ಬೆಂಗಳೂರು,ಡಿ.2– ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ)ದ ಅಕ್ರಮ ನಿವೇಶನ ಹಂಚಿಕೆ ಕುರಿತು ತನಿಖೆ ನಡೆಸುತ್ತಿರುವ ಜಾರಿನಿರ್ದೇಶನಾಲಯ(ಇ.ಡಿ) ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಮಂಗಳವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಶಾಂತಿನಗರದಲ್ಲಿರುವ ಇ.ಡಿ ಕಚೇರಿಗೆ ದಾಖಲೆಗಳ ಸಮೇತ ಹಾಜರಾಗುವಂತೆ ಇ.ಡಿ ನೋಟಿಸ್ನಲ್ಲಿ ಸೂಚನೆ ನೀಡಿದೆ.
ಕೆಲ ದಿನಗಳ ಹಿಂದೆ ಮುಡಾದ ಮಾಜಿ ಆಯುಕ್ತ ನಟೇಶ್ ಅವರನ್ನು ವಿಚಾರಣೆ ನಡೆಸಲಾಗಿತ್ತು. ಮುಡಾವು ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಕಾರ್ಯದರ್ಶಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ವಿಧಾನಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆಯ ಕಚೇರಿಗೆ ನೋಟಿಸ್ ಅಂಟಿಸಲಾಗಿದ್ದು, ಮಂಗಳವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚನೆ ಕೊಡಲಾಗಿದೆ.
ಸಚಿವರಿಗೂ ನೋಟಿಸ್:
ಮುಡಾ ಪ್ರಕರಣದಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ನೋಟಿಸ್ ನೀಡಿದ ಬೆನ್ನಲ್ಲೇ ಮುಂದಿನ ದಿನಗಳಲ್ಲಿ ಇ.ಡಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ಗೂ ಶೀಘ್ರದಲ್ಲೇ ನೋಟಿಸ್ ನೀಡುವ ಸಾಧ್ಯತೆ ಇದೆ.
ಸುರೇಶ್ ಅವರು ನಗರಾಭಿವೃದ್ದಿ ಸಚಿವರಾಗಿರುವುದರಿಂದ ಅವರು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಮತ್ತು ಇಡಿ ಅಧಿಕಾರಿಗಳಿಗೆ ಮೂಲ ದಾಖಲೆಗಳು ಪತ್ತೆಯಾಗದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಸದ್ಯದಲ್ಲೇ ಸುರೇಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಇ.ಡಿ ಸಜ್ಜಾಗಿದೆ ಎಂದು ತಿಳಿದುಬಂದಿದೆ. ಭೈರತಿ ಸುರೇಶ್ ವಿಚಾರಣೆ ನಂತರ ಪ್ರಕರಣದ ಮೊದಲ ಆರೋಪಿ ಸಿದ್ದರಾಮಯ್ಯ ಹಾಗೂ 2ನೇ ಆರೋಪಿಯಾಗಿರುವ ಪತ್ನಿ ಪಾರ್ವತಿ ಅವರಿಗೂ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡುವ ಸಂಭವವೂ ಇದೆ.
ಈಗಾಗಲೇ ಪ್ರಕರಣದ 3ನೇ ಆರೋಪಿಯಾಗಿರುವ ಮಲ್ಲಿಕಾರ್ಜುನ ಸ್ವಾಮಿ ಮತ್ತು ಜಮೀನು ಮಾಲೀಕ ದೇವರಾಜು ಅವರನ್ನು ವಿಚಾರಣೆ ನಡೆಸಲಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಮುಡಾ ಆಯುಕ್ತರು, ಮುಡಾ ಅಧ್ಯಕ್ಷರು ಸೇರಿದಂತೆ ಅನೇಕರನ್ನು ವಿಚಾರಣೆಗೊಳಪಡಿಸಿ ಹೇಳಿಕೆಯನ್ನು ಪಡೆಯಲಾಗಿದೆ.