Saturday, January 18, 2025
Homeರಾಜ್ಯಮುಡಾ ಹಗರಣ : 'ಕೋಕನೆಟ್' ಕೋಡ್ ವರ್ಡ್ ಬಳಸಿ ನಡೆಸಿದ ಅಕ್ರಮ ವ್ಯವಹಾರ ಪತ್ತೆಹಚ್ಚಿದ ಇಡಿ

ಮುಡಾ ಹಗರಣ : ‘ಕೋಕನೆಟ್’ ಕೋಡ್ ವರ್ಡ್ ಬಳಸಿ ನಡೆಸಿದ ಅಕ್ರಮ ವ್ಯವಹಾರ ಪತ್ತೆಹಚ್ಚಿದ ಇಡಿ

Muda scam: ED uncovers illegal transactions using 'Coconut' code word

ಬೆಂಗಳೂರು,ಜ.18- ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದವನ್ನ ಸೃಷ್ಟಿಸಿರುವ ತಾವು ಈ ಹಿಂದೆ ಇ.ಡಿ ದಾಳಿಗೆ ಒಳಗಾಗಿದ್ದ ಮೈಸೂರು ಮೂಲದ ಬಿಲ್ಡರ್ ಜಯರಾಮ್ ಎಂಬಾತ ಕೋಕನೆಟ್ ಕೋಡ್ವರ್ಡ್ ಬಳಸಿ ಅಕ್ರಮ ವ್ಯವಹಾರ ನಡೆಸುತ್ತಿದ್ದುದನ್ನು ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿದೆ.

ಮುಡಾದಲ್ಲಿ ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಸಂಬಂಧ 300 ಕೋಟಿ ಮೌಲ್ಯದ 142 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಇ.ಡಿಯು ಪ್ರಕರಣದ ಪ್ರಮುಖ ಕಿಂಗ್ ಪಿನ್ ಎಂದೇ ಹೇಳಲಾಗುತ್ತಿರುವ ಜಯರಾಮ್ ಹೇಗೆ ಅಕ್ರಮಗಳನ್ನು ನಡೆಸಿದ್ದಾನೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಈ ಹಿಂದೆ ಇ.ಡಿ ಪ್ರಕರಣ ಸಂಬಂಧ ಇ.ಡಿ ತನಿಖಾಧಿಕಾರಿಗಳು ಬಿಲ್ಡರ್ ಜಯರಾಮ್ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆ ಸತತ ಮೂರು ದಿನ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

ಇದೀಗ ಇ.ಡಿ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಬಿಲ್ಡರ್ ಜಯರಾಮ್ ಅವರ ಒಂದೊಂದೇ ಅಕ್ರಮಗಳನ್ನು ಬಯಲು ಮಾಡಿದೆ. ದಾಳಿ ಸಂದರ್ಭದಲ್ಲಿ ಅವರ ನಿವಾಸ ಮತ್ತು ಕಚೇರಿಯಲ್ಲಿ ಬೇನಾಮಿ ವಹಿವಾಟು ನಡೆಸಿರುವ ದಾಖಲೆಗಳು ಲಭ್ಯವಾಗಿದೆ ಎಂದು ಇ.ಡಿ ಹೇಳಿದೆ.

ಬಿಲ್ಡರ್ ಜಯರಾಮ್ ಮೈಸೂರಿನಲ್ಲಿ ವಕ್ರತುಂಡ ಗೃಹನಿರ್ಮಾಣ ಸಹಕಾರ ಸಂಘ ಸ್ಥಾಪನೆ ಮಾಡಿ ಇದರ ಮೂಲಕವೇ ತನ್ನೆಲ್ಲ ಅಕ್ರಮ ಚಟುವಟಿಕೆಗಳನ್ನು ನಡೆಸಿರುವುದು ತನಿಖೆಯಿಂದ ಕಂಡುಬಂದಿದೆ.

ಅಂದಹಾಗೆ ಜಯರಾಮ್ನ ಅಕ್ರಮಕ್ಕೆ ಅಂದಿನ ಮುಡಾ ಆಯುಕ್ತ ದಿನೇಶ್ ಹಾಗೂ ಅವರ ಕುಟುಂಬದ ಸದಸ್ಯರು ಕೂಡ ಕೈ ಜೋಡಿಸಿದ್ದರು. ಅವರ ಕುಟುಂಬದವರನ್ನೇ ಗೃಹನಿರ್ಮಾಣ ಸಹಕಾರ ಸಂಘಕ್ಕೆ ನಿರ್ದೇಶಕರನ್ನಾಗಿ ನೇಮಿಸಿಕೊಂಡಿದ್ದು, ಬಹುತೇಕ ಎಲ್ಲಾ ವ್ಯವಹಾರಗಳನ್ನು ಬೇನಾಮಿ ಮೂಲಕ ನಡೆಸಲಾಗಿದೆ.

ಇ.ಡಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ ವೇಳೆ ಮುಡಾ ಆಯುಕ್ತ ದಿನೇಶ್ ಕುಮಾರ್ ಹಾಗೂ ಜಯರಾಮ್ ನಡುವೆ ವಾಟ್ಸಪ್ ಚಾಟಿಂಗ್ ಕೂಡ ಪತ್ತೆ ಮಾಡಿದ್ದಾರೆ. ಈ ವೇಳೆ ಜಯರಾಮ್ ಒಂದು ಕೋಕನಟ್ ಕಳುಹಿಸಿದ್ದೇನೆ ಎಂದು ದಿನೇಶ್ ಅವರ ಗಮನ ಸೆಳೆದಿದ್ದಾರೆ. ಇದಕ್ಕೆ ಪ್ರತಿಯಾಗಿ 50 ಕೋಕನೆಟ್ ಕಳುಹಿಸಿಕೊಟ್ಟಿದ್ದೇನೆ ಎಂದು ಆಯುಕ್ತರು ಹೇಳುತ್ತಾರೆ. ಈ ಕೋಕನೆಟ್ ಕಳ್ಳಾಟವನ್ನು ಬಯಲಿಗೆಳೆಯಲು ಮುಂದಾದಾಗ ಸ್ವತಃ ಇಡಿ ಅಧಿಕಾರಿಗಳು ಒಂದು ಕ್ಷಣ ದಂಗಾಗಿದ್ದಾರೆ.

ಅಂದಹಾಗೆ ಬಿಲ್ಡರ್ ಜಯರಾಮ್ ಮತ್ತು ದಿನೇಶ್ಕುಮಾರ್ ನಡುವೆ ನಡೆಯುತ್ತಿದ್ದ ಸೀಕ್ರೀಟ್ ಕೋಕನೆಟ್ ಕೋಡ್ ವರ್ಡ್ ಬಗ್ಗೆ ತನಿಖೆ ಮಾಡಿದೆ. ಇ.ಡಿ ಹೇಳುವ ಪ್ರಕಾರ ಒಂದು ಕೋಕನೆಟ್ ಎಂದರೆ ಒಂದು ಲಕ್ಷ ರೂ. 50 ಕೋಕನೆಟ್ ಎಂದರೆ 50 ಲಕ್ಷ. 100 ಕೋಕನೆಟ್ ಎಂದರೆ ಒಂದು ಕೋಟಿ ಎಂದರ್ಥ. ಹೊರ ಜಗತ್ತಿಗೆ ಗೊತ್ತಾಗಬಾರದೆಂದು ಈ ರೀತಿ ಕೋಡ್ ವರ್ಡ್ ಬಳಸಿ ಅಕ್ರಮ ವಹಿವಾಟು ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಯರಾಮ್ ತನ್ನ ಡೈರಿಯಲ್ಲಿ ಮುಡಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಲವಾರು ವಿಚಾರಗಳನ್ನು ಬರೆದುಕೊಂಡಿದ್ದ. ಇ.ಡಿಯ ಪ್ರಾಥಮಿಕ ವಿಚಾರಣೆಯಲ್ಲೇ ಹಲವರ ಹೆಸರನ್ನು ಜಯರಾಮ್ ಬಾಯಿಬಿಟ್ಟಿದ್ದಾನೆ. ಜಯರಾಮ್ ಮನೆ ಮೇಲೆ ದಾಳಿ ಆಗುತ್ತಿದ್ದಂತೆ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಪರಾರಿಯಾಗಿದ್ದರು.

ಹಲವು ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ಕೋಕನಟ್ ಹೆಸರಿನಲ್ಲಿ ಜಯರಾಮ್ ಹಣ ಕಳುಹಿಸಿದ್ದ. 15 ವರ್ಷದ ಹಿಂದೆ ಗಾರೆ ಕೆಲಸಕ್ಕೆ ಬಂದಿದ್ದ ಜಯರಾಮ್ ಬೇನಾಮಿಯಿಂದಲೇ ಕೋಟ್ಯಾಧೀಶ್ವರನಾಗಿದ್ದಾನೆ ಎಂದು ಇ.ಡಿ ಆರೋಪಿಸಿದೆ. ದಿನೇಶ್ಕುಮಾರ್ಗೆ ಬಹಳ ಪರಮಾಪ್ತನಾಗಿದ್ದ ಜಯರಾಮ್ 50-50 ಅನುಪಾತದ ನಿವೇಶನ ಹಂಚಿಕೆಯಲ್ಲಿ ನಂ.1 ಫಲಾನುಭವಿ. ಕೇವಲ 50-50 ಸೈಟ್ನಿಂದ ಮಾತ್ರವಲ್ಲದೇ ಬೇನಾಮಿ ಹಣದಿಂದಲೂ ಜಯರಾಮ್ ಈಗ ಶ್ರೀಮಂತನಾಗಿದ್ದಾನೆ ಎಂದು ಇಡಿ ಅಧಿಕಾರಿಗಳು ದೂರಿದ್ದಾರೆ.

RELATED ARTICLES

Latest News