು ಸೀಜ್‌ ಮಾಡುವ ಅಧಿಕಾರವಿದೆ.

ಈ ಸೆಕ್ಷನ್‌ ಅಡಿ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ ಅಧಿಕಾರವಿದೆ. ಇದಕ್ಕೆ ಯಾವುದೇ ನ್ಯಾಯಾಲಯದ ಅದೇಶ ಪಡೆಯಬೇಕು ಎಂಬ ನಿಯಮ ಕೂಡ ಇಲ್ಲ. ಸಂಬಂಧಪಟ್ಟ ಆಸ್ತಿಗಾಗಿ ಮನಿಲಾಂಡರಿಂಗ್‌ (ಹಣಕಾಸು ಅಕ್ರಮ ವರ್ಗಾವಣೆ) ನಡೆದಿದೆ ಎಂದು ತನಿಖಾಧಿಕಾರಿಗೆ ಅನಿಸಿದರೆ 180 ದಿನಗಳವರೆಗೂ ಆಸ್ತಿಯನ್ನು ಮುಟ್ಟಗೋಲು ಹಾಕಿಕೊಳ್ಳಬಹುದಾಗಿದೆ.

ಹೀಗಾಗಿ ಒಂದು ವೇಳೆ ಸಿಎಂ ಪತ್ನಿ ಈ ಸೈಟ್‌ಗಳನ್ನು ವಾಪಸ್‌‍ ಕೊಡದೇ ಇದ್ದಲ್ಲಿ ಜಾರಿ ನಿರ್ದೇಶನಾಲಯ ಯಾವುದೇ ಕ್ಷಣದಲ್ಲಿ ಮುಟ್ಟಗೋಲು ಹಾಕಿಕೊಳ್ಳುವ ಸಾಧ್ಯತೆ ಇದೆ. ಸೈಟ್‌ಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡರೆ ಸಿದ್ದರಾಮಯ್ಯಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇತ್ತು. ಇದಕ್ಕಾಗಿಯೇ ಕೂಡಲೆ ಸೈಟ್‌ಗಳನ್ನು ವಾಪಸ್‌‍ ಕೊಡುವ ನಿರ್ಧಾರ ಮಾಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಸುಪ್ರೀಂಕೋರ್ಟ್‌ ಆದೇಶ ಏನು?:
ವಿಜಯ್‌ ಮದನ್‌ ಲಾಲ್‌ ಎನ್ನುವ ಪ್ರಕರಣವೊಂದರಲ್ಲಿ ಈಗಾಗಲೇ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ, ಕೇಂದ್ರ ತನಿಖಾ ಸಂಸ್ಥೆಗಳು ಆ ಎಫ್‌ಐಆರ್‌ ಅಡಿಯಲ್ಲೇ ತಮ ಕೇಸಿನ ವಿಚಾರಣೆ ನಡೆಸುವಂತಿಲ್ಲ, ಬದಲಿಗೆ ಹೊಸದಾಗಿ ಎಫ್‌ಐಆರ್‌ ದಾಖಲಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತ್ತು.

ಜೊತೆಗೆ ಇಡಿಯು ಇಸಿಐಆರ್‌ ಮಾಹಿತಿಯನ್ನು ಆರೋಪಿಗೆ ನೀಡುವ / ಹಂಚಿಕೊಳ್ಳುವ ಅವಶ್ಯಕತೆಯಿಲ್ಲ ಮತ್ತು ಬಂಧನದ ನಂತರ ಮ್ಯಾಜಿಸ್ಟ್ರೇಟರ್‌ ಮುಂದೆ ಹಾಜರು ಪಡಿಸುವ ಅವಶ್ಯಕತೆಯಿಲ್ಲ.

ಇನ್ನೊಂದು ಆದೇಶದ ಪ್ರಕಾರ, ಇತರ ತನಿಖಾ ಸಂಸ್ಥೆಗಳು ಈಗಾಗಲೇ ಎಫ್‌ಐಆರ್‌ ದಾಖಲಿಸಿದ್ದ ಸಂದರ್ಭದಲ್ಲಿ ಮತ್ತೊಂದು ತನಿಖಾ ಸಂಸ್ಥೆ ಹೊಸದಾಗಿ ಮತ್ತೊಂದು ಎಫ್‌ಐಆರ್‌ ಗೆ ಸಮನಾದ ಕ್ರಮವನ್ನು ತೆಗೆದುಕೊಳ್ಳಬಾರದು ಎಂದು ಮದ್ರಾಸ್‌‍ ಹೈಕೋರ್ಟ್‌ ನಲ್ಲಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಇದರ ವಾದ-ಪ್ರತಿವಾದದ ನಂತರ ನ್ಯಾಯಮೂರ್ತಿ ಎಸ್‌‍.ಎಂ.ಸುಬ್ರಹಣ್ಯಂ ಮತ್ತು ವಿ.ಶಿವಘಾನಂ ಅವರಿದ್ದ ದ್ವಿಸದಸ್ಯ ಪೀಠ ಇದಕ್ಕೆ ತಡೆ ನೀಡಲು ನಿರಾಕರಿಸಿತ್ತು. ಇದೇ ತಿಂಗಳ ಸೆಪ್ಟಂಬರ್‌ 11ಕ್ಕೆ ಈ ಆದೇಶ ಹೊರಬಿದ್ದಿತ್ತು.

RELATED ARTICLES

Latest News